ಭೋಪಾಲ್‌ನ ಐಶ್‌ಬಾಗ್ ಪ್ರದೇಶದಲ್ಲಿ ವಾಹನಗಳು ತಿರುವಲು ಸಾಧ್ಯವೇ ಇಲ್ಲದ 90° ತಿರುವುಳ್ಳ ಮೇಲುರಸ್ತೆಯನ್ನ ನಿರ್ಮಾಣ ಕಾಮಗಾರಿ ಸಂಬಂಧ 7 ಎಂಜಿನಿಯರ್‌ಗಳನ್ನು ಮಧ್ಯಪ್ರದೇಶ ಸರ್ಕಾರ ಅಮಾನತುಗೊಳಿಸಿದೆ. ದೋಷಪೂರಿತ ವಿನ್ಯಾಸದಲ್ಲಿ ಸೇತುವೆ ನಿರ್ಮಿಸಿದ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಅಮಾನತುಗೊಂಡಿದ್ದಾರೆ.
ಐಶ್‌ಬಾಗ್‌ನ ರೈಲ್ವೇ ಹಳಿಗಳನ್ನು ದಾಟಲು ವಾಹನಗಳ ಕಾಯುವಿಕೆಯನ್ನು ತಪ್ಪಿಸಲು ಮೇಲುರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ಸೇತುವೆಯು 90° ಇರುವ ಕಾರಣ, ಇದರಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ. ಸೇತುವೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರದ ವಿರುದ್ಧ ಭಾರೀ ಆಕ್ರೋಶ,ಟ್ರೋಲ್, ಟೀಕೆಗಳು ವ್ಯಕ್ತವಾಗಿದ್ದವು.
ಈ ಬೆನ್ನಲ್ಲೇ, ಲೋಕೋಪಯೋಗಿ ಇಲಾಖೆಯ 7 ಮಂದಿ ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ. “ಐಶ್‌ಬಾಗ್ ಆರ್‌ಒಬಿ ನಿರ್ಮಾಣದಲ್ಲಿ ಗಂಭೀರ ಲೋಪಗಳನ್ನು ನಾವು ಗಮನಿಸಿದ್ದೇವೆ. ತನಿಖೆಗೆ ಆದೇಶಿಸಲಾಗಿದೆ. ವಿಚಾರಣಾ ವರದಿಯ ಆಧಾರದ ಮೇಲೆ, ಎಂಟು ಪಿಡಬ್ಲ್ಯೂಡಿ ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ” ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.
“ಇಲಾಖೆಯ ಇಬ್ಬರು ಮುಖ್ಯ ಎಂಜಿನಿಯರ್‌ಗಳು ಸೇರಿದಂತೆ ಏಳು ಎಂಜಿನಿಯರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ನಿರ್ಮಾಣ ಸಂಸ್ಥೆ ಮತ್ತು ವಿನ್ಯಾಸ ಸಲಹೆಗಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆರ್‌ಒಬಿದಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲು ಸಮಿತಿ ರಚಿಸಲಾಗಿದೆ. ಮಾರ್ಪಾಡುಗಳಾದ ಬಳಿಕವೇ ಆರ್‌ಒಬಿ ಉದ್ಘಾಟನೆಯಾಗಲಿದೆ” ಎಂದು ಅವರು ತಿಳಿಸಿದ್ದಾರೆ.