- ನಿಲ್ದಾಣದ ಒಳಗೆ ಇರುವ ಆಹಾರವನ್ನು ಹೆಚ್ಚಿನ ಹಣ ನೀಡಿ ಎಲ್ಲರೂ ಪಡೆಯಲು ಸಾಧ್ಯವಿಲ್ಲ
- ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವುದಿಲ್ಲ
ರಾಜ್ಯ ರಾಜಧಾನಿ ಬೆಂಗಳೂರಿನ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲೇ ‘ಇಂದಿರಾ ಕ್ಯಾಂಟೀನ್’ ಆರಂಭವಾಗಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ.
“ಶೀಘ್ರದಲ್ಲೇ ಕ್ಯಾಬ್ ಚಾಲಕರು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವವರು ಇಂದಿರಾ ಕ್ಯಾಂಟೀನ್ ಆಹಾರವನ್ನು ಸವಿಯಬಹುದು. ವಿಮಾನ ನಿಲ್ದಾಣವು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೂ, ಹೆಚ್ಚಿನ ಸಂಖ್ಯೆಯ ಜನರು ಈ ಯೋಜನೆಯ ಪ್ರಯೋಜನ ಪಡೆಯುವುದರಿಂದ “ವಿಶೇಷ ಪ್ರಕರಣ” ಎಂದು ಪರಿಗಣಿಸಿ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಬಹುದು” ಎಂದು ಪಾಲಿಕೆ ಹೇಳಿದೆ.
“ನಿಲ್ದಾಣದ ಹೊರಗೆ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಿ. ಏಕೆಂದರೆ, ನಿಲ್ದಾಣದ ಒಳಗೆ ಇರುವ ಮಳಿಗೆಗಳಲ್ಲಿನ ಆಹಾರಕ್ಕಾಗಿ ಎಲ್ಲರೂ ಹೆಚ್ಚಿನ ಹಣವನ್ನು ಪಾವತಿಸಲು ಸಾಧ್ಯವಿಲ್ಲ” ಎಂದು ಖಾಸಗಿ ಕ್ಯಾಬ್ ಯೂನಿಯನ್‌ಗಳ ಪ್ರತಿನಿಧಿಗಳು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, “ವಿಮಾನ ನಿಲ್ದಾಣದ ಹೊರಗೆ ಒಂದು ಅಥವಾ ಎರಡು ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆಯಲಾಗುವುದು” ಎಂದು ತಿಳಿಸಿದ್ದಾರೆ.
“ವಿಮಾನ ನಿಲ್ದಾಣದಲ್ಲಿ ಆಹಾರವನ್ನು ಪಡೆಯಲು ಕ್ಯಾಬ್ ಚಾಲಕರು ಮಾತ್ರವಲ್ಲದೇ, ಅನೇಕ ಜನರು ಸಹ ಇದ್ದಾರೆ. ಈ ಜನರ ಹಿತದೃಷ್ಟಿಯಿಂದ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಅವರಿಗೆ ಕೈಗೆಟಕುವ ದರದಲ್ಲಿ ಆಹಾರವನ್ನು ಒದಗಿಸಲು ಬಯಸುತ್ತೇವೆ. ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಜಾಗವನ್ನು ಮೀಸಲಿಡಲು ಬಿಬಿಎಂಪಿ ಮೂಲಕ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ” ಎಂದು ಸಚಿವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಎಕ್ಸ್‌ಪ್ರೆಸ್ ವೇ: 25 ಅಪಘಾತ ಸ್ಥಳಗಳ ಗುರುತಿಸುವಿಕೆ, ಅಪಘಾತ ತಡೆಗಟ್ಟಲು ಸುರಕ್ಷತಾ ಕ್ರಮ: ಎಡಿಜಿಪಿ
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸಾರಿಗೆ ಸಚಿವರಿಂದ ಯಾವುದೇ ಪತ್ರ ಬಂದಿಲ್ಲ. ಪತ್ರ ಬಂದಾಗ ಆ ಬಗ್ಗೆ ಯೋಜಿಸುತ್ತೇವೆ” ಎಂದು ಹೇಳಿದರು.
“ಪ್ರಸ್ತುತ ನಿಯಮಗಳ ಪ್ರಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಪಾಲಿಕೆ ಮಾತ್ರ ತೆರೆಯಬಹುದು. ಆದರೆ, ವಿಮಾನ ನಿಲ್ದಾಣವು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕ್ಯಾಂಟೀನ್ ನಡೆಸಲು ಪಂಚಾಯಿತಿಗಳಿಗೆ ಅನುಮತಿ ಇಲ್ಲ” ಎಂದು ವಿವರಿಸಿದರು.
“ಭಾರೀ ಜನಸಂದಣಿ ಇರುವ ಪ್ರದೇಶಗಳಲ್ಲಿ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ನಮಗೆ ಅನುಮತಿ ಇದೆ. ಕೆಲವು ಆಸ್ಪತ್ರೆಗಳಲ್ಲಿ ಕ್ಯಾಂಟೀನ್ ಸ್ಥಾಪಿಸಲು ಯೋಜಿಸುತ್ತಿದ್ದೇವೆ. ಅದೇ ರೀತಿ, ವಿಮಾನ ನಿಲ್ದಾಣದಲ್ಲಿ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ನಮಗೆ ಮನವಿ ಬಂದರೆ, ಅದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸ್ಥಾಪಿಸಲಾಗುತ್ತದೆ” ಎಂದು ಅವರು ಹೇಳಿದರು.