ದೆಹಲಿಯಲ್ಲಿ ಸೇವೆಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಂಡಿಸಲು ಹೊರಟಿರುವ ವಿವಾದಾತ್ಮಕ ಮಸೂದೆಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದರು ಬೆಂಬಲ ಸೂಚಿಸಿದ್ದಾರೆ.
ಈ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರವಾಗದಂತೆ ತಡೆಯಲು ವಿಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದ್ದು, ಕೇಂದ್ರ ಸರ್ಕಾರ ಮಸೂದೆ ಮಂಡಿಸಲು ಇದ್ದ ಅಡೆತಡೆಗಳನ್ನು ನಿವಾರಿಸಲು ಸಿದ್ಧವಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಬೆಂಬಲ ನೀಡಿದ್ದಕ್ಕೆ ಎನ್‌ಡಿಎ ಮೈತ್ರಿಕೂಟ ಧನ್ಯವಾದ ತಿಳಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವಿ ವಿಜಯಸಾಯಿ ರೆಡ್ಡಿ, “ನಾವು ಎರಡೂ ವಿಷಯಗಳಲ್ಲಿ ಅಂದರೆ ದೆಹಲಿ ಸಮಸ್ಯೆ ಮಾತ್ರವಲ್ಲದೆ ಮಣಿಪುರ ವಿಷಯದಲ್ಲೂ ಕೇಂದ್ರ ಸರ್ಕಾರದ ಪರವಾಗಿ ಮತ ಚಲಾಯಿಸುತ್ತೇವೆ” ಎಂದು ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.
ರಾಜ್ಯಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಒಂಬತ್ತು ಸದಸ್ಯರಿದ್ದು, ಅವರ ಬೆಂಬಲವು ಮಸೂದೆ ಅಂಗೀಕಾರಕ್ಕೆ ನಿರ್ಣಾಯಕವಾಗಿತ್ತು.
ವೈಎಸ್ಆರ್ ಕಾಂಗ್ರೆಸ್ ಪಕ್ಷವು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ(ಎನ್‌ಡಿಎ) ಬೆಂಬಲವನ್ನು ನೀಡುತ್ತಿದ್ದಂತೆ, ವಿವಾದಾತ್ಮಕ ದೆಹಲಿ ನಿಯಂತ್ರಣ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸುವುದು ಹೆಚ್ಚು ಖಚಿತವಾಗಿದೆ.
123 ಮತಗಳನ್ನು ಒಳಗೊಂಡಿರುವ ಎನ್‌ಡಿಎ, ವಿರೋಧ ಪಕ್ಷದ ಮೈತ್ರಿಕೂಟದ ನಿರೀಕ್ಷಿತ 108 ಮತಗಳ ವಿರುದ್ಧ ಬಹುಮತವನ್ನು ಹೊಂದಿದೆ.
ಒಂಬತ್ತು ಸಂಸದರನ್ನು ಹೊಂದಿರುವ ಬಿಜು ಜನತಾ ದಳವು ಈ ವಿಷಯದಲ್ಲಿ ತನ್ನ ನಿಲುವನ್ನು ಇನ್ನೂ ಅಂತಿಮಗೊಳಿಸಿಲ್ಲ.