ದೇವನಹಳ್ಳಿ ರೈತರ ಭೂಮಿ ಸ್ವಾಧೀನ ಕೈಬಿಡುವಂತೆ ಒತ್ತಾಯಿಸಿ ಜುಲೈ 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ‘ನಾಡ ಉಳಿಸಿ ಸಮಾವೇಶ’ ನಡೆಸಲು ದೇವನಹಳ್ಳಿ ರೈತ ಹೋರಾಟಗಾರರು ನಿರ್ಧರಿಸಿದ್ದಾರೆ.
ರೈತರ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುವುದನ್ನು ವಿರೋಧಿ ‘ಭೂಮಿ ಸತ್ಯಾಗ್ರಹ’ ನಡೆಯುತ್ತಿರುವ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಸಂಯುಕ್ತ ಹೋರಾಟ ಕರ್ನಾಟಕ, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.
ಇದನ್ನು ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ | ಇಂದಿನಿಂದ ಅಹೋರಾತ್ರಿ ಧರಣಿ
“ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವ ದೃಷ್ಟಿಯಿಂದ ಜುಲೈ 4ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ‘ನಾಡ ಉಳಿಸಿ ಸಮಾವೇಶ’ವನ್ನು ಸಂಘಟಿಸಲಾಗುತ್ತಿದೆ. ರಾಜ್ಯದ ಎಲ್ಲಾ ತಾಲ್ಲೂಕುಗಳಿಂದಲೂ ಸಮಾನ ಮನಸ್ಕರು ದೊಡ್ಡ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಸಮಾಗಮಗೊಳ್ಳಲಿದ್ದಾರೆ” ಎಂದು ಮುಖಂಡರುಗಳು ತಿಳಿಸಿದ್ದಾರೆ.
“ಇಡೀ ರಾಜ್ಯ ದೇವನಹಳ್ಳಿಯ ರೈತರ ಪರವಾಗಿ ದನಿ ಎತ್ತಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶ್ವಾಸನೆ ನೀಡಿದ್ದಾರೆ. ಇದಾದ ನಂತರವೂ ದೊಡ್ಡ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರು ಪತ್ರಿಕೆಯಲ್ಲಿ ಲೇಖನ ಬರೆದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರಿ ಜಾಹೀರಾತನ್ನು ನೀಡಿ ಹಳೇ ಪ್ರಸ್ತಾಪವನ್ನೇ ಪುನರುಚ್ಛರಿಸಿದ್ದಾರೆ. ಇದನ್ನು ಗಮನಿಸಿದರೆ ಸರ್ಕಾರ ಕರೆದಿರುವ ಜುಲೈ 4ರ ಸಭೆ ಮತ್ತೊಂದು ಮರೀಚಿಕೆಯಾಗುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಒಂದಲ್ಲಾ ಒಂದು ಕಾರಣ ನೀಡಿ, ನೋಟಿಫೀಕೇಶನ್ ಅನ್ನು ರದ್ದು ಮಾಡದೇ ಮುಂದೂಡಿದಲ್ಲಿ ಪರಿಣಾಮ ಗಂಭೀರವಾಗುವುದು ಶತಸಿದ್ಧ. ಇದನ್ನು ತಡೆಯಬೇಕಾದರೆ ಇಡೀ ರಾಜ್ಯ ಮತ್ತೊಮ್ಮೆ ಗಟ್ಟಿಯಾಗಿ ಕೂಗಿ ಹೇಳಬೇಕಿರುವ ಮತ್ತು ಇಡೀ ಸರ್ಕಾರ ಕಣ್ಣು ತೆರೆಯಲೇಬೇಕಾದ ವಾತಾವರಣ ನಿರ್ಮಿಸುವ ಅಗತ್ಯವಿದೆ. ಅದಕ್ಕಾಗಿ ಹೋರಾಟ ಸಮಿತಿಯು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ದೇವನಹಳ್ಳಿ ಚಲೋ | ಅನ್ನದಾತರ ಹೋರಾಟದ ಚಿತ್ರಗಳು…
“ಜುಲೈ 2ರಂದು ನಂದಿಬೆಟ್ಟದಲ್ಲಿ ನಡೆಯುತ್ತಿರುವ ವಿಶೇಷ ಸಂಪುಟ ಸಭೆಯಲ್ಲಿ ‘ದೇವನಹಳ್ಳಿ ಭೂ ಸಮಸ್ಯೆ’ ವಿಶೇಷ ಅಜೆಂಡಾ ಆಗಬೇಕು ಎಂದು ಒತ್ತಾಯಿಸುತ್ತಿದ್ದೇವೆ. ದೇವನಹಳ್ಳಿಯ ಮೂಲಕವೇ ಬೆಟ್ಟಕ್ಕೆ ಹೋದವರು ಬರಿಗೈಯಲ್ಲಿ ಬಾರದಿರಿ” ಎಂದು ಸಚಿವರುಗಳಲ್ಲಿ ಮನವಿ ಮಾಡಿದ್ದಾರೆ.
“ದೇವನಹಳ್ಳಿ ವಿವಾದದ ನಿಜವಾದ ಚಿತ್ರಣ ಬಹುತೇಕ ಸಚಿವರುಗಳಿಗೆ ಹಾಗೂ ಶಾಸಕರುಗಳಿಗೆ ಸ್ಪಷ್ಟವಾಗಿಲ್ಲ. ನಿಮ್ಮ ನಿಮ್ಮ ಜಿಲ್ಲೆಯಲ್ಲಿರುವ ಶಾಸಕರು ಮತ್ತು ಸಚಿವರನ್ನು ಕಂಡು, ವಿಚಾರ ವಿವರಿಸಿ, ರೈತಪರ ನಿಲುವು ತೆಗೆದುಕೊಳ್ಳುವಂತೆ, ಮನವೊಲಿಸಬೇಕು” ಎಂದು ರಾಜ್ಯದ ಎಲ್ಲಾ ಹೋರಾಟಗಾರರಲ್ಲಿ ದೇವನಹಳ್ಳಿ ರೈತ ಹೋರಾಟಗಾರರು ಮನವಿ ಮಾಡಿದ್ದಾರೆ.
“ಜುಲೈ 4 ರಂದು ಸರ್ಕಾರ ನಿಟ್ಟುಸಿರು ಬಿಡುವಂತಹ ತೀರ್ಮಾನ ತೆಗೆದುಕೊಂಡಲ್ಲಿ ಸಿದ್ದರಾಮಯ್ಯನವರನ್ನು ಹಾಗೂ ಅವರ ಸರ್ಕಾರವನ್ನು ಅಭಿನಂದಿಸಿ ಪ್ರೀಡಂ ಪಾರ್ಕಿನಿಂದ ಹೊರಡುತ್ತೇವೆ. ಒಂದು ವೇಳೆ ಮತ್ತೊಮ್ಮೆ ನ್ಯಾಯ ನಿರಾಕರಣೆ ನಡೆದಲ್ಲಿ ಇನ್ನಷ್ಟು ಕಠಿಣ ಹೋರಾಟದ ದಿಟ್ಟ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪರವಾಗಿ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಎಸ್. ವರಲಕ್ಷ್ಮಿ, ನೂರ್ ಶ್ರೀಧರ್, ವಿ. ನಾಗರಾಜ್, ಡಿ. ಎಚ್ ಪೂಜಾರ್, ಕಾಮ್ರೇಡ್ ನಿರ್ಮಲ, ಶಿವಪ್ರಕಾಶ್, ಪಿ. ವಿ ಲೋಕೇಶ್, ಯು. ಬಸವರಾಜ್, ದೇವಿ ಇದ್ದರು.
