ಒಡಿಶಾದ ಪುರಿಯಲ್ಲಿ ನಡೆಯುತ್ತಿರುವ ಜಗನ್ನಾಥ ರಥಯಾತ್ರೆ ವೇಳೆ ಗುಂಡಿಚಾ ದೇವಸ್ಥನದ ಬಳಿ ಭಾನುವಾರ ಸಂಭವಿಸಿದ ಕಾಲ್ತುಳಿತದಲ್ಲಿ ಮುವರು ಸಾವನ್ನಪ್ಪಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ಹೆಚ್ಚು ಜನರು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರನ್ನು ಬಲಿಪಟ್ನದ ಪ್ರವತಿ ದಾಸ್ (52), ಗೋದಾಭಂಗದ ಬಸಂತಿ ಸಾಹು (42) ಮತ್ತು ಭುವನೇಶ್ವರದ ಪ್ರೇಮಕಾಂತ ಮೊಹಂತಿ (78) ಎಂದು ಗುರುತಿಸಲಾಗಿದೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಎಸ್ ಸ್ವೈನ್ ಹೇಳಿದ್ದಾರೆ.
“ಸರ್ಕಾರವು ಘಟನೆ ಬಗ್ಗೆ ತನಿಖೆ ಆರಂಭಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಒಡಿಶಾ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಹೇಳಿದ್ದಾರೆ.
ಭಾನುವಾರ ಮುಂಜಾನೆ, ಜಗನ್ನಾಥ ದೇವಾಲಯದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಗುಂಡಿಚಾ ದೇವಾಲಯದ ಸುತ್ತಲೂ ಸುಮಾರು 1,500 ಭಕ್ತರು ಜಮಾಯಿಸಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪವಿತ್ರವೆಂದು ಪರಿಗಣಿಸಲಾದ ಚರಮಲ ಮರಗಳನ್ನು ಹೊತ್ತ ಎರಡು ಟ್ರಕ್‌ಗಳು ಶಾರದಾಬಲಿ ಪ್ರದೇಶಕ್ಕೆ ಬಂದವು. ಏಕಾಏಕಿ ಟ್ರಕ್‌ಗಳು ಬಂದಿದ್ದರಿಂದ, ಜನರು ಗೊಂದಲಗೊಂಡು, ಓಡಲು ಆರಂಭಿಸಿದರು. ಪರಿಣಾಮ, ಕಾಲ್ತುಳಿತ ಸಂಭವಿಸಿತು. ಉಸಿರುಗಟ್ಟಿ ಮೂವರು ಮೃತಪಟ್ಟಿದ್ದಾರೆ.
ಈ ಲೇಖನ ಓದಿದ್ದೀರಾ?:ಇರಾನ್- ಇಸ್ರೇಲ್ ಕದನ; ಭಾರತದ ತಟಸ್ಥ ನಿಲುವು ಸರಿಯೇ?
“ಘಟನೆ ನಡೆದಾಗ, ಯಾವ ಅಧಿಕಾರಿಗಳೂ ತುರ್ತಾಗಿ ಧಾವಿಸಲಿಲ್ಲ. ಪ್ರತಿಕ್ರಿಯಿಸಲಿಲ್ಲ. ಅಗ್ನಿಶಾಮಕ ಅಧಿಕಾರಿಗಳು, ರಕ್ಷಣಾ ತಂಡ ಅಥವಾ ವೈದ್ಯಕೀಯ ಸಿಬ್ಬಂದಿ – ಯಾರೊಬ್ಬರೂ ನೆರವಿಗೆ ಬರಲಿಲ್ಲ” ಎಂದು ಕಾಲ್ತುಳಿತದಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡ ವ್ಯಕ್ತಿ ಆರೋಪಿಸಿದ್ದಾರೆ.
“ಜನರು ಒಬ್ಬರ ಮೇಲೊಬ್ಬರು ಬಿದ್ದರು. ಅನೇಕರು ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ಕಳೆದುಕೊಂಡರು. ಅವರ ಕುಟುಂಬಸ್ಥರು ಸಹಾಯಕ್ಕಾಗಿ ಮಾಹಿತಿ ಕೇಂದ್ರಕ್ಕೆ ಧಾವಿಸಿದರು. ಆದರೆ, ಕೇಂದ್ರವು ಏನೂ ಮಾಡಲಾಗಲಿಲ್ಲ. ಆ್ಯಂಬುಲೆನ್ಸ್‌ಅನ್ನು ಘಟನಾ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ನಿಲ್ಲಿಸಲಾಗಿತ್ತು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಪುರಿಯಲ್ಲಿ ರಥಯಾತ್ರೆ ಶುಕ್ರವಾರದಿಂದ ಆರಂಭವಾಗಿದೆ. 9 ದಿನಗಳ ಕಾಲ ನಡೆಯಲಿದೆ.