ಮೈಸೂರಿನ ಗಾಂಧಿ ವೃತ್ತದಲ್ಲಿಂದು ಬೈಕ್, ಟ್ಯಾಕ್ಷಿ ನಿಷೇಧ ವಾಪಸ್ ಪಡೆಯುವಂತೆ ಆಗ್ರಹಿಸಿ ಬೆಂಗಳೂರು, ಮಂಡ್ಯ, ದಾವಣಗೆರೆ, ರಾಮನಗರ ಹಾಗೂ ಸ್ಥಳೀಯವಾಗಿ ಚಾಲಕರು ಕುಟುಂಬ ಸಮೇತರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಬೈಕ್, ಟ್ಯಾಕ್ಸಿಗಳ ನಿಷೇಧ ತೆಗೆದು ಹಾಕಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು.
ಕರ್ನಾಟಕದಲ್ಲಿ ಬೈಕ್, ಟ್ಯಾಕ್ಸಿ ನಿಷೇಧ ಆದೇಶ ಚಾಲಕರ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಿದೆ. ಚಾಲಕ ವೃತ್ತಿಯನ್ನೇ ನಂಬಿರುವ ಕುಟುಂಬಗಳು ಈ ಆದೇಶದಿಂದಾಗಿ ಬೀದಿ ಪಾಲಾಗುವ ಆತಂಕದಲ್ಲಿದ್ದು ಜೀವನೋಪಾಯವನ್ನು ಉಳಿಸಿಕೊಳ್ಳಲು ಹಲವಾರು ಜಿಲ್ಲೆಗಳಿಂದ ಕುಟುಂಬ ಸಮೇತರಾಗಿ ಬಂದು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಚಾಲಕರಿಗೆ ಇದು ಬರೀ ಪ್ರತಿಭಟನೆಯಷ್ಟೇ ಅಲ್ಲಾ ಉಳಿವಿನ ಪ್ರಶ್ನೆ. ಈಗಾಗಲೇ ಬೈಕ್, ಟ್ಯಾಕ್ಸಿ ನಿಷೇಧ ಆದೇಶದಿಂದ ಹತಾಶೆಯಲ್ಲಿರುವ ಕುಟುಂಬಗಳು ತಮ್ಮ ಬದುಕಿಗಾಗಿ ತಮ್ಮ ವೃತ್ತಿಯನ್ನು ಉಳಿಸಿಕೊಳ್ಳಬೇಕಾದ ಸಂದರ್ಭ. ಕುಟುಂಬಗಳು ಬೈಕ್ ಟ್ಯಾಕ್ಸಿ ದುಡಿಮೆಯನ್ನೇ ಆಸರೆಯಾಗಿಸಿಕೊಂಡಿದ್ದು ಬೇರೆ ಮಾರ್ಗ ತೋಚುತಿಲ್ಲ. ಆದೇಶದಿಂದಾಗಿ ಮಕ್ಕಳ ವಿದ್ಯಾಭ್ಯಾಸ, ವಯಸ್ಸಾದವರ ಆರೋಗ್ಯ, ಕುಟುಂಬ ನಿರ್ವಹಣೆ ಮೇಲೆ ಪರಿಣಾಮ ಬೀರುವುದರಿಂದ ಕುಟುಂಬಗಳು ಸಂಕಷ್ಟದಲ್ಲಿವೆ.
ಹಲವು ವರ್ಷಗಳಿಂದ ಬೈಕ್, ಟ್ಯಾಕ್ಸಿಗಳು ಜನ ಸಮುದಾಯಗಳಿಗೆ ಜೀವನಾಡಿಯಾಗಿವೆ. ಬೆಂಗಳೂರಿನಂತಹ ಮಹಾ ನಗರದಲ್ಲಿ ಜನರಿಗೆ ಟ್ರಾಫಿಕ್ ಒತ್ತಡ ನಿವಾರಿಸಲು ಮತ್ತು ತ್ವರಿತವಾಗಿ ಅಗತ್ಯವಿದ್ದ ಕಡೆಗೆ ಸಂಚರಿಸಲು ನೆರವಾಗುತ್ತವೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಉದ್ಯೋಗಗಳಿಲ್ಲದ ಯುವ ಜನರಿಗೆ ಏಕೈಕ ಆದಾಯದ ಮೂಲವಾಗಿದೆ.
ಸರ್ಕಾರದ ಇಬ್ಬಂದಿ ತನದ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರತಿಭಟನಾಕರರು ರಾಜ್ಯದಲ್ಲಿ ಬೈಕ್ ಓಡಿಸುವುದನ್ನು ನಿಷೇಧ ಮಾಡುತ್ತಾರೆ. ಆದರೆ, ಅದೇ ಸ್ವಿಗ್ಗಿ, ಜೋಮೊಟೊ, ಆನ್ಲೈನ್ ವ್ಯಾಪಾರಕ್ಕೆ ಅಡ್ಡಿ ಪಡಿಸುವುದಿಲ್ಲ. ನಮ್ಮಿಂದ ತೊಂದರೆ ಏನಾಗುತ್ತದೆ?. ಅವರೆಲ್ಲ ಮನೆ ಮನೆ ತೆರಳಿ ಫುಡ್ ಆರ್ಡರ್ ಕೊಡಬಹುದು. ಅದೇ ನಾವುಗಳು ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತಿಲ್ಲ. ಇದು ಯಾವ ನ್ಯಾಯ. ಅವರಿಗಿರದ ಕಾನೂನು ನಮ್ಮ ಮೇಲೆ ಹೇರಿ ನಮ್ಮ ಕುಟುಂಬಗಳನ್ನು ಬೀದಿಗೆ ತರುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ್ವಿಚಕ್ರ ವಾಹನಗಳನ್ನು ಆಹಾರ ಮತ್ತು ಪಾರ್ಸಲ್ ಪೂರೈಕೆಗೆ ಬಳಸಬಹುದಾದರೆ, ಅದೇ ವಾಹನಗಳನ್ನು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಚಾಲಕರಿಗೆ ರೈಡರ್ ದಂಡ ವಿಧಿಸಲಾಗುತ್ತಿದೆ. ಗಿಗ್ ಅರ್ಥವ್ಯವಸ್ಥೆ ಮತ್ತು ಅದೇ ಮೋಟಾರ್ ವಾಹನಗಳ ಕಾಯ್ದೆಯಡಿ ಬರುತ್ತವೆ. ಹಾಗಿದ್ದರೂ, ಏಕೆ ಈ ತಾರತಮ್ಯ?. ನಾವು ವಿಶೇಷವಾಗಿ ಪರಿಗಣಿಸಿ ಎಂದು ಕೇಳುತ್ತಿಲ್ಲ. ನಮ್ಮನ್ನು ನ್ಯಾಯಯುತವಾಗಿ ನೋಡಿ ಎಂದಷ್ಟೇ ಕೇಳುತ್ತಿದ್ದೇವೆ. ನಾವು ಕೆಲಸ ಮಾಡಲಷ್ಟೇ ಬಯಸುತ್ತೇವೆ ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಮಾನವ – ವನ್ಯಜೀವಿ ಸಂಘರ್ಷ ತಡೆಗೆ ಶ್ರಮಿಸಿ : ಸಚಿವ ಎನ್ ಎಸ್ ಭೋಸರಾಜು
ಬೈಕ್, ಟ್ಯಾಕ್ಸಿ ನಿಷೇಧ ಚಾಲಕರುಗಳಿಗೆ ತೀವ್ರ ಹಾನಿಯುಂಟು ಮಾಡಿದೆ. ಹಲವಾರು ಮಂದಿ ಈಗಾಗಲೇ ತಮ್ಮ ಉಳಿತಾಯ ಖಾಲಿ ಮಾಡಿಕೊಂಡಿದ್ದಾರೆ. ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಕೆಲವರು ತಮ್ಮ ಕುಟುಂಬಗಳನ್ನು ಪೋಷಿಸಲು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಸಂಕಟವನ್ನು ಯಾರಿಗೂ ಹೇಳಾಲಾರದೆ, ಯಾರನ್ನು ಕೇಳಲಾರದೆ. ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದೇವೆ. ಬೈಕ್, ಟ್ಯಾಕ್ಷಿ ನಿಷೇಧ ವಾಪಸ್ ಪಡೆಯಿರಿ ನಾಗರಿಕರಿಗೆ ಉತ್ತಮವಾದ ಸೇವೆಯನ್ನು ಕಡಿಮೆ ದರದಲ್ಲಿ ನೀಡುತ್ತೇವೆ. ನಮ್ಮ ಹಾಗೂ ನಮ್ಮ ಕುಟುಂಬಗಳನ್ನು ಉಳಿಸಿ ಎಂದು ಮನವಿ ಮಾಡಿದ್ದಾರೆ.