- ಚಿನ್ನವನ್ನು ಕದ್ದು ಗಿರಿವಿ ಇಟ್ಟು ನನಗೇನು ಗೊತ್ತಿಲ್ಲ ಎಂದು ವಾದಿಸಿದ ಮಹಿಳೆ
- ಉದ್ಯಮಿ ಹೊನ್ನಾಚಾರಿ ಅವರ ಮನೆಯಲ್ಲಿ 250 ಗ್ರಾಂ ಚಿನ್ನಾಭರಣ ಕಳುವಾಗಿತ್ತು
ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮಾಲೀಕನ ಮನೆಯಲ್ಲಿ 250ಗ್ರಾಂ ಚಿನ್ನವನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಳ್ಳದೆ ಪೊಲೀಸರನ್ನು ಸತಾಯಿಸಿ, ಸುಳ್ಳು ಪರೀಕ್ಷೆ (ಪಾಲಿಗ್ರಫಿ) ನಡೆಸಿದರೂ ಗುಟ್ಟು ಬಿಟ್ಟುಕೊಡದೆ, ಕೊನೆಗೆ ‘ಬ್ರೈನ್ ಮ್ಯಾಪಿಂಗ್’ ಪರೀಕ್ಷೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ.
ಗದಗ ಜಿಲ್ಲೆಯ ಜನತಾ ಕಾಲೋನಿಯ ನಿವಾಸಿ ಅನ್ನಪೂರ್ಣ ಈಶ್ವರಪ್ಪ ಆನೆಪ್ಪನವರ್ ಬಂಧಿತ ಆರೋಪಿ. ಪೊಲೀಸರು ಆರೋಪಿಯಿಂದ ಸುಮಾರು 170 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಸದ್ಯ ನಗರ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಆರೋಪಿ ವಾಸಿಸುತ್ತಿದ್ದರು. ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಉದ್ಯಮಿ ಹೊನ್ನಾಚಾರಿ ಎಂಬುವವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದರು. ಇವರ ಮನೆಯಲ್ಲಿ 2021-2022 ಜನವರಿ ವರೆಗೂ ಕೆಲಸ ಮಾಡಿದ್ದಾರೆ. ಈ ಮಹಿಳೆ ಕೆಲಸ ಮಾಡುವ ಅವಧಿಯಲ್ಲಿ ಉದ್ಯಮಿ ಹೊನ್ನಾಚಾರಿ ಅವರ ಮನೆಯಲ್ಲಿ 250 ಗ್ರಾಂ ಚಿನ್ನಾಭರಣ ಕಳುವಾಗಿತ್ತು. ಈ ಚಿನ್ನ ₹10 ಲಕ್ಷ ಮೌಲ್ಯದ್ದಾಗಿದೆ.
ಮಹಾಲಕ್ಷ್ಮಿ ಲೇಔಟ್‌ನ ಉದ್ಯಮಿ ಹೊನ್ನಾಚಾರಿ ಮನೆಯವರು ಮನೆಗೆಲಸದ ಮಹಿಳೆಯ ಮೇಲೆ ಅನುಮಾನಗೊಂಡು, “ಕಳೆದ ವರ್ಷ ಜನವರಿ 15 ರಂದು ಮನೆಗೆಲಸ ಮಾಡುವ ಮಹಿಳೆ ಅನ್ನಪೂರ್ಣ ನಮ್ಮ ಮನೆಯಲ್ಲಿದ್ದ 250 ಗ್ರಾಂ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಆಭರಣಗಳು ನಾಪತ್ತೆಯಾದಾಗ ಅನ್ನಪೂರ್ಣ ಮನೆಯಲ್ಲಿ ಒಬ್ಬಳೇ ಇದ್ದಳು” ಎಂದು ಮಹಿಳೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಾದ ಹಿನ್ನೆಲೆ, ತನಿಖೆ ಕೈಗೊಂಡ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಮಹಿಳೆ ತಾನೂ ಚಿನ್ನ ಕದ್ದಿಲ್ಲ ಎಂದು ವಾದಿಸಿದ್ದಾರೆ. ಎಷ್ಟೇ ಕೇಳಿದರೂ ಮಹಿಳೆ ತಪ್ಪೊಪ್ಪಿಕೊಂಡಿಲ್ಲ.
ಪೊಲೀಸರು ಹಾಗೂ ಉದ್ಯಮಿ ಮನೆಯವರು ಮಹಿಳೆಯೇ ಚಿನ್ನ ಕದ್ದಿದ್ದಾಳೆ ಎಂದು ಬಲವಾಗಿ ಶಂಕಿಸಿದ್ದರು. ಇದಕ್ಕಾಗಿ ಸಾಕ್ಷ್ಯ ಶೋಧ ನಡೆಸಲು ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಆರೋಪಿ ಮಹಿಳೆಯ ಒಪ್ಪಿಗೆ ಪಡೆದು ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗಿತ್ತು.
ಸುಳ್ಳು ಪತ್ತೆ ಪರೀಕ್ಷೆ ನಡೆಸಿದರೂ ಮಹಿಳೆ ಸತ್ಯವನ್ನು ಹೇಳಿರಲಿಲ್ಲ. ಬಳಿಕ ಪೊಲೀಸರು ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲು ತೀರ್ಮಾನಿಸಿ ನ್ಯಾಯಾಲಯದಿಂದ ಅನುಮತಿ ಪಡೆದು ಪರೀಕ್ಷೆ ನಡೆಸಿದಾಗ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗೆ ಆರೋಪಿ ಮಹಿಳೆ ಮಾಮಾ ಎಂದು ಉತ್ತರಿಸಿದ್ದಾಳೆ. ಮಾಮಾ ಎಂಬ ಸುಳಿವು ಆಧರಿಸಿ ಪೊಲೀಸರು ಕಬ್ಬಿಣದ ಕಡಲೆಯಂತಿದ್ದ ಪ್ರಕರಣವನ್ನು ತನಿಖೆ ನಡೆಸಿ ಪರಿಹರಿಸಿದ್ದಾರೆ.
“ಆರೋಪಿ ಮಹಿಳೆ ಕಳ್ಳತನದ ಆರೋಪ ಮಾಡುವುದನ್ನು ನಿರಾಕರಿಸಿದ್ದಳು. ಅವಳ ಬ್ಯಾಂಕ್ ಖಾತೆಗಳಲ್ಲಿ ಯಾವುದೇ ಹೆಚ್ಚುವರಿ ಹಣ ಠೇವಣಿ ಆಗಿರಲಿಲ್ಲ. ಆಕೆ ತನ್ನ ಮೊಬೈಲ್ ಫೋನ್‌ನಿಂದ ಯಾವುದೇ ಗಿರವಿ ದಲ್ಲಾಳಿ ಅಥವಾ ಅಕ್ಕಸಾಲಿಗರನ್ನು ಸಂಪರ್ಕಿಸಿರಲಿಲ್ಲ. ಆರೋಪಿ ಮಹಿಳೆ ಯಾವುದೇ ಸುಳಿವುಗಳನ್ನು ಬಿಟ್ಟು ಕೊಟ್ಟಿರಲಿಲ್ಲ” ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲೇ ‘ಇಂದಿರಾ ಕ್ಯಾಂಟೀನ್’ ಪ್ರಾರಂಭ
“ದೂರುದಾರರು ಆದಷ್ಟು ಬೇಗ ಪ್ರಕರಣವನ್ನು ಭೇದಿಸುವಂತೆ ಪೊಲೀಸರಿಗೆ ಒತ್ತಡ ಹಾಕುತ್ತಿದ್ದರು. ಪೊಲೀಸರು ಅನ್ನಪೂರ್ಣಳನ್ನು ಮತ್ತೆ ಪ್ರಶ್ನಿಸಲು ಪ್ರಾರಂಭಿಸಿದಾಗ, ಅವಳು ರಕ್ಷಣೆ ಕೋರಿ ಸ್ವಯಂ ಹಕ್ಕು ಹೋರಾಟಗಾರರ ಸಹಾಯವನ್ನು ಪಡೆದಳು” ಎಂದಿದ್ದಾರೆ.
ಡಿಸಿಪಿ (ಉತ್ತರ) ಶಿವಪ್ರಕಾಶ ದೇವರಾಜು ಮಾತನಾಡಿ, “ನ್ಯಾಯಾಲಯದ ಅನುಮತಿಯೊಂದಿಗೆ ಆರೋಪಿ ಮಹಿಳೆಯನ್ನು 2022ರ ಸೆಪ್ಟೆಂಬರ್ 2ರಂದು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಏನೋ ನಡೆದಿರುವ ಸುಳಿವು ಇತ್ತು. ಆದರೆ, ಮಹಿಳೆ ತನ್ನ ರಕ್ಷಣೆಗೆ ಸತ್ಯವನ್ನು ಬಾಯಿಬಿಡುತ್ತಿರಲಿಲ್ಲ. ಬಳಿಕ, ಈ ವರ್ಷ ಮಾರ್ಚ್ 3ರಂದು ‘ಬ್ರೈನ್ ಎಲೆಕ್ಟ್ರಿಕಲ್ ಆಸಿಲೇಷನ್ ಸಿಗ್ನೇಚರ್ ಪ್ರೊಫೈಲಿಂಗ್’ ಪರೀಕ್ಷೆಯಲ್ಲಿ ಕದ್ದ ಚಿನ್ನಾಭರಣಗಳನ್ನು ಗದಗದಲ್ಲಿರುವ ತನ್ನ ಮಾಮಾಗೆ (ಸಂಬಂಧಿ) ನೀಡಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ” ಎಂದು ಹೇಳಿದ್ದಾರೆ.
“ಅನ್ನಪೂರ್ಣ ಮಾಮ ಎಂದು ಪ್ರೀತಿಯಿಂದ ಕರೆಯುತ್ತಿದ್ದ ವ್ಯಕ್ತಿಯೊಬ್ಬರು ಆಕೆಯ ಪರವಾಗಿ ಚಿನ್ನವನ್ನು ಗಿರವಿ ಇಟ್ಟಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಹೇಳಿಕೆ ಆಧರಿಸಿ ಮಹಿಳೆಯ ಊರಿನಲ್ಲಿರುವ ಸಂಬಂಧಿ ಮಾವನಿಗೆ ಕೊಟ್ಟಿದ್ದ ಹಾಗೂ ಗಿರವಿ ಅಂಗಡಿಗಳಲ್ಲಿ ಇಟ್ಟಿದ್ದ 100 ಗ್ರಾಂ.ಗೂ ಹೆಚ್ಚಿನ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶೀಘ್ರದಲ್ಲಿ ಚಾರ್ಚ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸಂಬಂಧಿಕರಿಗೆ ಮಹಿಳೆ ಚಿನ್ನವನ್ನು ಕದ್ದ ಬಗ್ಗೆ ಏನೂ ತಿಳಿದಿರಲಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.