ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಅಮಟೆ ಕ್ರಾಸ್ ಬಳಿ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ರೇವಡಿಹಾಳ ಗ್ರಾಮದ ದರ್ಶನ ಮೌನೇಶ ಚವ್ಹಾಣ (23) ಮೃತ. ಹಿಂಬದಿ ಸವಾರ ರಾಘು ಶಿರಕೋಳ (25) ತಲೆಗೆ ಪಟ್ಟಾಗಿದ್ದು, ಚಿಕಿತ್ಸೆಗೆಂದುಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ದರ್ಶನ ಭಾನುವಾರ ತನ್ನ ಸ್ನೇಹಿತ ರಾಘು ಜೊತೆಗೆ ತಾಲ್ಲೂಕಿನ ಪಾರವಾಡ ಬಳಿಯ ವಜ್ರಾ ಜಲಪಾತ ವೀಕ್ಷಣೆಗೆಂದು ಹುಬ್ಬಳ್ಳಿಯಿಂದ ಬೈಕ್‌ನಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಖಾನಾಪುರ ಪೊಲೀಸರು ಭೇಟಿ ನೀಡಿದ್ದು, ಗೂಡ್ಸ್ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.