“ಪತ್ರಿಕಾ ವಿತರಕರು ಮಳೆ, ಗಾಳಿ, ಚಳಿ ಎನ್ನದೇ ನಿತ್ಯವೂ ಪತ್ರಿಕೆಗಳನ್ನು ಮನೆಗೆ ತಲುಪಿಸುತ್ತಿದ್ದಾರೆ. ವಿತರಕರ ಹಿತ ಕಾಯಲು 2019ರಲ್ಲಿ ಒಕ್ಕೂಟ ಸ್ಥಾಪಿಸಲಾಗಿದೆ. ವಿತರಕರ ಅಸ್ತಿತ್ವವನ್ನು ಉಳಿಸಿಕೊಂಡು ನಮ್ಮ ಕೂಗನ್ನು ಸರ್ಕಾರಕ್ಕೆ ತಲುಪಿಸಲು ಪತ್ರಿಕಾ ವಿತರಕರ ಸಮ್ಮೇಳನ ಆಯೋಜಿಸಲಾಗುತ್ತಿದೆ” ಎಂದು ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗಪ್ಪ ಹೇಳಿದರು.
ಹಾವೇರಿ ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಕಾರ್ಯಕಾರಿಣಿ ಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.
“ಮೈಸೂರಿನಲ್ಲಿ ಆಗಸ್ಟ್ 27 ಹಾಗೂ 28ರಂದು ರಾಜ್ಯಮಟ್ಟದ 5ನೇ ವಿತರಕರ ಸಮ್ಮೇಳನ ಹಾಗೂ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನವನ್ನು ಯಶಸ್ವಿಗೊಳಿಸಲು ಪದಾಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು” ಎಂದು ಹೇಳುದರು.
ಈ ಸುದ್ದಿ ಓದಿದ್ದೀರಾ? ಗದಗ | ನಾಡಿನ ಅಭಿವೃದ್ಧಿಗೆ ಕೆಂಪೇಗೌಡರ ಪಾತ್ರ ಅಪಾರ: ಕೆ. ಎಂ. ಮಾಕಣ್ಣವರ
“ಪತ್ರಿಕಾ ವಿತರಕರ ಹೆಸರಿನಲ್ಲಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ₹ 10 ಕೋಟಿ ಮೀಸಲಿಡಬೇಕು. ಪತ್ರಿಕಾ ವಿತರಕರಿಗೂ ಆಶ್ರಯ ಯೋಜನೆಯಡಿ ನಿವೇಶನ ಹಾಗೂ ಮನೆಗಳನ್ನು ಒದಗಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವಿದ್ಯಾರ್ಥಿವೇತನ ರೂಪಿಸಬೇಕು. ವಿತರಕರು ಅಕಾಲಿಕ ಮರಣ ಹೊಂದಿದರೆ, ಅವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಬೇಕು. ವಿತರಕರಿಗೆ ಸಬ್ಸಿಡಿ ದರದಲ್ಲಿ ಎಲೆಕ್ಟ್ರಿಕ್ ಬೈಕ್ ಒದಗಿಸಬೇಕು. 60 ವರ್ಷ ವಯೋಮಿತಿ ಮೀರಿದ ವಿತರಕರಿಗೆ ಪ್ರತಿ ತಿಂಗಳು ₹ 2 ಸಾವಿರ ಪಿಂಚಣಿ ನೀಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಸಮ್ಮೇಳನದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.
ವಿವಿಧ ಜಿಲ್ಲೆಗಳ ಪತ್ರಿಕಾ ವಿತರಕರು ಸಭೆಯಲ್ಲಿ ಪಾಲ್ಗೊಂಡಿದ್ದರು.