2024ರ ಜೂನ್‌ನಲ್ಲಿ ಸಂಸದನಾಗಿ ಆಯ್ಕೆಯಾದ ಬಳಿಕ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಕೊಪ್ಪಳ ಸಂಸದ ಕೆ ರಾಜಶೇಖರ ಹಿಟ್ನಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲಾಡಳಿತ ಭವದಲ್ಲಿರುವ ಲೋಕಸಭಾ ಸದಸ್ಯರ ಕಛೇರಿಯಲ್ಲಿ ತಾವು ಸಂಸದರಾಗಿ ಒಂದು ವರ್ಷ ಪೂರೈಸಿರುವ ಅವಧಿಯಲ್ಲಿ ತಮ್ಮ ಅಭಿವೃದ್ಧಿ ಕಾರ್ಯಕ್ರಮ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕರೆದು ತಿಳಿಸಿದರು.
“ಎನ್‌ಹೆಚ್‌ಎಐ ರಸ್ತೆಗಳಲ್ಲಿ ಕೆಲವು ಸಮಸ್ಯೆಗಳಿದ್ದು, ವಿಶೇಷವಾಗಿ ಎನ್‌ಹೆಚ್-50ರಲ್ಲಿ ಟೋಲ್‌ಗೇಟ್‌ನಿಂದ ಟನಲ್ ಬಳಿ ಬಹಳಷ್ಟು ಅಪಘಾತಗಳಾಗುತ್ತಿದ್ದವು. ಇದರಿಂದ ಪ್ರತಿವರ್ಷ 100 ಜನರ ಸಾವು ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ತಡೆಯಲು ಓವರ್ ಬ್ರಿಡ್ಜ್ ಮಾಡಬೇಕೆಂದು ಮಾಜಿ ಸಂಸದ ಕರಡಿ ಸಂಗಣ್ಣನವರು ಪ್ರಯತ್ನ ಮಾಡಿದ್ದರು. ನಾನು ಸಂಸದನಾದ ನಂತರ ಟೆಂಡರ್ ಮಾಡಿಸಿ, ಹೊಸಲಿಂಗಾಪುರ ಕ್ರಾಸ್, ಹೊಸಳ್ಳಿ ಕ್ರಾಸ್, ಹಿಟ್ನಾಳ್ ಕ್ರಾಸ್ ಮೆತಗಲ್ ಕ್ರಾಸ್ ಸೇರಿದಂತೆ ₹1,190 ಲಕ್ಷಗಳ ಅನುದಾನದಲ್ಲಿ ನಾಲ್ಕು ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ” ಎಂದರು.
“ಪ್ರಸ್ತುತ ಅಪಘಾತ ಪ್ರಮಾಣ ಶೇ.70ರಷ್ಟು ಕಡಿಮೆಯಾಗಿದ್ದು, ರಸ್ತೆ ಅಪಘಾತ ಪ್ರಮಾಣವನ್ನು ಶೂನ್ಯಕ್ಕೆ ತರುವ ಪ್ರಯತ್ನ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಾಹನ ವೇಗ ನಿಯಂತ್ರಣ ಮಾಡಲು ಸೆಕ್ಯೂರಿಟಿ ಸಿಸ್ಟಮ್ ಹಾಗೂ ಸಿಸಿ ಟಿವಿ ಅಳವಡಿಕೆಗಾಗಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕಾಗಿ ₹2 ಕೋಟಿಗಳನ್ನು ಮಂಜೂರು ಮಾಡಿದ ಕೇಂದ್ರ ರಸ್ತೆ ಸಾರಿಗೆ ಸಚಿವರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ” ಎಂದು ಹೇಳಿದರು.
“ಅಂಚೆ ಇಲಾಖೆಯಿಂದ ಇನ್ಷೂರೆನ್ಸ್, ಪಿಂಚಣಿ, ಆರ್‌ಡಿ ಸೇರಿದಂತೆ ಹಲವಾರು ಪೋಸ್ಟಲ್ ಸೇವೆಗಳು ಸಾರ್ವಜನಿಕರಿಗೆ ಸಿಗುತ್ತಿವೆ. ಆದರೆ, ಅಂಚೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳ ಕೊರೆತೆಯಿದ್ದು, ಸಿಎಸ್ಆರ್ ಅನುದಾನದಲ್ಲಿ ₹13.50 ಲಕ್ಷಗಳ ವೆಚ್ಚದಲ್ಲಿ ಪ್ರಾಥಮಿಕ ಹಂತದಲ್ಲಿ ಕುಣಿಕೇರಿ ಹಾಗೂ ಹಿರೇಬಗನಾಳ ಗ್ರಾಮಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಗುಳದಳ್ಳಿ ಗ್ರಾಮದಲ್ಲಿ ಭೂಮಿ ಪೂಜೆ ಮಾಡಲಾಗಿದೆ. ನಮ್ಮ ಜಿಲ್ಲೆಯಲ್ಲಿ 182 ಪೋಸ್ಟ್ ಆಫೀಸ್‌ಗಳಿದ್ದು, ಇವುಗಳ ಅಭಿವೃದ್ಧಿಗಾಗಿ ಜಿಲ್ಲೆಯ ವಿವಿಧ ಕಂಪನಿಗಳಿಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.
“ಎಕ್ಸ್ ಇಂಡಿಯಾದವರು ಮತ್ತು ಮುಕುಂದ್ಸ್ ಕಂಪನಿಯವರು ತಲಾ ಎರಡು ಅಂಚೆ ಕಚೇರಿಯ ಕಟ್ಟಡಗಳನ್ನು ಮಾಡುತ್ತಿದ್ದಾರೆ ಹಾಗೂ ಕಿರ್ಲೋಸ್ಕರ್ ಮತ್ತು ಕಲ್ಯಾಣಿ ಕಂಪನಿಯವರು ತಲಾ 15 ಅಂಚೆ ಕಚೇರಿಯ ಕಟ್ಟಡಗಳನ್ನು ಮಾಡುವುದಾಗಿ ಹೇಳಿದ್ದಾರೆ. ಈ ವರ್ಷ ಸುಮಾರು 35 ರಿಂದ 40 ಪೋಸ್ಟ್ ಆಫೀಸ್ ಕಟ್ಟಡಗಳನ್ನು ನಿರ್ಮಾಣ ಮಾಡಿ, ಜನರಿಗೆ ಅನುಕೂಲ ಮಾಡಿಕೊಡಲಾಗುವುದು” ಎಂದು ಹೇಳಿದರು.
ಎಂಜಿಎನ್ಆರ್‌ಇಜಿ ಅನುದಾನದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ದತ್ತುಗ್ರಾಮ ಯೋಜನೆಯ ಮೊದಲ ಹಂತದಲ್ಲಿ ಕಾಮನೂರ ಹಾಗೂ ಮೋರನಾಳ ಗ್ರಾಮಗಳನ್ನು ದತ್ತು ತಗೆದುಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಎರಡನೇ ಹಂತದಲ್ಲಿ ಜಿಲ್ಲೆಯ ಆಯಾ ವಿಧಾನಸಭಾ ವ್ಯಾಪ್ತಿಯಲ್ಲಿ ಕುಷ್ಟಗಿ ತಾಲ್ಲೂಕಿನ ಹುಯಿಲಗೇರಿ, ಮುದೇನೂರ, ಗಂಗಾವತಿ ತಾಲ್ಲೂಕಿನ ಸಂಗಾಪೂರ, ಕಾರಟಗಿ ತಾಲ್ಲೂಕಿನ ಬೇನ್ನೂರ ಮತ್ತು ಕಕ್ಕರಗೋಳ್ಳ, ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಹಾಗೂ ಕೊಪ್ಪಳ ತಾಲ್ಲೂಕಿನ ಮಾದಿನೂರ, ಈ ಎಲ್ಲಾ ಗ್ರಾಮಗಳನ್ನು ದತ್ತು ಗ್ರಾಮಗಳಾಗಿ ಆಯ್ಕೆ ಮಾಡಲಾಗಿದ್ದು, ಕ್ರೀಯಾ ಯೋಜನೆ ಅನುಮೋದನೆಗೆ ಬಾಕಿ ಇರುತ್ತದೆ” ಎಂದರು.
“ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯ ಫಲಿತಾಂಶ ತುಂಬಾ ಕಡಿಮೆಯಿದ್ದು, ಈ ಪ್ರಮಾಣವನ್ನು ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಏಕ ಮಾದರಿಯ ತರಗತಿ ಮತ್ತು ಸ್ಮಾರ್ಟ್‌ಕ್ಲಾಸ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. ಜಿಲ್ಲೆಯ ಎಲ್ಲ ಶಾಲೆಗಳಿಗೆ ಬಿಎಸ್ಎನ್ಎಲ್ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲು ಮನವಿ ಮಾಡಿದ್ದೇವೆ. ಈಗಾಗಲೇ ಪ್ರಾಥಮಿಕ ಹಂತದಲ್ಲಿ 43 ಶಾಲೆಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಬಾಕಿ ಶಾಲೆಗಳಿಗೆ ಅಂತರ್ಜಾಲ ಸೌಲಭ್ಯ ಕಲ್ಪಿಸಲು ಸರ್ವೇ ಕಾರ್ಯ ಪ್ರಗತಿಯಲ್ಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕ್ಷುಲ್ಲಕ ಕಾರಣಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ; ಮೂವರ ವಿರುದ್ಧ ಪ್ರಕರಣ ದಾಖಲು
“ರೈಲ್ವೆ ನಿಲ್ದಾಣಗಳ ಹೆಸರು ಬದಲಾವಣೆ ಮಾಡಲು ಭಾನಾಪೂರ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧಿ, ಗಂಗಾವತಿ ರೈಲು ನಿಲ್ದಾಣಕ್ಕೆ ಕಿಷ್ಕಿಂದಾ ಮತ್ತು ಮುನಿರಾಬಾದ್ ರೈಲು ನಿಲ್ದಾಣಕ್ಕೆ ಹುಲಿಗೆಮ್ಮದೇವಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಲು ಮನವಿ ಸಲ್ಲಿಸಿದ್ದು, ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಹೋಗಬೇಕಿದೆ. ಈ ಹೆಸರುಗಳಿಂದ ಐತಿಹಾಸಿಕ ಸ್ಥಳಗಳ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ. ಹುಲಿಗೆಮ್ಮದೇವಿ ದೇವಸ್ಥಾನ ಸಮಗ್ರ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಕೇಂದ್ರ ಸರ್ಕಾರದ ಪ್ರಸಾದ್-2 ಯೋಜನೆಯಡಿ ₹169 ಕೋಟಿ ಅನುದಾನದಲ್ಲಿ ವಿಸೃತ ಯೋಜನಾ ವರದಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ” ಎಂದು ಹೇಳಿದರು.
ನಬಾರ್ಡ್ ವತಿಯಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೆತಗಲ್ ಗ್ರಾಮದಲ್ಲಿ ಆಹಾರ ಸಂಸ್ಕರಣಾ ಘಟಕವನ್ನು ₹4 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಪ್ರಾರಂಭಿಸುವುದು ಬಾಕಿ ಇದೆ” ಎಂದು ತಿಳಿಸಿದರು.