ಹೇಮಾ ಕಮಿಟಿ ವರದಿಯಲ್ಲಿದ್ದ ಎಲ್ಲ 35 ಪ್ರಕರಣ ಕೈಬಿಟ್ಟ ಕೇರಳ ಸರ್ಕಾರ; ಮರೀಚಿಕೆಯಾದ ನ್ಯಾಯ

Date:

Advertisements

ಹೇಮಾ ಕಮಿಟಿ ವರದಿಯಲ್ಲಿನ ಆರೋಪಗಳ ತನಿಖೆಗೆ ಎಸ್‌ಐಟಿ ರಚನೆ ಮಾಡಿದ್ದ ಕೇರಳ ಸರ್ಕಾರ, “ಸಂತ್ರಸ್ತೆಯರು ತನಿಖೆಗೆ ಸಹಕರಿಸುತ್ತಿಲ್ಲ, ಹಾಗಾಗಿ 35 ಪ್ರಕರಣಗಳ ತನಿಖೆಯನ್ನು ಕೈ ಬಿಡುವ ನಿರ್ಧಾರ ಮಾಡಲಾಗಿದೆ” ಎಂದು ಇದೇ ಜೂನ್‌ 25ರಂದು ಹೈಕೋರ್ಟ್‌ಗೆ ತಿಳಿಸಿದೆ. ಇದು ನಿಜಕ್ಕೂ ನಿರಾಶಾದಾಯಕ ಬೆಳವಣಿಗೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಕೇರಳ ಸರ್ಕಾರ ಬಿಡುಗಡೆ ಮಾಡಿದ್ದ ಹೇಮಾ ಕಮಿಟಿ ವರದಿ ದೇಶದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ವರದಿ ಬಿಡುಗಡೆಯ ನಂತರ ಮಲಯಾಳಂ ಚಿತ್ರರಂಗದ ದಿಗ್ಗಜ ನಾಯಕರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಸಿದ್ದಿಕ್‌, ಮುಕೇಶ್‌, ಜಯಸೂರ್ಯ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿತ್ತು. ದಕ್ಷಿಣ ಭಾರತದ ಹಲವು ಭಾಷೆಗಳ ಕಲಾವಿದರು ಈ ಬಗ್ಗೆ ಧ್ವನಿ ಎತ್ತಿದ್ದರು. ಹೇಮಾ ಕಮಿಟಿ ಮಾದರಿಯಲ್ಲಿ ನಮ್ಮ ಚಿತ್ರರಂಗದಲ್ಲೂ ಮಹಿಳೆಯರ ಸ್ಥಿತಿಗತಿ ಅಧ್ಯಯನ ನಡೆಯಬೇಕು ಎಂಬ ಬೇಡಿಕೆ ಬಂದಿತ್ತು. ಕೇರಳದಲ್ಲಿ ಹೇಮಾ ಕಮಿಟಿ ವರದಿ ಬಗ್ಗೆ ತನಿಖೆ ನಡೆಸಲು ಕೇರಳ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಆದರೆ, ಎಸ್‌ಐಟಿ ರಚನೆ ಮಾಡಿದ್ದರೂ, ಎಲ್ಲ ರೀತಿಯ ಸಹಕಾರ ನೀಡಿದರೂ ಸಂತ್ರಸ್ತೆಯರು ತನಿಖೆಗೆ ಸಹಕರಿಸುತ್ತಿಲ್ಲ, ಹಾಗಾಗಿ 35 ಪ್ರಕರಣಗಳ ತನಿಖೆಯನ್ನು ಕೈ ಬಿಡುವ ನಿರ್ಧಾರ ಮಾಡಿರುವುದಾಗಿ ಪಿಣರಾಯಿ ಸರ್ಕಾರ 2025 ಜೂನ್‌ 25ರಂದು ಹೈಕೋರ್ಟ್‌ಗೆ ತಿಳಿಸಿದೆ. ಇದು ನಿಜಕ್ಕೂ ಭಾರತದ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ವರದಿಯೊಂದು ವ್ಯರ್ಥವಾದ ಕತೆ.

ಮಲಯಾಳಂ ಚಿತ್ರರಂಗದ ಮಟ್ಟಿಗೆ 2017ರಲ್ಲಿ ನಟ ದಿಲೀಪ್‌ ಬಂಧನ ಬಿರುಗಾಳಿಯನ್ನೇ ಎಬ್ಬಿಸಿತ್ತು. ಅದೂ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ದಿಲೀಪ್‌ ಬಂಧನವಾಗಿದ್ದರು. ಆ ಪ್ರಕರಣದ ಸಂಬಂಧ ಮಲಯಾಳಂ ಚಿತ್ರರಂಗದ ಕಲಾವಿದೆಯರ ಸಂಘ ʼವಿಮೆನ್‌ ಇನ್‌ ಸಿನಿಮಾ ಕಲೆಕ್ಟಿವ್‌ʼ ಒತ್ತಾಯದ ಮೇರೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸರ್ಕಾರ ನ್ಯಾ. ಕೆ ಹೇಮಾ ನೇತೃತ್ವದ ಸಮಿತಿ ರಚಿಸಿತ್ತು. ಹಿರಿಯ ನಟಿ ಶಾರದಾ ಮತ್ತು ನಿವೃತ್ತ ಐಎಎಸ್‌ ಅಧಿಕಾರಿ ಕೆ ಬಿ ವತ್ಸಲಾ ಕುಮಾರಿ ಅವರಿದ್ದ ಈ ಸಮಿತಿ ವರದಿಯನ್ನು 2019ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಸರ್ಕಾರ ಆ ವರದಿಯನ್ನು ಬಹಿರಂಗಪಡಿಸಿರಲಿಲ್ಲ. ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಲಾಗಿದ್ದ ಅರ್ಜಿಯಿಂದಾಗಿ ವರದಿ ಬಹಿರಂಗಗೊಂಡಿದೆ. ಅದರಲ್ಲಿರುವ ಅಂಶಗಳು ಮಲಯಾಳಂ ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟಿತ್ತು. ಇದು ಹಲವು ಸಿನಿಮಾ ಕಲಾವಿದರ ನೈತಿಕತೆಯನ್ನು ಪ್ರಶ್ನಿಸಿತ್ತು. ಸಿನಿಮಾ ರಂಗ ಶುದ್ಧೀಕರಣ ಆಗಬೇಕು ಎಂದು ಹಲವರು ಧ್ವನಿ ಎತ್ತಿದ್ದರು. ಎಂದೋ ನಡೆದ ಘಟನೆಗೆ ಪುರಾವೆ ಕೊಡುವುದು ಅಸಾಧ್ಯ. ಆದರೆ, ಅದರ ಕರಾಳತೆ ಬಹಿರಂಗಗೊಂಡಿದ್ದು ಹಲವು ಚಿತ್ರರಂಗಕ್ಕೆ ಎಚ್ಚರಿಕೆಯ ಗಂಟೆಯಾಗಿತ್ತು.

Advertisements
Dileep
ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಮಲಯಾಳಂ ನಟ ದಿಲೀಪ್‌

ಹೇಮಾ ಸಮಿತಿಯನ್ನು ಕೇರಳ ಸರ್ಕಾರವು 2017ರ ಜುಲೈನಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ, ಲಿಂಗ ಅಸಮಾನತೆ ಮತ್ತು ಶೋಷಣೆಯ ಸಮಸ್ಯೆಗಳನ್ನು ತನಿಖೆ ಮಾಡಲು ರಚಿಸಿತ್ತು. ಅದು 2017ರಲ್ಲಿ ಒಬ್ಬ ನಟಿಯ ಮೇಲಿನ ದಾಳಿಯ ನಂತರ ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC) ಸಲ್ಲಿಸಿದ ಅರ್ಜಿಯಿಂದ ಸಾಧ್ಯವಾಯಿತು. ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಹೇಮಾ ನೇತೃತ್ವದಲ್ಲಿ, ಹಿರಿಯ ನಟಿ ಶಾರದಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆ.ಬಿ. ವಲ್ಸಲಾಕುಮಾರಿ ಸದಸ್ಯರಾಗಿದ್ದರು. ಸಮಿತಿಯು ತನ್ನ ವರದಿಯನ್ನು ಡಿಸೆಂಬರ್ 2019ರಲ್ಲಿ ಸಲ್ಲಿಸಿತ್ತು. ಕಾನೂನಿನ ಸವಾಲು, ಗೌಪ್ಯತೆಯ ಕಾರಣಗಳಿಂದಾಗಿ ಪಿಣರಾಯಿ ಸರ್ಕಾರ ಐದು ವರ್ಷಗಳ ಕಾಲ ವರದಿಯನ್ನು ಬಹಿರಂಗಪಡಿಸಿರಲಿಲ್ಲ. ಆಗಸ್ಟ್ 19, 2024ರಂದು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಯಿತು.

ʼಅಮ್ಮʼ ಕಾರ್ಯಕಾರಿ ಸಮಿತಿ ವಿಸರ್ಜನೆ

ವರದಿಯ ಬಿಡುಗಡೆಯು #MeToo ಅಭಿಯಾನಕ್ಕೆ ಮತ್ತೆ ಚಾಲನೆ ನೀಡಿತ್ತು. ಶ್ರೀಲೇಖಾ ಮಿತ್ರಾ ಮತ್ತು ಇತರ ನಟಿಯರು ರಂಜಿತ್ ಬಾಲಕೃಷ್ಣನ್, ಸಿದ್ದಿಕ್, ಜಯಸೂರ್ಯ, ಮುಕೇಶ್ ಮತ್ತು ನಿವಿನ್ ಪಾಲಿ ಮೇಲೆ ಆರೋಪಗಳನ್ನು ಮಾಡಿದರು. ಇದರಿಂದಾಗಿ ರಂಜಿತ್ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಗೆ ಮತ್ತು ಸಿದ್ದಿಕ್ AMMA ಸಾಮಾನ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು AMMAನ 2024–2027 ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಯಿತು.

ನಂತರ ಸರ್ಕಾರ ಹಿರಿಯ ಮಹಿಳಾ IPS ಅಧಿಕಾರಿಗಳ ನೇತೃತ್ವದಲ್ಲಿ ಒಂದು ವಿಶೇಷ ತನಿಖಾ ತಂಡ (SIT)ರಚಿಸಿತು. ಆದರೆ 35 ಪ್ರಕರಣಗಳಲ್ಲಿ ಹೆಚ್ಚಿನವರು ಭಯ ಮತ್ತು ಉದ್ಯಮದ ಮೇಲಿನ ಅವಲಂಬನೆಯ ಕಾರಣದಿಂದಾಗಿ ಕಾನೂನು ಕ್ರಮಕ್ಕೆ ಸಿದ್ಧರಿಲ್ಲ. ಹೀಗಾಗಿ ಪ್ರಕರಣದ ತನಿಖೆ ಕೈಬಿಡಲಾಗಿದೆಯಂತೆ.

ಪುರಾವೆ ಒದಗಿಸುವ ಕಷ್ಟ

ಕೆಲ ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಎದ್ದ Metoo ಬಿರುಗಾಳಿ ನಂತರ ನಡೆದ ಬೆಳವಣಿಗೆಗಳನ್ನು ನಾವೆಲ್ಲ ನೋಡಿದ್ದೇವೆ. ಬೇರೆ ಭಾಷೆಯ ನಟಿಯೊಬ್ಬರು ಸಿನಿಮಾ ಕ್ಷೇತ್ರದಲ್ಲಿ ಕಾಸ್ಟಿಂಗ್‌ ಕೌಚ್(ಅವಕಾಶಕ್ಕಾಗಿ ಲೈಂಗಿಕ ಕಿರುಕುಳ) ಬಗ್ಗೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾ ಕನ್ನಡದ ನಟಿ ಶ್ರುತಿ ಹರಿಹರನ್‌ ತಮಗೂ ಹಿರಿಯ ನಟನ ಅರ್ಜುನ್‌ ಸರ್ಜಾ ಜೊತೆ ರೊಮ್ಯಾಂಟಿಕ್ ದೃಶ್ಯವೊಂದರ ಚಿತ್ರೀಕರಣದ ವೇಳೆ ಅಂತಹ ಅನುಭವ ಆಗಿತ್ತು ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಬಂದ ಪ್ರತಿಕ್ರಿಯೆಗಳು ಆ ನಟನ ಹೆಸರನ್ನು ಬಹಿರಂಗಪಡಿಸುವ, ನಂತರ ಆ ನಟನ ವಿರುದ್ಧ ದೂರು ನೀಡುವ ಮಟ್ಟಿಗೆ ಆಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆಗ ಇಡೀ ಚಿತ್ರರಂಗ ನಡೆದುಕೊಂಡ ರೀತಿ, ದೊಡ್ಡವರೆಂದುಕೊಂಡವರ ಹೇಳಿಕೆಗಳು, ಹಿರಿಯ ನಟಿಯರ ಮಹಾ ಮೌನ, ಆಕೆಯ ಪರ ಯಾರೊಬ್ಬರೂ ನಿಲ್ಲದಿರುವ ದುಷ್ಟತನ ನೋಡಿದ್ದೇವೆ. ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ನಂತರ ಪುರಾವೆ ಒದಗಿಸಲಾಗದೇ ಪ್ರಕರಣ ಮುಗಿದು ಹೋಯ್ತು. ನಟನೆಯ ವೇಳೆ ನಡೆಯುವ ಕಿರುಕುಳಕ್ಕೆ ಎಲ್ಲಿಂದ ಪುರಾವೆ ಒದಗಿಸುವುದು? ಅಸಹಜವಾಗಿ ಸ್ಪರ್ಶಿಸುವ, ಸಂಜ್ಞೆ ಮಾಡುವ, ಮಾತಿನ ಕಿರುಕುಳಕ್ಕೆ ಅಥವಾ ರೊಮ್ಯಾಂಟಿಕ್‌ ದೃಶ್ಯದ ಸಹಜತೆಯ ಹೆಸರಿನಲ್ಲಿ ಆಗುವ ಕಿರುಕುಳಕ್ಕೆ ಎಲ್ಲಿರುತ್ತದೆ ಪುರಾವೆ? ಪುರಾವೆ ಒದಗಿಸಲಾಗದ ಕಾರಣ ಕೋರ್ಟ್‌ಗಳಲ್ಲೂ ನ್ಯಾಯ ಮರೀಚಿಕೆಯಾಗಿದೆ.

Sruthi Hariharan
ಶ್ರುತಿ ಹರಿಹರನ್‌ ಮತ್ತು ಅರ್ಜುನ್‌ ಸರ್ಜಾ

ತಮ್ಮ ಲೈಂಗಿಕ ಆಸೆಗಳನ್ನು ಈಡೇರಿಸಿದರೆ, ಸಲುಗೆಯಿಂದ ನಡೆದುಕೊಂಡರೆ ಚಿತ್ರದಲ್ಲಿ ಉತ್ತಮ ಪಾತ್ರ ಅಥವಾ ಅವಕಾಶ ನೀಡುವ ಆಮಿಷವೊಡ್ಡುವುದನ್ನು ʼಕಾಸ್ಟಿಂಗ್‌ ಕೌಚ್‌ʼ ಎಂದು ಕರೆಯಲಾಗುತ್ತದೆ. ಅವಕಾಶಕ್ಕಾಗಿ ಕೆಲವರು ಹೊಂದಾಣಿಕೆ ಮಾಡಿಕೊಂಡರೆ, ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇರುವ ಕೆಲ ನಟಿಯರು ಅಂತಹ ಆಮಿಷವನ್ನು ಕಾಲಿನಲ್ಲಿ ಒದ್ದು ಚಿತ್ರರಂಗದಿಂದಲೇ ಹೊರಬಂದಿರುವ ಉದಾಹರಣೆ ಇದೆ. ಹಿಂದೆ ಮೀಟೂ ಅಭಿಯಾನ ನಡೆದಾಗ ಹಲವು ನಟಿಯರು ತಮಗಾದ ಕಿರುಕುಳವನ್ನು ಹೇಳಿಕೊಳ್ಳುವ ಧೈರ್ಯ ಮಾಡಿದ್ದರು. ಆದರೆ, ಹೇಳಿಕೊಂಡವರ ಪ್ರಮಾಣ ಶೇ.1 ಕೂಡಾ ಇರಲಾರದು. ಕೆಲವು ನಟಿಯರು ಹಾಗೆಲ್ಲ ಏನೂ ಇಲ್ಲ ಎಂದು ಹೇಳಿ ಸುಮ್ಮನಾಗುತ್ತಾರೆ. ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಿದೆ, ಅದು ನಿಲ್ಲಬೇಕು ಎಂದು ಗಟ್ಟಿಯಾಗಿ ಹೇಳುವವರು ಇಲ್ಲ. ಹಾಗೆ ನೋಡಿದರೆ ನಟಿಯರದೊಂದು ಸಂಘಟನೆಯೇ ಇಲ್ಲ.

ತಿಂಗಳ ಹಿಂದೆಯಷ್ಟೇ ರಿಯಾಲಿಟಿ ಶೋದಲ್ಲಿ ಗುರುತಿಸಿಕೊಂಡಿದ್ದ, ಒಂದು ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದ ಮಡೇನೂರು ಮನು ಎಂಬಾತನ ಮೇಲೆ ಯುವತಿಯೊಬ್ಬಳು ಅತ್ಯಾಚಾರದ ಪ್ರಕರಣ ದಾಖಲಿಸಿದ್ದಳು. ಮದುವೆಯಾಗಿ ಒಂದು ಮಗು ಇರುವ ಮನು ತನ್ನ ಜೊತೆಗೆ ಸ್ನೇಹದಿಂದ ಇದ್ದ ಯುವತಿಯ ರೀಲ್ಸ್‌ ಮಾಡುತ್ತ ಸಲುಗೆ ಬೆಳೆಸಿಕೊಂಡು ಬಲಾತ್ಕಾರ ಮಾಡಿರುವುದಲ್ಲದೇ ಎರಡನೇ ಹೆಂಡತಿ ಎಂದು ಹೇಳಿಕೊಂಡಿದ್ದ.

ಹೇಮಾ ಕಮಿಟಿ ವರದಿ ಸೃಷ್ಟಿಸಿದ್ದ ಅಲ್ಲೋಲ ಕಲ್ಲೋಲದ ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೊದಲ ಬಾರಿಗೆ ಲೈಂಗಿಕ ಕಿರುಕುಳ ತಡೆ ಸಮಿತಿ (Prevention of Sexual Harassment committee) ರಚನೆಯಾಗಿದೆ. ಅಲ್ಲಿ ಯಾವುದೇ ದೂರು ದಾಖಲಾದ ಮಾಹಿತಿ ಇಲ್ಲ.

madenur manu 4
ಅತ್ಯಾಚಾರ ಪ್ರಕರಣದಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾದ ಮಡೇನೂರು ಮನು ಮತ್ತು ದೂರುದಾರೆ

ಮನರಂಜನಾ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಲೈಂಗಿಕ ಶೋಷಣೆ ಮಾಡುವುದನ್ನು ನಿಯಮದಂತೆ ಮಾಡಿಕೊಳ್ಳಲಾಗಿದೆ. ಮತ್ತೆ ಅಂಥದ್ದು ನಡೆದೇ ಇಲ್ಲ ಎಂದು ಧೈರ್ಯವಾಗಿ ಸಾರಾ ಗೋವಿಂದು ತರಹದ ನಿರ್ಮಾಪಕರು ಹೇಳುತ್ತಾರೆ. ಕಲಾವಿದೆಯರು ದೂರು ಕೊಡದಿರುವುದಕ್ಕೆ ಹತ್ತಾರು ಕಾರಣವಿದೆ. ಲೈಂಗಿಕ ಶೋಷಣೆ ಮಾಡುವುದಕ್ಕೆ ಕಾಮವಾಂಛೆ ಎಂಬ ವೀಕ್ನೆಸ್‌ ಒಂದೇ ಕಾರಣ. ಕಿರುಕುಳ ಕೊಟ್ಟ ತಕ್ಷಣ ಯಾಕೆ ದೂರು ಕೊಟ್ಟಿಲ್ಲ ಎಂಬ ಪ್ರಶ್ನೆ ಕಲಾವಿದೆಯರು ಆರೋಪ ಮಾಡಿದಾಗಲೆಲ್ಲ ಎದ್ದೆದ್ದು ಬರುತ್ತದೆ. ಆದರೆ, ಶೋಷಣೆ ಮಾಡದೇ ಉತ್ತಮ ವಾತಾವರಣದಲ್ಲಿ ಮಹಿಳೆಯರನ್ನು ಗೌರವದಿಂದ ದುಡಿಸಿಕೊಳ್ಳಬಾರದೇ ಎಂಬ ಪ್ರಶ್ನೆ ಬರುವುದೇ ಇಲ್ಲ. ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ಸಿನಿಮಾ ರಂಗದಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಸುರಕ್ಷತೆಯ ಭಾವ ಬರಲು ಸಾಧ್ಯವೇ?

ಹೇಮಾ ಕಮಿಟಿಯ ಅಧ್ಯಯನದ ಸಮಯದಲ್ಲಿ ನೋವು ಹೇಳಿಕೊಂಡವರು ತನಿಖೆಗೆ ಸಹಕರಿಸದಿರುವುದರ ಹಿಂದೆ ಈ ಸಮಾಜ ಅವರನ್ನು ನೋಡುವ, ಸ್ವೀಕರಿಸುವ ರೀತಿ ಕೂಡಾ ಪರಿಣಾಮ ಬೀರಿದೆ. ಸಿನಿಮಾ ರಂಗವನ್ನು ಆಳುತ್ತಿರುವವರು ಪುರುಷರೇ. ಅವರನ್ನು ಎದುರು ಹಾಕಿಕೊಂಡರೆ ಮುಂದೆ ಅವಕಾಶ ಮಾತ್ರವಲ್ಲ ಗೌರವದ ಬದುಕು ಸಿಗುವುದೂ ಕಷ್ಟವಾಗಬಹುದು ಎಂಬ ಆತಂಕ ಇದ್ದೇ ಇರುತ್ತದೆ.

ಭೂಮ್ತಾಯಿ | ಮದುವೆ ಊಟದ ತಟ್ಟೆಯಲ್ಲಿ ಹವಾಮಾನ ವೈಪರೀತ್ಯದ ಸುಳಿಗಾಳಿ!

ಇತ್ತೀಚೆಗೆ ಕನ್ನಡ ಸುದ್ದಿ ವಾಹಿನಿಯೊಂದು ಸ್ಟಿಂಗ್‌ ಆಪರೇಷನ್‌ ಮಾಡಿ ʼಕಮಿಟ್‌ಮೆಂಟ್‌ʼ ಹೆಸರಿನಲ್ಲಿ ಸಿನಿಮಾದಲ್ಲಿ ಅವಕಾಶ ಅರಸಿ ಬರುವ ಯುವತಿಯರನ್ನು ಲೈಂಗಿಕ ಜಾಲಕ್ಕೆ ಕೆಡಹುವ ತಂಡವನ್ನು ಬಯಲುಗೊಳಿಸಿತ್ತು. “ಕಮಿಟ್‌ಮೆಂಟ್‌ ನಿರಾಕರಿಸಿದ್ದಕ್ಕೆ ಒಂದು ವರ್ಷ ಅವಕಾಶ ಮಿಸ್‌ ಮಾಡಿಕೊಂಡೆ, ಈಗ ಅವಕಾಶ ಸಿಗುತ್ತಿದೆ” ಎಂದು ಯುವತಿಯೊಬ್ಬಳು ಹೇಳಿರುವುದು ಸಿನಿಮಾ ರಂಗದಲ್ಲಿ ಅದೆಷ್ಟು ಸ್ತ್ರೀಶೋಷಕರ ಪಡೆ ಇದೆ ಎಂಬುದನ್ನು ತೋರಿಸುತ್ತದೆ. ನಿರ್ಮಾಪಕ, ನಿರ್ದೇಶಕರ ಜೊತೆಗೆ ಎಷ್ಟು ರಾತ್ರಿಗೆ ಎಷ್ಟು ಸಂಭಾವನೆ ಎಂಬುದು ಸಿನಿಮಾದ ಶೂಟಿಂಗ್‌ ಶೆಡ್ಯೂಲ್‌ ರೀತಿಯಲ್ಲಿಯೇ ಪೂರ್ವ ನಿರ್ಧಾರವಾಗುತ್ತದೆ. ಇಷ್ಟೊಂದು ರಾಜಾರೋಷವಾಗಿ ಕಾಸ್ಟಿಂಗ್‌ ಕೌಚ್‌ ಎಂಬ ಕಾಮಕಾಂಡ ನಡೆಯುತ್ತಿದೆ. ಮನರಂಜನಾ ಕ್ಷೇತ್ರಕ್ಕೆ ಬರುವ ಹೆಣ್ಣುಮಕ್ಕಳು ಪುರುಷರ ಲೈಂಗಿಕ ಕೃಷೆ ತೀರಿಸುವ ಕಮಿಟ್‌ಮೆಂಟ್‌ಗೆ ಸಿದ್ದರಾಗಿಯೇ ಬರಬೇಕಾದ ಅತ್ಯಂತ ಕೆಟ್ಟ ಪರಿಸ್ಥಿತಿಯಿದೆ. ಇಂತಹ ಸಮಯದಲ್ಲಿ ಹೇಮಾ ಕಮಿಟಿ ಬಯಲು ಮಾಡಿದ್ದ ವಿಚಾರಗಳು ಮುನ್ನೆಲೆಗೆ ಬಂದು ಸಿನಿಮಾ ಕ್ಷೇತ್ರದಲ್ಲಿ ದಶಕಗಳ ಕಾಲ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಕಾಡಿದ್ದ ಹಲವರು ಮುಜುಗರಕ್ಕೆ ಒಳಗಾಗುವಂತೆ ಮಾಡಿತ್ತು. ಎಲ್ಲಿ ತಮ್ಮ ಹೆಸರು ಹೊರಬರುತ್ತೋ ಎಂಬ ಭಯದಲ್ಲಿ ಕೆಲವರು ಮೌನಕ್ಕೆ ಶರಣಾಗಿದ್ದರು. ಕನ್ನಡ ಚಿತ್ರ ನಿರ್ಮಾಪಕ ಸಾರಾ ಗೋವಿಂದು ಕನ್ನಡ ಚಿತ್ರರಂಗದಲ್ಲಿ ಅಂತಹದ್ದೇನೂ ನಡೆದೇ ಇಲ್ಲ ಎಂದು ಕಮಿಟಿ ರಚನೆಯಾಗಬೇಕು ಎಂದು ಮನವಿ ಕೊಟ್ಟವರ ವಿರುದ್ಧ ತಿರುಗಿಬಿದ್ದಿದ್ದರು. ವಾಣಿಜ್ಯ ಮಂಡಳಿಯಲ್ಲಿ POSH ಕಮಿಟಿ ರಚನೆಗೂ ಭಾರೀ ಡ್ರಾಮ ನಡೆದಿತ್ತು. ಕವಿತಾ ಲಂಕೇಶ್‌ ಮತ್ತಿತರರ ಪಟ್ಟಿ ಹೊರಬಿದ್ದ ನಂತರ ಆ ಪಟ್ಟಿಗೆ ತಡೆ ನೀಡಿ, ಹೊಸ ಅಧ್ಯಕ್ಷರ ಆಯ್ಕೆಯಾದ ನಂತರ ಮತ್ತೊಂದು ಕಮಿಟಿ ಮಾಡಲಾಗಿದೆ. ಹೇಮಾ ಮಾದರಿಯ ಕಮಿಟಿ ರಚನೆ ಮಾಡಿದರೆ ಕನ್ನಡ ಚಿತ್ರರಂಗಕ್ಕೆ ಕಳಂಕ ಎಂಬರ್ಥದಲ್ಲಿ ಮಾತನಾಡಿದ್ದ ಸಾರಾ ಗೋವಿಂದು ಈಗ ದೂರು ಸಮಿತಿಯ ಸದಸ್ಯ! ಹೀಗಿರುವಾಗ ಲೈಂಗಿಕ ಕಿರುಕುಳದ ಬಗ್ಗೆ ಯಾರಾದರೂ ದೂರು ನೀಡಿದರೆ ಅವರಿಗೆ ನ್ಯಾಯ ಸಿಗಬಹುದೇ?

kavita lankesh 1
ನಿರ್ದೇಶಕಿ ಕವಿತಾ ಲಂಕೇಶ್‌

ಪ್ರಕರಣ ಕೈಬಿಟ್ಟದ್ದು ತೀರಾ ನಿರಾಶಾದಾಯಕ: ಕವಿತಾ ಲಂಕೇಶ್‌

ಈ ಬಗ್ಗೆ ಈ ದಿನ.ಕಾಂ ಜೊತೆಗೆ ಮಾತನಾಡಿದ ಕನ್ನಡ ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್‌, ಇದೊಂದು ನಿರಾಶಾದಾಯಕ ಬೆಳವಣಿಗೆ ಎಂದಿದ್ದಾರೆ. “ಕಳೆದ ವರ್ಷ ಕೇರಳ ಸರ್ಕಾರ ಬಿಡುಗಡೆ ಮಾಡಿದ್ದ ಹೇಮಾ ಕಮಿಟಿ ವರದಿ, ಆ ನಂತರ ಹಲವು ನಟ, ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದ್ದು ಆಶಾಭಾವನೆ ಮೂಡಿಸಿತ್ತು. ಆದರೆ ಈಗ ಎಲ್ಲ ಪ್ರಕರಣ ಕೈ ಬಿಡುವ ಸುದ್ದಿ ನಿಜಕ್ಕೂ ನಿರಾಸೆ ಮೂಡಿಸಿದೆ. ಈಗ ಶೋಷಣೆ ಮಾಡುವವರಿಗೆ ಒಂದು ವೆಪನ್‌ ಸಿಕ್ಕಂತಾಯ್ತು. ಶೋಷಣೆಗೆ ಒಳಗಾದವರು ತನಿಖೆಗೆ ಸಹಕರಿಸುತ್ತಿಲ್ಲ ಎಂಬುದು ಸಹಜವೇ. ಬಹಳ ವರ್ಷಗಳ ಹಿಂದೆ ನಡೆದ ಅನ್ಯಾಯಕ್ಕೆ ಈಗ ಪುರಾವೆ ಒದಗಿಸುವುದು ಅಸಾಧ್ಯ. ಅಷ್ಟೇ ಅಲ್ಲ ಅವರೆಲ್ಲ ಕುಟುಂಬದೊಂದಿಗೆ ಬದುಕುತ್ತಿರುತ್ತಾರೆ. ಕೆಲವರು ಇನ್ನೂ ಚಿತ್ರರಂಗದಲ್ಲಿಯೇ ದುಡಿಯುತ್ತಿರುತ್ತಾರೆ, ಇನ್ನೂ ಏನೇನೋ ಸಮಸ್ಯೆ ಇರುತ್ತದೆ” ಎಂದು ಹೇಳಿದರು.

***

ಒಟ್ಟಿನಲ್ಲಿ ಯಾವುದೇ ಕಮಿಟಿ ಏನೇ ವರದಿ ಕೊಟ್ಟರೂ ಕೊನೆಗೆ ಕಾಸ್ಟಿಂಗ್‌ ಕೌಚ್‌ ಮುಂದುವರಿಯಲಿದೆ, ಕಮಿಟ್‌ಮೆಂಟ್‌ಗೆ ಒಪ್ಪಿದವರಿಗೆ ಅವಕಾಶ ಎಂಬ ಅಲಿಖಿತ ನಿಯಮ ಜಾರಿಯಲ್ಲಿರುತ್ತದೆ ಎಂದು ವಿಷಾಧದಿಂದಲೇ ಹೇಳಬೇಕಿದೆ. ಸಿನಿಮಾ ರಂಗವನ್ನು ಆಳುತ್ತಿರುವವರು ಪುರುಷರು. ಅಲ್ಲಿ ಮಹಿಳೆಯರ ಒಳಗೊಳ್ಳುವಿಕೆ ನಟನೆಯಿಂದಾಚೆಗೆ ಬಹಳ ವಿರಳ. ಬೆರಳೆಣಿಕೆಯ ನಿರ್ದೇಶಕಿಯರು ಇದ್ದಾರೆ. ಅಚ್ಚರಿಯೆಂದರೆ ಸಿನಿಮಾ ಪ್ರೊಡಕ್ಷನ್‌ ಸ್ಥಳಗಳಲ್ಲಿ ನಾಯಕಿಯರ ಮೇಕಪ್‌ ಮಾಡೋರು ಪುರುಷರೇ ಇದ್ದಾರೆ. ಇದು ನಿಜಕ್ಕೂ ಅಚ್ಚರಿಯ ಸಂಗತಿ. ಎಲ್ಲೆಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಬಹುದೋ ಅಲ್ಲೂ ಪುರುಷರೇ ಇದ್ದಾರೆ ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆ. ಮನರಂಜನಾ ಕ್ಷೇತ್ರದಲ್ಲಿ ಅದರಲ್ಲೂ ಪ್ರೊಡಕ್ಷನ್‌ ಹೌಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಬೇಕು. ಅಷ್ಟೇ ಅಲ್ಲ ಲೈಂಗಿಕ ಕಿರುಕುಳ ದೂರು ಸಮಿತಿಗಳು ಕಡ್ಡಾಯವಾಗಬೇಕು. ಅದರಿಂದಲಾದರೂ ಹೊಸದಾಗಿ ನಟನಾ ಕ್ಷೇತ್ರ ಆಯ್ದುಕೊಳ್ಳುವವರಿಗೆ ಭದ್ರತೆಯ ಭಾವ ಮೂಡಿಸಬಹುದು.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X