ಕೊಪ್ಪಳ | ಗಾಂಧಿ ಕನಸಿನ ಮಾದರಿ ಗ್ರಾಮ ʼಕಾಮನೂರುʼ; ನಾಲ್ಕು ದಶಕಗಳಿಂದ ಮದ್ಯ–ಗುಟ್ಕಾದಿಂದ ಮುಕ್ತ!

Date:

ಮಹಾತ್ಮ ಗಾಂಧಿಯವರ ಕನಸಾದ ಮದ್ಯಪಾನ ಮುಕ್ತ ಭಾರತದ ದಾರಿಗೆ ಹೆಜ್ಜೆ ಇಟ್ಟಿರುವ ಒಂದು ಸಣ್ಣ ಗ್ರಾಮ ಇಂದು ಕೊಪ್ಪಳ ಜಿಲ್ಲೆಯ ಹೆಮ್ಮೆಯಾಗಿದೆ. ತಾಲೂಕಿನ ಲೇಬಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ʼಕಾಮನೂರುʼ, ಕಳೆದ ನಾಲ್ಕು ದಶಕಗಳಿಂದ ಮದ್ಯಪಾನ, ಧೂಮಪಾನ ಹಾಗೂ ಗುಟ್ಕಾ ಮುಕ್ತ ಜೀವನ ಶೈಲಿಯನ್ನು ಅಳವಡಿಸಿಕೊಂಡು ಅಪರೂಪದ ಮಾದರಿ ಗ್ರಾಮವಾಗಿ ಬೆಳೆದಿದೆ. ದುಶ್ಚಟಗಳಿಂದ ದೂರವಿದ್ದು ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಇಲ್ಲಿನ ಜನ, ತಮ್ಮ ಹಸಿರು ಕೃಷಿಭೂಮಿಗಳೊಂದಿಗೆ ಗ್ರಾಮವನ್ನು ಸಿರಿವಂತವಾಗಿ ಹೊಳೆಯುವಂತೆ ಮಾಡಿದ್ದಾರೆ.

ಗ್ರಾಮದ ನಿಯಮಗಳು ಕೇವಲ ಕಾಗದಗಳಿಗೆ ಸೀಮಿತವಾಗಿಲ್ಲದೆ, ಅವುಗಳನ್ನು ಕಟ್ಟುನಿಟ್ಟಾಗಿ ಮತ್ತು ಕರಾರುವಾಕ್ಕಾಗಿ ಪಾಲನೆ ಮಾಡಲಾಗುತ್ತಿದೆ. ಇದೇ ಕಾರಣದಿಂದ ಕಾಮನೂರು ಇಂದು ನಗರೀಕರಣದ ಭರಾಟೆಯ ಹಿಡಿತಕ್ಕೆ ಸಿಲುಕದೆ, ಅಪ್ಪಟ ಹಳ್ಳಿಯ ಸೊಬಗನ್ನು, ಹಳ್ಳಿಯ ಸಂಸ್ಕೃತಿಯ ಜೀವಂತತೆಯನ್ನು ಉಳಿಸಿಕೊಂಡಿದೆ. ಇಲ್ಲಿ ಕೇವಲ ಸಾರಾಯಿ ಮಾರಾಟ ಮಾತ್ರ ನಿಷೇಧವಾಗಿಲ್ಲ, ಗ್ರಾಮದಲ್ಲಿ ಒಂದೇ ಒಂದು ಚಹಾದಂಗಡಿಯೂ ಇಲ್ಲ ಎಂಬುದು ಗಮನಾರ್ಹ ಸಂಗತಿ. ಸುಮಾರು 2.5 ರಿಂದ 3 ಸಾವಿರ ಜನರಿರುವ ಈ ಹಳ್ಳಿಯಲ್ಲಿ ಕಿರಾಣಿ ಅಂಗಡಿಗಳು ಮತ್ತು ಸಣ್ಣ ವ್ಯಾಪಾರ ಮಳಿಗೆಗಳಿದ್ದರೂ ಕೂಡಾ ಅವುಗಳಲ್ಲಿ ಗುಟ್ಕಾ ಅಥವಾ ತಂಬಾಕು ಉತ್ಪನ್ನಗಳು ದೊರೆಯುವುದಿಲ್ಲ. ಮದ್ಯಪಾನ ಮಾಡಲು ಅವಕಾಶವಿಲ್ಲದ ಕಾರಣದಿಂದ ಗ್ರಾಮದಲ್ಲಿ ಇಂತಹ ಚಟುವಟಿಕೆಗಳು ಬೇರು ಬೀಳಲು ಅವಕಾಶವೇ ಸಿಕ್ಕಿಲ್ಲ.

- Advertisement -

ಒಂದು ಕಾಲದಲ್ಲಿ ಕಾಮನೂರಿನ ಹಬ್ಬಗಳೂ ಬೇರೆಯದೇ ರೀತಿಯದ್ದಾಗಿದ್ದವು. ಮೊಹರಂ, ದೇವಿ ಮತ್ತು ದೇವರ ಜಾತ್ರೆಯಂತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವಗಳ ಸಮಯದಲ್ಲಿ ಗ್ರಾಮದಲ್ಲಿ ಸಾರಾಯಿ ಮಾರಾಟ ಜೋರಾಗಿರುತ್ತಿತ್ತು. ಆ ಸಂದರ್ಭಗಳಲ್ಲಿ ಕೆಲವರು ಕುಡಿದು ಗದ್ದಲ ಮಾಡುವುದು, ಕೂಗಾಡುವುದು, ಚೀರಾಡುವುದು ಸಹಜವಾಗಿತ್ತು. ಇಂತಹ ಪರಿಸ್ಥಿತಿಯಿಂದ ಸಣ್ಣ ಸಣ್ಣ ಕಾರಣಗಳಿಗೆ ಜಗಳ–ಕಲಹಗಳು ಉಂಟಾಗಿ ಗ್ರಾಮದ ಶಾಂತಿ ಭಂಗವಾಗುತ್ತಿತ್ತು. ಈ ಅಶಾಂತಿಯ ಅಂತ್ಯ ಮಾಡಲು ಸುಮಾರು 30–35 ವರ್ಷಗಳ ಹಿಂದೆ ಗ್ರಾಮದ ಹಿರಿಯ ಮುಖಂಡ ವೆಂಕನಗೌಡ (ದಳವಾಯಿ) ಮಾಲಿಪಾಟೀಲ್ ಅವರು ಮುಂದಾಗಿ, ದೇವಸ್ಥಾನದಲ್ಲಿ ಗ್ರಾಮಸ್ಥರ ಸಭೆ ಕರೆದು ಒಂದು ಐತಿಹಾಸಿಕ ನಿರ್ಧಾರ ಕೈಗೊಂಡರು. “ಇನ್ನು ಮುಂದೆ ಯಾರೂ ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡಬಾರದು. ಈ ತೀರ್ಮಾನವನ್ನು ಉಲ್ಲಂಘಿಸಿದರೆ ಅವರಿಗೆ ದಂಡ ವಿಧಿಸಲಾಗುವುದು” ಎಂದು ಘೋಷಿಸಿ ಪಂಚಾಯತಿಯಿಂದ ಫರ್ಮಾನೂ ಹೊರಡಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಆ ದಿನ ಗ್ರಾಮದಲ್ಲಿ ಜಾರಿಗೆ ತಂದ ಮದ್ಯ ಮಾರಾಟ ನಿಷೇಧದ ಮಹತ್ವದ ನಿರ್ಧಾರ ಕೇವಲ ಒಂದು ನಿಯಮವಾಗಿ ಉಳಿಯದೆ, ಅದು ಕಾಮನೂರಿನ ಸಂಸ್ಕೃತಿ ಮತ್ತು ಆತ್ಮಸಂಯಮದ ಭಾಗವಾಗಿಬಿಟ್ಟಿದೆ. ಹಿರಿಯ ಪೀಳಿಗೆ ಕೈಗೊಂಡ ಆ ತೀರ್ಮಾನವನ್ನು ಇಂದಿನ ಯುವ ಪೀಳಿಗೆಯೂ ಅದೇ ಶ್ರದ್ಧೆ ಮತ್ತು ಶಿಸ್ತಿನಿಂದ ಪಾಲಿಸಿಕೊಂಡು ಬರುತ್ತಿದ್ದು, ಯಾವುದೇ ಬದಲಾವಣೆಗೂ ಅವಕಾಶ ನೀಡಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿರುವ ಈ ನಂಬಿಕೆ ಮತ್ತು ಬದ್ಧತೆಯೇ ಕಾಮನೂರನ್ನು ಇಂದು ಮದ್ಯ–ಗುಟ್ಕಾ ಮುಕ್ತ ಮಾದರಿ ಗ್ರಾಮವಾಗಿ ರೂಪಿಸಿದೆ.

ಕಾಮನೂರಿನಲ್ಲಿ 4 ದೊಡ್ಡ ಪ್ರಮಾಣದ‌ ಕಿರಾಣಿ ಅಂಗಡಿಗಳು ಹಾಗೂ 6 ಸಣ್ಣ ವ್ಯಾಪಾರದ ಅಂಗಡಿಗಳಿದ್ದರೂ ಅಲ್ಲಿ ಯಾವ ಅಂಗಡಿಯಲ್ಲೂ ಗುಟ್ಕಾ ಚೀಟಿ ತೂಗು ಹಾಕಿರುವುದು ಕಾಣಸಿಗುವುದಿಲ್ಲ. ಯಾರಾದರೂ ಹೊಸದಾಗಿ ಅಂಗಡಿ ಆರಂಭಿಸಿದರೂ ಹಿಂದಿನ ಹಿರಿಯ ಗ್ರಾಮ ಮುಖಂಡರು ವಿಧಿಸಿದ್ದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಗ್ರಾಮದ ಜಾತ್ರೆ ಬಂದಾಗ ಮಾತ್ರ ನಾಲ್ಲೇ ದಿವಸ ಪರಸ್ಥಳದಿಂದ‌ ಬರುವ ವ್ಯಾಪಾರಿಗಳಿಗೆ ಹೋಟೆಲ್‌ ಇಡಲು‌ ಅವಕಾಶ ಮಾಡಿಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ಮದ್ಯಪಾನ ಯಾರೂ ಮಾರಾಟ ಮಾಡುವಂತಿಲ್ಲ ಎಂಬ ನಿಬಂಧನೆಯೂ ಇದೆಯಂತೆ.

ಗ್ರಾಮದ ಹಿರಿಯರೆಲ್ಲ ಸೇರಿ ಮದ್ಯ ಮಾರಾಟ ನಿಷೇಧಿಸುವ ತೀರ್ಮಾನ ಕೈಗೊಳ್ಳುವಾಗ ‘ಈ ಗ್ರಾಮದಲ್ಲಿ ಹೋಟೆಲ್ ಕೂಡ ಬೇಡ, ಇದರಿಂದ ಮಕ್ಕಳು ಮನೆಯ ಅಡುಗೆ ಬಿಟ್ಟು ಹೊರಗಿನ ತಿಂಡಿ ತಿನಿಸಿನ ವ್ಯಾಮೋಹಕ್ಕೆ ಒಳಗಾಗುತ್ತಾರೆ. ಹೊರಗಿನ ಆಹಾರ ಸೇವಿಸುವುದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆʼ ಎಂಬ ನಿಯಮವನ್ನೂ ಸೇರಿಸಿದ್ದಾರೆ. ಸಭೆಯಲ್ಲಿ ಮತ್ತೊಬ್ಬರು ‘ನಮ್ಮೂರಲ್ಲಿ ಸಾರಾಯಿ, ಹೋಟೆಲ್ ಬಂದ್ ಮಾಡುವುದರ ಜೊತೆಗೆ ಗುಟ್ಕಾ ಮಾರಾಟ ನಿಷೇಧವನ್ನೂ ಮಾಡಬೇಕು. ಇವುಗಳು ಗ್ರಾಮದ ಯುವಕರನ್ನ ಅಡ್ಡ ದಾರಿ ಹಿಡಿಯಲು ಕಾರಣವಾಗುತ್ತವೆ’ ಎಂದರಂತೆ. ಇದೇ ನಿಯಮಗಳನ್ನು ಈಗಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಗ್ರಾಮದ ಒಬ್ಬರೂ ನಿಬಂಧನೆಗಳನ್ನು ಮೀರಿ ನಡೆದುಕೊಳ್ಳುವುದಿಲ್ಲ ಎನ್ನುವುದು ಇತರರಿಗೆ ಮಾದರಿಯಾಗಿದೆ.

ಅಲ್ಲಿಂದ ಇಲ್ಲಿಯವರೆಗೂ ಕಾಮನೂರ ಗ್ರಾಮದಲ್ಲಿ ಮದ್ಯಪಾನ/ಪಾನೀಯ, ಹೋಟೆಲ್, ಗುಟ್ಕಾ ಸೇರಿದಂತೆ ಇತರೆ ನಶೆಯಂತ‌ಹ ಯಾವುದೇ ವಸ್ತುಗಳನ್ನೂ ಮಾರಾಟ ಮಾಡುವುದಿಲ್ಲ. ಯಾರಾದರೂ ಕೊಪ್ಪಳ ಅಥವಾ ಅಕ್ಕಪಕ್ಕದ ಹಳ್ಳಿಗೆ ಹೋಗಿ ಮದ್ಯ ಸೇವಿಸಿ ಬಂದರೂ ನಶೆಯ ಉನ್ಮಾದಿಂದ ಕಿರುಚಾಡುವುದು, ಕೂಗಾಡುವುದು ಮಾಡುವಂತಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದ್ದು ಕಂಡು ಬಂದರೆ ಅಂತವರಿಗೆ ದಂಡ ವಿಧಿಸುವುದರ ಮೂಲಕ ಶಿಕ್ಷೆಗೊಳಪಡಿಸಲಾಗುತ್ತದೆ. ಇದು ಕಟ್ಟಾಜ್ಞೆಯೂ ಹೌದು. ಯಾರೂ ಅಂಗಡಿಗಳಲ್ಲಿ ಗುಟ್ಕಾ ಮಾರಾಟ ಮಾಡಿದ್ದು ತಿಳಿದರೆ ಅವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇಂತಹ ಆದರ್ಶ ಮತ್ತು ಶಿಸ್ತುಪಾಲನೆಯ ಗ್ರಾಮವಾಗಿರುವ ಕಾಮನೂರಿಗೆ ಕಳೆದ ವರ್ಷ ಗಾಂಧಿ ಜಯಂತಿಯಂದು ಸಂಸದ ರಾಜಶೇಖರ್ ಹಿಟ್ನಾಳರು ಪಾದಯಾತ್ರೆಯ ವೇಳೆ ಭೇಟಿ ನೀಡಿ, ಗ್ರಾಮವನ್ನು ಅಧಿಕೃತವಾಗಿ ದತ್ತು ಪಡೆದುಕೊಂಡರು. ಇದರ ಫಲವಾಗಿ ಕಾಮನೂರಿನ ಅಭಿವೃದ್ಧಿಗೆ ಹೊಸ ಬಾಗಿಲು ತೆರೆಯಲ್ಪಟ್ಟಿದೆ.

ಜಿಲ್ಲಾ ಪಂಚಾಯಿತಿಯು ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿ ಹಲವು ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಂಡಿದ್ದು, ರಸ್ತೆ, ನೀರು, ಒಳಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಹಂತ ಹಂತವಾಗಿ ಮುಂದುವರಿಯುತ್ತಿವೆ. ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಕಾಮನೂರು ಇನ್ನಷ್ಟು ಸಿರಿವಂತ ಮತ್ತು ಮಾದರಿ ಗ್ರಾಮವಾಗಿ ರೂಪುಗೊಳ್ಳಲಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸುತ್ತಾರೆ.

ಕಾಮನೂರಿನ ಜನರು ಕೇವಲ ದುಶ್ಚಟಗಳಿಂದ ದೂರವಿರುವುದಲ್ಲದೆ, ತಮ್ಮ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿಯೂ ಅದೇ ಮಟ್ಟದ ಬದ್ಧತೆಯನ್ನು ತೋರಿದ್ದಾರೆ. ಶಿಕ್ಷಣದ ಮಹತ್ವವನ್ನು ಅರಿತು, ಗ್ರಾಮಸ್ಥರೇ 75 ವರ್ಷ ಹಳೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಚೈತನ್ಯ ತುಂಬಿದ್ದಾರೆ. ಶಿಕ್ಷಕರು ಮತ್ತು ದಾನಿಗಳ ಸಹಕಾರದೊಂದಿಗೆ ಅವರು ರೂ. 21 ಲಕ್ಷ ಹಣವನ್ನು ಸಂಗ್ರಹಿಸಿ ಶಾಲೆಯ ವಿಸ್ತರಣೆಗೆ ಅಗತ್ಯವಾದ 1 ಎಕರೆ 20 ಗುಂಟೆ ಜಮೀನು ಖರೀದಿಸಿದ್ದಾರೆ. ತಮ್ಮೂರಿನ ಮಕ್ಕಳ ಶೈಕ್ಷಣಿಕ ಏಳಿಗೆಗೆ ಗ್ರಾಮಸ್ಥರು ತೋರಿಸಿರುವ ಈ ಜಾಗೃತಿ ಮತ್ತು ತ್ಯಾಗಭಾವವೇ ಕಾಮನೂರಿನ ಮತ್ತೊಂದು ವಿಶಿಷ್ಟ ಗುರುತು. ಶಿಕ್ಷಣವೇ ಅಭಿವೃದ್ಧಿಯ ಬುನಾದಿ ಎಂಬ ನಂಬಿಕೆಯಿಂದ ಅವರು ಮುಂದಿನ ಪೀಳಿಗೆಯ ಬೆಳಕಿನ ದಾರಿಯನ್ನು ಕಟ್ಟುತ್ತಿದ್ದಾರೆ.

ಇದನ್ನೂ ಓದಿ: ಕೊಪ್ಪಳ | ದಶಕದ ಹಿಂದಿನ ಯಲ್ಲಾಲಿಂಗನ ಕೊಲೆ ಪ್ರಕರಣ: 9 ಆರೋಪಿಗಳ ಖುಲಾಸೆ

“ಸುಮಾರು 30 ವರ್ಷ ಆಗತ್ತೆ ಮಗಾ… ಇಲ್ಲಿವರೆಗೂ ನಮ್ಮೂರಲ್ಲಿ ಯಾರೂ ಸಾರಾಯಿ ಮಾರೋದಿಲ್ಲ. ಚಹಾದಂಗಡಿಯೂ ಇಲ್ಲ, ಗುಟ್ಕಾ–ಪಾನ್ ಪರಾಗ್ ಅಂತ ಹಾಳುಮೂಳು ವಸ್ತುಗಳನ್ನೂ ಯಾರೂ ಮಾರೋದಿಲ್ಲ. ನಾವು ಹೀಗೆ ಬದುಕೋದು ನಮ್ಮ ಮಕ್ಕಳ ಹಿತಕ್ಕಾಗಿ. ಹಳ್ಳಿಯ ಶಾಂತಿ, ಒಗ್ಗಟ್ಟು ಉಳಿಯಬೇಕೆಂದು ಎಲ್ಲರೂ ಒಂದಾಗಿ ಈ ನಿಯಮ ಪಾಲಿಸ್ತಾ ಬಂದಿದ್ದೀವಿ” ಎಂದು ಹೆಮ್ಮೆಯಿಂದ ಹೇಳಿದರು.

WhatsApp Image 2025 02 05 at 18.09.20 2
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಆಹಾರ ಕಲಬೆರಕೆಗೆ ಕಡಿವಾಣ, ಕ್ಯಾನ್ಸರ್ ಔಷಧ ದರ ಇಳಿಕೆಗೆ ಯತ್ನ: ಸಚಿವ ಖಾದರ್‌ಗೆ ಹೋಟೆಲ್ ಸಂಘದ ಶಹಬ್ಬಾಸ್!

ರಾಜ್ಯದಲ್ಲಿ ಆಹಾರ ಸುರಕ್ಷತೆ, ಹೋಟೆಲ್‌ಗಳ ಸ್ವಚ್ಛತೆ ಹಾಗೂ ಕ್ಯಾನ್ಸರ್ ಔಷಧಗಳ ಬೆಲೆ...

ಬಾಗಲಕೋಟೆ |ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಲು ಭಾರತೀಯ ಕಿಸಾನ ಸಂಘ ಆಗ್ರಹ

ಬರಗಾಲ, ಅಂತರ್ಜಲ ಕುಸಿತ, ಸುಡುಬಿಸಿಲು ಹಾಗೂ ಕೃಷಿ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ...

ಮಂಗಳೂರು | ಕಾಂತಪುರಂ ಶೇಖ್ ಅಬೂಬಕರ್ ಅಹ್ಮದ್ ಅವರಿಗೆ ಯೆನೆಪೋಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

ಪ್ರಸಿದ್ದ ಮುಸ್ಲಿಂ ಧಾರ್ಮಿಕ ಪಂಡಿತ, ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಗಳ ರೂವಾರಿ ಮುಸ್ಲಿಂ...

ಬಾಗಲಕೋಟೆ | ಪೋಲಿಯೋ ಮುಕ್ತ ಸಮಾಜದ ಸಂಕಲ್ಪ: ಬಾಗಲಕೋಟೆಯಿಂದ ವಿಜಯಪುರದವರೆಗೆ 190 ಕಿ.ಮೀ ಜಾಗೃತಿ ರ್ಯಾಲಿ

ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ರೋಟರಿ ಕ್ಲಬ್ ಬಾಗಲಕೋಟೆ ವತಿಯಿಂದ...