ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನಾಲೆಗೆ ಬಿದ್ದಿದ್ದು, ಚಾಲಕ ನಾಪತ್ತೆಯಾಗಿರುವ ಘಟನೆ ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯ ಬಳಿ ನಡೆದಿದೆ.
ತಾಲೂಕಿನ ಶಿವಳ್ಳಿ ಗ್ರಾಮದ ಲೋಕೇಶ್ ಎಂಬಾತ ತಿಬ್ಬನಹಳ್ಳಿಯ ಸ್ನೇಹಿತ ಮೋಹನ್ ಎಂಬವರ ಕಾರನ್ನು ತೆಗೆದುಕೊಂಡು ಹೋಗಿದ್ದರು. ಕಾರನ್ನು ವಾಪಸ್ ಕೊಡಲು ತಿಬ್ಬನಹಳ್ಳಿಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಸಿ ನಾಲೆಗೆ ಬಿದ್ದಿದೆ.
ರಸ್ತೆಯಿಂದ 18 ಅಡಿ ಆಳವಿದ್ದ ನಾಲೆಗೆ ಕಾರು ಬಿದ್ದಿದೆ. ಕೂಡಲೇ ಚಾಲಕ ಲೋಕೇಶ್ ಕಾರಿನ ಮೇಲೆ ಹತ್ತಿ ಕುಳಿತಿದ್ದರು. ಆದರೆ, ನೀರಿನ ರಭಸಕ್ಕೆ ಅವರು ಕೊಚ್ಚಿ ಹೋಗರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರನ್ನ ಮೇಲಕ್ಕೆತ್ತಿದ್ದಾರೆ. ಲೊಕೇಶ್ ಈಜು ಬಾರದೇ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.