ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಕುಂಜಾಲು ಜಂಕ್ಷನ್ ಆಟೋ ನಿಲ್ದಾಣದ ಮುಂಭಾಗದ ರಸ್ತೆ ಬದಿಯಲ್ಲಿ ಶನಿವಾರ ತಡರಾತ್ರಿ ಗೋವಿನ ರುಂಡ ಹಾಗೂ ಚರ್ಮ ಪತ್ತೆಯಾಗಿದ್ದು, ಈ ಬಗ್ಗೆ ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು, ವಿವಿಧ ಸಂಘಟನೆಯ ಮುಖಂಡರು ಕೋಮು ಸೌಹಾರ್ದತೆಗೆ ಧಕ್ಕೆ ಬಾರದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬರುತ್ತಿವೆ.
ಪ್ರದೀಪ್ ಎಂಬುವವರು ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ಕುಂಜಾಲ್ ಜಂಕ್ಷನ್ ಬಳಿ ಸುಮಾರು 11.30ಕ್ಕೆ ನಿಲ್ದಾಣದ ಎದುರು ರಸ್ತೆ ಮಧ್ಯದಲ್ಲಿ ಯಾರೋ ಅಪರಿಚಿಕರು ಗೋವಿನ ತಲೆ ಮತ್ತು ಚರ್ಮದ ಭಾಗವನ್ನು ಹಾಕಿರುವುದನ್ನು ಗಮನಿಸಿದ್ದಾರೆ. ಅವರು ಬ್ರಹ್ಮಾವರದ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್‌ಪಿಗಳಾದ ಸುಧಾಕರ್ ನಾಯ್, ಪಿಎ ಹೆಗಡೆ, ಬ್ರಹ್ಮಾವರದ ಸಿಪಿಐ ಗೋಪಿ ಕೃಷ್ಣ ಸೇರಿದಂತೆ ಪೊಲೀಸರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಬ್ರಹ್ಮಾವರದಿಂದ ಪೇತ್ರಿ ಮಾರ್ಗದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಇಲಾಖೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ.
ʼದುಷ್ಕರ್ಮಿಗಳನ್ನು 24 ಗಂಟೆಯೊಳಗೆ ಬಂಧಿಸಿʼ
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಸಭೆ ನಡೆಸಿ ಅಮಾನುಷ ಕೃತ್ಯ ನಡೆಸಿದ ವ್ಯಕ್ತಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆಯ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಬ್ರಹ್ಮಾವರ ಪರಿಸರದಲ್ಲಿ ಇದೇ ರೀತಿ ಘಟನೆಗಳು ಈ ಹಿಂದೆ ನಡೆದರೂ ಪೊಲೀಸ್ ಇಲಾಖೆ ಯಾವುದೇ ವ್ಯಕ್ತಿಗಳನ್ನು ಬಂಧಿಸಿಲ್ಲ. ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ಗೋ ಕಳ್ಳತನ ಜಾಲವನ್ನು ತಕ್ಷಣ ಪತ್ತೆಹಚ್ಚಿ ಮಟ್ಟಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕುಂಜಾಲು ನೂರ್ ಮಸೀದಿಯಿಂದ ಠಾಣಾಧಿಕಾರಿಗೆ ಮನವಿ
ಕುಂಜಾಲಿನ ಭಾಗದಲ್ಲಿ ಕಿಡಿಗೇಡಿಗಳು ಗೋವಿನ ಕಳೆಬರಹಗಳನ್ನು ರಸ್ತೆಗೆ ಎಸೆದಿರುವ ಘಟನೆ ರಾತ್ರಿ ನಡೆದಿರುವುದು ಖಂಡನೀಯ. ಈ ಭಾಗದಲ್ಲಿ ಇರುವ ಅನ್ಯೋನ್ಯತೆ, ಸಹೋದರತೆ ಮತ್ತು ಶಾಂತಿಯನ್ನು ಕದಡಲು ಈ ರೀತಿ ಮಾಡುತ್ತಿರುವ ಬಗ್ಗೆ ಅನುಮಾನ ಮೂಡುತ್ತಿದ್ದು, ಇಂತಹ ಘಟನೆ ಮರುಕಳಿಸದೆ ಇರುವಂತೆ ಮಾಡಲು ದುಷ್ಕರ್ಮಿಗಳನ್ನು ಕೂಡಲೇ ಬಂದಿಸುವಂತೆ ಹಾಗೂ ಮುಖ್ಯ ರಸ್ತೆಗಳ ಭಾಗದಲ್ಲಿ ಸಿಸಿ ಕ್ಯಾಮೆರಾ ಆಳವಡಿಸುವಂತೆ ಸಮಸ್ತ ಕುಂಜಾಲಿನ ಮುಸ್ಲಿಂ ಬಾಂಧವರ ಪರವಾಗಿ ನೂರ್ ಜುಮ್ಮಾ ಮಸೀದಿ ಸಮಿತಿ ಆಗ್ರಹಿಸಿದೆ.

ಈ ಬಗ್ಗೆ ಯಾವುದೇ ರಾಜಕೀಯ ಯಾವುದೇ ಸಂಘಟನೆಗಳ ಒತ್ತಡಕ್ಕೆ ಮಣಿಯದೆ ನೈಜ ಆರೋಪಿಗಳನ್ನು ಶಿಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಜಮಾಅತಿನ ಅಧ್ಯಕ್ಷರು ಮೊಹಮ್ಮದ್ ಶಬೀರ್, ಉಪಾದ್ಯಕ್ಷರು ಆಗಿರುವ ಸುಜಿದ್ ಖಾನ್, ಖಜಾಂಜಿ ಹಬೀಬ್ ಉಡುಪಿ, ಹಾತಿಂ ಸಾಹೇಬ್ ಕುಂಜಾಲ್ ಹಾಗೂ ಸ್ಥಳೀಯ ಮುಸ್ಲಿಂ ಬಾಂಧವರು ಬ್ರಹ್ಮವಾರ ಠಾಣಾಧಿಕಾರಿಗೆ ಮನವಿ ನೀಡಿದ್ದಾರೆ.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನಿಂದ ಮನವಿ
ಬ್ರಹ್ಮಾವರ ತಾಲೂಕು ಕುಂಜಾಲಿನಲ್ಲಿ ದುಷ್ಕರ್ಮಿಗಳು ಕಡಿದ ದನದ ತಲೆಯನ್ನು ಎಸೆದು ಹೋಗಿರುವುದು ಕಂಡುಬಂದಿದೆ. ಇದನ್ನು ಗಮನಿಸಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನಿಂದ ಬ್ರಹ್ಮಾವರ ಪೊಲೀಸರಿಗೆ ದೂರು ನೀಡಲಾಗಿದೆ. ಇದು ಕೋಮು ಸೌಹಾರ್ದವನ್ನು ಹಾಳುಮಾಡಲು ಎಸಗಿದ ದುಷ್ಕೃತ್ಯವಾಗಿದ್ದು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ಆಗ್ರಹಿಸಿದ್ದಾರೆ.
ಬ್ರಹ್ಮಾವರ ಕುಂಜಾಲು ರಸ್ತೆಯಲ್ಲಿ ಗೋವಿನ ರುಂಡ ಪತ್ತೆಯಾಗಿದ್ದು, ಈ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆ ತಂದೊಡ್ದುತ್ತಿರುವ ದುಷ್ಕರ್ಮಿಗಳೇ ದಕ್ಷಿಣ ಕನ್ನಡ, ಉಡುಪಿ ಹಾಗು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಮು ನಿಗ್ರಹ ದಳಕ್ಕೆ ಮೊದಲ ಟಾಸ್ಕ್ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಶ್ರೀನಿಧಿ ಹೆಗ್ಡೆ ಹೇಳಿದ್ದಾರೆ.

“ಹಿಂದೂಗಳನ್ನು ಮಾತ್ರ ದಮನಿಸಲು ಕೋಮು ನಿಗ್ರಹ ದಳವನ್ನು ಸ್ಥಾಪಿಸಲಾಗಿದೆ ಎಂದು ಭಾಜಪಾ ಹೇಳುತ್ತಿದ್ದರೂ, ಕಾಂಗ್ರೆಸ್ ಇದನ್ನು ಅಲ್ಲಗಳೆಯುತ್ತಿತ್ತು. ಆದರೆ ಈಗ ಗೋವಿನ ರುಂಡ ಪತ್ತೆಯಾಗಿದ್ದು, ಗೋ ಹತ್ಯೆ ನಡೆದು, ರಾಜಾರೋಷವಾಗಿ ಸಾಗಾಟ ಮಾಡಿದರೂ ಪೊಲೀಸ್ ಇಲಾಖೆಗೆ ಮಾಹಿತಿ ದೊರಕದಿರುವುದು ಇಲಾಖೆಯ ವೈಫಲ್ಯವನ್ನು ಜಗಜ್ಜಾಹೀರು ಮಾಡಿದೆ.
ಕಾಂಗ್ರೆಸ್ ಸರ್ಕಾರವೇ ಸ್ಥಾಪಿಸಿರುವ ಕೋಮು ನಿಗ್ರಹ ದಳಕ್ಕೆ ಇದನ್ನೇ ಮೊದಲ ಪ್ರಕರಣವನ್ನಾಗಿ ನೀಡಲಿ. ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳ ಭಾವನೆಗಳ ಬಗ್ಗೆ ಅದೆಷ್ಟು ಕಾಳಜಿ ಇದೆ ಎಂಬುದು ಈಗ ತಿಳಿಯಲಿದೆ. ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಬೇಕು” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
“ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಕುಂಜಾಲು ಪ್ರದೇಶದಲ್ಲಿ ದನದ ರುಂಡ ಪತ್ತೆಯಾದ ಘಟನೆಯು ತೀವ್ರ ವಿಷಾದನೀಯವಾಗಿದ್ದು, ಪೊಲೀಸ್ ಇಲಾಖೆ ತಕ್ಷಣ ಘಟನೆಯ ನೈಜ ವಿಷಯವನ್ನು ಪತ್ತೆಹಚ್ಚಬೇಕು. ಈ ಪ್ರಕರಣದಲ್ಲಿ ಎಲ್ಲಾದರೂ ಯಾವುದೇ ವ್ಯಕ್ತಿಗಳ ಕೈವಾಡ ಇದ್ದರೆ ಇದರ ಬಗ್ಗೆ ಕ್ರಮ ಕೈಗೊಂಡು ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು ಹಾಗೂ ಈ ಘಟನೆಯಿಂದ ಕೋಮುಸೌಹಾರ್ದತೆ ಹಾಳಾಗದಂತೆ ನೋಡಿಕೊಳ್ಳಬೇಕು” ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.

“ಇಂತಹ ಘಟನೆಗಳಿಂದ ಮನುಷ್ಯ ಮನಸ್ಸುಗಳು ಕೆಡದಂತೆ ಸುಸಂಸ್ಕೃತ ಸಮಾಜ ನೋಡಿಕೊಳ್ಳಬೇಕು. ಕೋಮು ಭಾವನೆಗಳು ಕೆರಳದಂತೆ ಜಾಗ್ರತೆ ವಹಿಸಬೇಕು ಹಾಗೂ ಆರೋಪಿಗಳು ಯಾರೇ ಆಗಿರಲಿ ಅವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ರಾಜಕೀಯ ಪಕ್ಷಗಳು ಇದನ್ನು ತಮ್ಮ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳದೆ ಆರೋಪಿಯನ್ನು ಆರೋಪಿಯನ್ನಾಗಿ ಗುರಿತಿಸಬೇಕು. ಅದನ್ನು ಬಿಟ್ಟು ಯಾವುದೇ ಧರ್ಮವನ್ನು ತೆಗಳುವುದು ವಿನಾ ಕಾರಣ ಒಂದು ಧರ್ಮವನ್ನು ಇನ್ನೊಂದು ಧರ್ಮದ ಮೇಲೆ ಎತ್ತಿಕಟ್ನುವುದನ್ನು ಮಾಡಬಾರದು” ಎಂದು ಮುಸ್ಲಿಂ ಜಮಾತ್ ಜಿಲ್ಲಾ ಸಮಿತಿ ಮನವಿ ಮಾಡಿದೆ.
“ಇದು ಕೋಮು ಸೌಹಾರ್ದವನ್ನು ಹಾಳುಮಾಡಲು ಎಸಗಿದ ದುಷ್ಕೃತ್ಯವಾಗಿರಬೇಕು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಶಾಂತಿ ಸೃಷ್ಟಿಸಲು ಕೋಮು ಸಂಘರ್ಷಕ್ಕೆ ಕಾರಣವಾಗುವ ಇಂತಹ ಹೇಯ ಕೃತ್ಯವನ್ನು ಯಾರೋ ದುಷ್ಕರ್ಮಿಗಳು ಮಾಡಿರಬಹುದು. ಸಂಬಂಧಪಟ್ಟ ಅಧಿಕಾರಿಗಳು ಅವರನ್ನು ಪತ್ತೆಹಚ್ಚಿ ತಕ್ಕ ಶಿಕ್ಷೆಯನ್ನು ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು” ಎಂದು ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟವಾದ ಸುನ್ನೀ ಕೋ-ಓರ್ಡಿನೇಶನ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
“ಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿ ಯಾರೋ ದುಷ್ಕರ್ಮಿಗಳು ಗೋವಿನ ಕಳೆಬರವನ್ನು ರಸ್ತೆಗೆ ಎಸೆದಿದ್ದು, ಕೆಲವು ಕಿಡಿಗೇಡಿಗಳು ಕೋಮು ಸೌಹಾರ್ದವನ್ನು ಹಾಳು ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿರಬಹುದು. ಇದು ಖಂಡನೀಯವಾಗಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು” ಎಂದು ಕೆಪಿಸಿಸಿ ಸಂಯೋಜಕ ಹಬೀಬ್ ಅಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗೆ ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂಜಾಲು ಎಂಬ ಪ್ರದೇಶದಲ್ಲಿ ದನದ ಕಳೇಬರಗಳನ್ನು ರಸ್ತೆಯಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ಬದುಕುತ್ತಿರುವ ಕುಂಜಾಲು ಪರಿಸರದ ಜನರ ಮನಸ್ಸಿನಲ್ಲಿ ಕೋಮು ವಿಷವನ್ನು ಬಿತ್ತಿ ಆ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಲು ಈ ರೀತಿಯ ಕೃತ್ಯಗಳನ್ನು ಮಾಡಿರುವ ಶಂಕೆಯಿದೆ. ಇದಕ್ಕಿಂತ ಮುಂಚೆಯೂ ಕೂಡ ಈ ಪರಿಸರದಲ್ಲಿ ಇಂತಹದೇ ಪ್ರಯತ್ನವನ್ನು ಕಿಡಿಗೇಡಿಗಳು ಮಾಡಿದ್ದರು. ಅಲ್ಲದೆ ದನದ ವಿಷಯದಲ್ಲಿ ರಾಜಕೀಯ ಮಾಡಿ ಪಕ್ಷವೊಂದು ಜಿಲ್ಲೆಯಲ್ಲಿ ತನ್ನ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಿತ್ತು. ಆದ್ದರಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಲಂಕುಷ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು. ಜತೆಗೆ ಇದರ ಹಿಂದೆ ಇರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಎಂದು ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
“ಬ್ರಹ್ಮಾವರ ಸಮೀಪದ ಕುಂಜಾಲುವಿನಲ್ಲಿ ಗೋವಿನ ರುಂಡವನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಬಲವಾಗಿ ಖಂಡಿಸುತ್ತದೆ. ಕಳೆದ 6 ತಿಂಗಳಲ್ಲಿ ಇದು ಮೂರನೇ ಘಟನೆ. ಈ ಮೊದಲು ಬ್ರಹ್ಮಾವರ ಹಾರಾಡಿ ಮತ್ತು ಬೈಂದೂರ್‌ನಲ್ಲಿ ಇದೇ ರೀತಿ ಕೃತ್ಯ ನಡೆಸಿದ್ದಾರೆ. ಪೋಲಿಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಡಳಿತ ಇನ್ನೊಂದು ಬ್ರಹ್ಮಾವರ ಚಲೋ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ” ಎಂದು ಶರಣ್ ಪಂಪ್ವೆಲ್ ಹೇಳಿದ್ದಾರೆ.
ಬ್ರಹ್ಮಾವರದ ಕುಂಜಾಲಿನ ಬಳಿ ಕಂಡುಬಂದ ದನದ ದೇಹದ ಭಾಗಗಳ ಕುರಿತು ಕೂಲಂಕಷವಾಗಿ ತನಿಖೆ ನಡೆಸಿ ಸೂಕ್ತ ಕಾನೂನುಕ್ರಮ ಕೈಗೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಒತ್ತಾಯಿಸಿದೆ.
ಬ್ರಹ್ಮಾವರ ತಾಲೂಕಿನ ಕುಂಜಾಲಿನ ಬಳಿ ಸತ್ತ ದನದ ಅವಯವಗಳು ಕಂಡುಬಂದಿರುವುದಾಗಿಯೂ ಹಾಗೂ ಇದನ್ನೇ ನೆಪವಾಗಿಸಿಕೊಂಡು ಸ್ಥಳದಲ್ಲಿ ಗೊಂದಲ ಹರಡುವ ಸಾಧ್ಯತೆ ಇರುದಾಗಿಯೂ ತಿಳಿದುಬಂದಿದೆ. ಇಂತಹ ಉದ್ರೇಕಕಾರಿ ಕೃತ್ಯವನ್ನು ಯಾರೇ ಮಾಡಿದ್ದರೂ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ತಾವು ತಮ್ಮ ಇಲಾಖೆಯಿಂದ ಕೂಲಂಕುಷವಾಗಿ ಈ ಕೃತ್ಯದ ʼಎಲ್ಲ ಮಗ್ಗುಲುʼಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಒಕ್ಕೂಟವು ವಿನಂತಿಸುತ್ತದೆ.
ಇದನ್ನೂ ಓದಿದ್ದೀರಾ? ಚಿತ್ರದುರ್ಗ | ಬಹುಸಂಖ್ಯಾತರ ಶೋಷಣೆ ಬದುಕಿನ ನೋವು ಅರಿಯಲು ಬುದ್ಧ ಸಾಮ್ರಾಜ್ಯ ತ್ಯಜಿಸಿದರು; ಇಮ್ಮಡಿ ಸಿದ್ಧರಾಮೇಶ್ವರ ಶ್ರೀ
“ಈ ಕೃತ್ಯವನ್ನು ಪರಿಸರದಲ್ಲಿ ಅಶಾಂತಿ ಮೂಡಿಸಲು ಮಾಡಲಾಗಿದೆಯೇ? ಕಾಡುಪ್ರಾಣಿಗಳಿಂದ ಆಗಿದೆಯೇ? ಯಾರದೇ ನಂಬಿಕೆಯನ್ನು ಘಾಸಿಗೊಳಿಸುವ ಉದ್ದೇಶದಿಂದ ಮಾಡಲಾಗಿದೆಯೇ? ಅಥವಾ ಇನ್ನಾವುದೇ ಬೇರೆ ಉದ್ದೇಶದಿಂದ ಮಾಡಲಾಗಿದೆಯೇ? ಎಂಬುದರ ಕುರಿತು ತನಿಖೆ ಮಾಡಿ ತಪ್ಪಿತಸ್ಥರ ಚಹರೆಯನ್ನು ಅನಾವರಣಗೊಳಿಸಬೇಕಾಗಿ ನಮ್ಮ ಕೋರಿಕೆ. ಅದೇ ಸಂದರ್ಭದಲ್ಲಿ ಸಮಾಜ ವಿರೋಧಿ ಶಕ್ತಿಗಳು ಈ ಸನ್ನಿವೇಶದ ದುರ್ಲಾಭ ಪಡೆದು ಪರಿಸರದಲ್ಲಿ ಅಶಾಂತಿ ಸೃಷ್ಟಿಸದಂತೆ ಹಾಗೂ ಕೋಮುದ್ವೇಷ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು” ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವು ತಮ್ಮಲ್ಲಿ ಮನವಿ ಮಾಡಿಕೊಂಡಿದೆ.
ಒಟ್ಟಿನಲ್ಲಿ ಪೊಲೀಸ್ ಇಲಾಖೆ ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದು, ತಪ್ಪಿತಸ್ಥರನ್ನು ಶೀಘ್ರವಾಗಿ ಬಂಧಿಸಿ ಸೌಹಾರ್ದತೆ, ಸಾಮರಸ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವವರಿಗೆ ತಕ್ಕ ಉತ್ತರ ನೀಡಬೇಕಾಗಿದೆ.
