ಮೇ 3 ರಿಂದ ಜನಾಂಗೀಯ ಹಿಂಸಾಚಾರದಿಂದ ನಲುಗುತ್ತಿರುವ ಈಶಾನ್ಯ ರಾಜ್ಯದ ಪರಿಸ್ಥಿತಿಯ ಬಗ್ಗೆ ಅವಲೋಕಿಸಲು ‘ಇಂಡಿಯಾ’ ಒಕ್ಕೂಟದ ವಿಪಕ್ಷ ಸಂಸದರು ಜುಲೈ 29 ಮತ್ತು 30 ರಂದು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ.
ಸಂಸತ್ತಿನ 20 ಕ್ಕೂ ಹೆಚ್ಚು ವಿರೋಧ ಪಕ್ಷದ ಸದಸ್ಯರ ನಿಯೋಗವು ಈ ವಾರಾಂತ್ಯದಲ್ಲಿ ಮಣಿಪುರಕ್ಕೆ ಭೇಟಿ ನೀಡಲಿದ್ದು, ರಾಜ್ಯದಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಲಿದೆ ಎಂದು ಲೋಕಸಭೆಯ ಕಾಂಗ್ರೆಸ್ ಉಪ ನಾಯಕ ಮಾಣಿಕಂ ಟ್ಯಾಗೋರ್ ತಿಳಿಸಿದ್ದಾರೆ.
ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡಲು ವಿರೋಧ ಪಕ್ಷದ ನಾಯಕರು ಕೆಲವು ದಿನಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಭದ್ರತೆಯ ಕಾರಣದಿಂದ ಅನುಮತಿ ನಿರಾಕರಿಸಲಾಗಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚಿಗಷ್ಟೆ ಮಣಿಪುರದ ಕೆಲವು ಸ್ಥಳಗಳಿಗೆ ಭೇಟಿ ನೀಡಿದ್ದರು. 26 ಪಕ್ಷಗಳ ಇಂಡಿಯಾ ಮೈತ್ರಿಕೂಟದ ಹಲವು ಸಂಸದರು ನಿಯೋಗದಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಕಳಂಕ ತರುತ್ತಿರುವ ಪ್ರಧಾನಿ ಮೋದಿ: ಖರ್ಗೆ
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮಾತನಾಡದೆ ಹೊರಗೆ ರಾಜಕೀಯ ಭಾಷಣ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನ ಇತಿಹಾಸದಲ್ಲಿ ದೇಶ ಇದಕ್ಕಿಂತ ಕರಾಳ ಅವಧಿಯನ್ನು ಕಂಡಿಲ್ಲ. ಮಣಿಪುರದ ಬಗ್ಗೆ ಕೇಂದ್ರ ಸರ್ಕಾರ ತೋರುತ್ತಿರುವ ಅಸಡ್ಡೆಯು ಮಾನವೀಯತೆಯ ಮೇಲಿನ ಕಳಂಕವಾಗಿದೆ. ಜನರು ಈಗ ಜಾಗೃತರಾಗಿದ್ದಾರೆ. ಈ ರೀತಿಯ ರಾಜಕೀಯದ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂದು ಖರ್ಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? 5 ವರ್ಷಗಳಿಂದ ಹೊಸ ಐಐಟಿ-ಐಐಎಂ ನಿರ್ಮಿಸಿಲ್ಲ ಎಂದ ಕೇಂದ್ರ: ಅಮೆರಿಕದಲ್ಲಿ ಸುಳ್ಳು ಹೇಳಿದ ಪ್ರಧಾನಿ!
“ಸಂಸತ್ತಿನ ಅಧಿವೇಶನ ನಡೆಯುತ್ತಿದ್ದು, ಪ್ರಧಾನಿಯವರು ಸದನದಲ್ಲಿ ಮಾತನಾಡುವ ಬದಲು ಅಲ್ಲೊಂದು ಇಲ್ಲೊಂದು ಭಾಷಣ ಮಾಡುತ್ತಾ ಪ್ರಜಾಪ್ರಭುತ್ವಕ್ಕೆ ಕಳಂಕ ತರುತ್ತಿದ್ದಾರೆ. ವಿರೋಧ ಪಕ್ಷಗಳ ಹೆಸರು ಹೇಳಿದರೆ ಮೋದಿ ಸರ್ಕಾರದ ಕುಕೃತ್ಯಗಳನ್ನು ಅಳಿಸಲು ಸಾಧ್ಯವಿಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕಳೆದ 85 ದಿನಗಳಿಂದ ಹಿಂಸಾಚಾರ ನಡೆಯುತ್ತಿರುವ ಈಶಾನ್ಯ ರಾಜ್ಯದ ಕುರಿತು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ನಡೆಯುತ್ತಿಲ್ಲ. ಸದನದಲ್ಲಿ ಪ್ರಧಾನಿಯವರು ಹೇಳಿಕೆ ನೀಡಲು ಹಾಗೂ ಮಣಿಪುರದ ಬಗ್ಗೆ ಚರ್ಚೆಗೆ ವಿಪಕ್ಷಗಳು ಒತ್ತಾಯಿಸಿವೆ.