ಭಾಷೆ ಮತ್ತು ಸಂಸ್ಕ್ರತಿ ಪರಸ್ಪರ ಪೂರಕವಾಗಿರುವಂತಹದ್ದು, ಕಾಲೇಜಿನ ವಿದ್ಯಾರ್ಥಿಗಳಿಗೆ ತುಳು ಭಾಷೆಯ ಸಾಹಿತ್ಯದ ಓದಿನ ಅಭಿರುಚಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ತುಳು ವಿದ್ವಾಂಸ ಹಾಗೂ ಮಂಗಳೂರು ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ ‘ ಅಭಿಯಾನದ ಐದನೇ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ತಲೆಮಾರಿಗೆ ತುಳು ಭಾಷೆಯನ್ನು ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿದೆ. ಹೊಸ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣವನ್ನು ತುಳುವಿನ ಪ್ರಸರಣಕ್ಕೆ ವೇದಿಕೆಯಾಗಿ ರೂಪಿಸುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ತುಳು ಅಕಾಡೆಮಿಯ ಮಾಜಿ ಸದಸ್ಯೆ ವಿಜಯ ಲಕ್ಷ್ಮೀ ರೈ ಅವರು ಮಾತನಾಡಿ, ತುಳು ಭಾಷೆ , ಸಾಹಿತ್ಯದ , ಸಂಸ್ಕ್ರತಿ ಬಗ್ಗೆ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ ಕಾರ್ಯಕ್ರಮ ಒಂದು ವಿಶಿಷ್ಟ ಪರಿಕಲ್ಪನೆಯ ಯಶಸ್ವಿ ಕಾರ್ಯಕ್ರಮ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಭಾಷೆಯಲ್ಲಿ ಅಗಾಧವಾದ ಸಾಹಿತ್ಯ ಕೃತಿಗಳು ಪ್ರಕಟಗೊಂಡಿವೆ. ಈ ಸಾಹಿತ್ಯದ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು ಅನ್ನುವ ಆಶಯದೊಂದಿಗೆ ‘ಬಲೆ ತುಳು ಓದುಗ “ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕರಾದ ಪ್ರಶಾಂತಿ ಶೆಟ್ಟಿ ಇರುವೈಲು, ಹಿರಿಯ ಛಾಯಾಚಿತ್ರಗ್ರಾಹಕ ವಿಶ್ವನಾಥ್ ಸುವರ್ಣ, ಅಕಾಡೆಮಿ ಸದಸ್ಯ ಬಾಬು ಪಾಂಗಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ? ಉಡುಪಿ | ರಸ್ತೆಯಲ್ಲಿ ದನದ ರುಂಡ ಪತ್ತೆಯಾದ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ
ಸದಸ್ಯ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯೆ ಅಕ್ಷಯ ಆರ್.ಶೆಟ್ಟಿ ನಿರೂಪಿಸಿದರು. ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂತ ಅಲೋಶಿಯಸ್ ಕಾಲೇಜಿನ 25 ವಿದ್ಯಾರ್ಥಿಗಳು ಅಕಾಡೆಮಿಯ ಗ್ರಂಥಾಲಯದ ಪುಸ್ತಕಗಳನ್ನು ಓದಿ ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.