ʼವೈದ್ಯರ ದಿನʼ ಸಾರ್ಥಕವಾಗಬೇಕಾದರೆ ವೈದ್ಯರು ಕೆಲಸ ನಿರ್ವಹಿಸುವ ಸ್ಥಳಗಳು ಅಪಾಯರಹಿತವಾಗಬೇಕಾಗಿದೆ. ವೈದ್ಯರು ಸುರಕ್ಷಿತವಾಗಿಲ್ಲ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳಾ ವೈದ್ಯರಿಗೆ ರಕ್ಷಣೆ ಇಲ್ಲ.
ಆಧುನಿಕ ಜೀವನ ಶೈಲಿ, ಆಹಾರ ಶೈಲಿ, ವ್ಯಾಯಾಮರಹಿತ ಬದುಕು, ವಿಭಕ್ತ ಕುಟುಂಬ, ಸಾಮರಸ್ಯದ ನ್ಯೂನತೆಗಳು ಅನೇಕ ದೈಹಿಕ ಮತ್ತು ಮಾನಸಿಕ ಸಾಮರಸ್ಯಗಳನ್ನು ಹುಟ್ಟುಹಾಕಿವೆ. ಅದರಲ್ಲಿ ಗಡಿಬಿಡಿ ಜೀವನ, ಸಮಯದ ಕೊರತೆ, ಅಡುಗೆ ಮಾಡಲು ಬೇಸರ, ಅದರಲ್ಲೂ ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿದ್ದರೆ ದಿಢೀರ್ ಆಹಾರವೇ ಗತಿ. ಇಲ್ಲವೇ ಫ್ರಿಡ್ಜ್‌ನಲ್ಲಿಟ್ಟಿರುವ ಹಳೆಯ ಆಹಾರವನ್ನು ಬಿಸಿ ಮಾಡಿ ತಿನ್ನುವ ಅನಿವಾರ್ಯತೆ. ಆರೋಗ್ಯಕ್ಕೆ ಶುದ್ಧವಾದ ಆಹಾರ ಸೇವನೆ ಅಗತ್ಯ. ಎಲ್ಲರಿಗೂ ತಿಳಿದ ಹಾಗೆ ಶುಚಿಯಾದ ಕೈಗಳಿಂದ ಬಿಸಿಯಾದ ಶುಚಿಯಾಗಿ ತಯಾರಿಸಿದ ಆಹಾರ ಆರೋಗ್ಯಪೂರ್ಣ.
ಬೀದಿಬದಿಯಲ್ಲಿ ತಯಾರಿಸುವ ಪಾನಿಪೂರಿ, ನ್ಯೂಡಲ್ಸ್, ಫ್ರೈಡ್‌ರೈಸ್ ಇತ್ಯಾದಿ ಆಹಾರಗಳಲ್ಲಿ ಸೇರಿಸುವ ರಾಸಾಯನಿಕಗಳು, ಕೃತಕ ಬಣ್ಣಗಳು ಕ್ಯಾನ್ಸರ್ ಕಾರಕ. ಜಂಕ್ ಫುಡ್‌ಗಳಂತೂ ಅನೇಕಾನೇಕ ರೋಗಗಳನ್ನು ಸೃಷ್ಟಿಸುತ್ತಿವೆ. ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರುತ್ತಿದೆ. ಚಿಕ್ಕಮಕ್ಕಳಲ್ಲೂ ಕಂಡುಬರುತ್ತಿರುವ ಬೊಜ್ಜು, ಮಧುಮೇಹ ಇತ್ಯಾದಿ ಖಾಯಿಲೆಗಳು ಅಧಿಕವಾಗುತ್ತಿವೆ. ಅಧಿಕ ಸಮಯ ಮೊಬೈಲ್ ಬಳಸುವುದರಿಂದ ಕಣ್ಣಿನ ದೃಷ್ಟಿ ವ್ಯತ್ಯಾಸವಾಗಿ ದೃಷ್ಟಿಪಟಲ ಕಡಿಮೆಯಾಗಿ ಕನ್ನಡಕಗಳನ್ನು ಬಳಸುವಂತಾಗಿದೆ.
ಆರೋಗ್ಯದ ಪರಿಕಲ್ಪನೆ ಬದಲಾಗಿದೆ. ಎಲ್ಲರೂ ಗೂಗಲ್ ಡಾಕ್ಟರ್‌ಗಳಾಗಿದ್ದಾರೆ. ಗೂಗಲ್ ನೋಡಿ, ಇಲ್ಲದೆ ಇರೋ ಖಾಯಿಲೆ ಇದೆ ಎನ್ನುವ ಭ್ರಮೆ ಒಂದೆಡೆಯಾದರೆ, ಸ್ವಯಂ ಚಿಕಿತ್ಸೆ ಮಾಡಿಕೊಂಡು ಅದರ ಅಡ್ಡ ಪರಿಣಾಮಗಳಿಂದ ನರಳುವುದು. ಎಷ್ಟೋ ಜನರಲ್ಲಿ ಔಷಧಿ ಒಗ್ಗದಿರುವಿಕೆ, ಅಲರ್ಜಿ, ಗಂಭೀರ ಅಲರ್ಜಿ ಸಮಸ್ಯೆ(Anaphylectic Reaction)ಯಾಗಿ ಪ್ರಾಣಾಪಾಯ ಸಂಭವಿಸಬಹುದು. ಎಷ್ಟೋ ವೇಳೆ ದಿಢೀರ್ ಮೂತ್ರ ಪಿಂಡಗಳ ವೈಫಲ್ಯತೆಯೂ ಆಗಬಹುದು.
ಇದು ಒಂದು ರೀತಿಯಾದರೆ, ಇನ್ನೊಂದೆಡೆ ಜನಸಾಮಾನ್ಯರಿಗೆ ಅತ್ಯಧಿಕ ಅನಗತ್ಯ ಕಾಳಜಿ. ವೈದ್ಯರು ಸೂಚಿಸದೇ ಹೋದರೂ ಎಕ್ಸ್ ರೇ, ಅಲ್ಟ್ರಾ ಸೌಂಡ್, ಸ್ಕ್ಯಾನಿಂಗ್, ವಿಧವಿಧವಾದ ರಕ್ತ ಪರೀಕ್ಷೆ ಮಾಡಿಸಿದರೇನೇ ಸಮಾಧಾನ. ವೈದ್ಯರು ಅಗತ್ಯವಿಲ್ಲ ಎಂದರೂ ಅವರನ್ನು ಒತ್ತಾಯಿಸಿ ಪರೀಕ್ಷೆಗಳಿಗೆ ಒಳಪಡುವವರೂ ಇದ್ದಾರೆ. ಹೆಚ್ಚು ಹಣ ಖರ್ಚುಮಾಡಿ ಪರೀಕ್ಷೆಗಳನ್ನು ಮಾಡಿಸಿದರಷ್ಟೇ ಖಾಯಿಲೆ ಬಗ್ಗೆ ವೈದ್ಯರಿಗೆ ತಿಳಿಯುತ್ತದೆ ಎಂಬುದು ಅವರ ನಂಬಿಕೆಯಾಗಿರುತ್ತದೆ.
ಈಗಿನ ವೈದ್ಯರ ಟ್ರೆಂಡ್(trend) ಬೇರೆ, ರೋಗಿಗಳನ್ನು ಮುಟ್ಟುವುದೇ ಇಲ್ಲ. ಪರೀಕ್ಷಿಸುವುದೂ ಇಲ್ಲ. ರೋಗಿಯ ತೊಂದರೆಯನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಇಲ್ಲ. ಕ್ಲಿನಿಕಲ್ ಪರೀಕ್ಷೆಯಂತೂ ಮಾಡುವುದೇ ಇಲ್ಲ. ಅಗತ್ಯವೋ, ಅನಗತ್ಯವೋ ಸರಣಿ ಪರೀಕ್ಷೆಗಳನ್ನಂತೂ ಮಾಡಿಸುತ್ತಾರೆ. ಇಂದು ಯಾವುದೇ ವೈದ್ಯರು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ. ಕಾರಣ ವೈದ್ಯ ರೋಗಿ ಸಂಬಂಧ ಹಳಸಲಾಗಿದೆ.
ಇದನ್ನು ಓದಿದ್ದೀರಾ?: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಳ: ವರದಿ ಪಡೆಯುವಂತೆ ಸೂಚಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ರೋಗಿ ಮತ್ತು ರೋಗಿಯ ಬಂಧುಗಳು ವೈದ್ಯರ ಮೇಲೆ ಕೈ ಮಾಡುವಷ್ಟು ಅಂಧಃಪತನಕ್ಕೆ ಇಳಿದಿದೆ. ನಂಬಿಕೆ ವಿಶ್ವಾಸ ಹೇಳ ಹೆಸರಿಲ್ಲದಂತಾಗಿದೆ. ಅದಕ್ಕಾಗಿ ವೈದ್ಯರಿಂದ ಅವರದಲ್ಲದ ತಪ್ಪು ಘಟಿಸಿದರೂ ಕೋರ್ಟಿಗೆಳೆಯುವ ಪರಿಸ್ಥಿತಿ ಬಂದೊದಗಿದೆ.
ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳು ನಮ್ಮ ಅವಗಾಹನೆಗೆ ನಿಲುಕುತ್ತಲೇ ಇಲ್ಲ. ಜಗತ್ತಿನಲ್ಲಿ ಹಿಂದೆಂದೂ ಕಂಡರಿಯದ ಮಾರಕ ರೋಗ ಅಬ್ಬರಿಸಿ ಕಂಗಾಲು ಮಾಡಿದ್ದನ್ನು ಮರೆಯುವಂತೆಯೇ ಇಲ್ಲ. ತದನಂತರ ಪರಿಣಾಮಗಳು ಹತ್ತುಹಲವು. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ವಯಸ್ಸಿನ ಅಂತರವಿಲ್ಲದೆ ಹೃದಯಾಘಾತ ಘಟಿಸುತ್ತಿದೆ. ಒಂದು ಮಾಹಿತಿ ಪ್ರಕಾರ ಗರ್ಭಪಾತ ಹಾಗೂ ಸಂಜಾತ ರೋಗಗಳು ಹೆಚ್ಚಾಗತೊಡಗಿವೆ. ಇನ್ನೂ ಹಲವಾರು ಸಮಸ್ಯೆಗಳು ಮುನ್ನಲೆಗೆ ಬರುತ್ತಿವೆ. ಇತ್ತೀಚಿನ ವರದಿ ಪ್ರಕಾರ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಅಧಿಕವಾಗಿದೆ.
ಕಾರ್ಪೊರೇಟ್ ಆಸ್ಪತ್ರೆಗಳಂತೂ ಒಂದು ಹೆಜ್ಜೆ ಮುಂದೆ. ಮೆಡಿಕಲ್ ಇನ್ಷೂರೆನ್ಸ್ ಮಾಡಿದವರಿಗೆಲ್ಲರಿಗೂ ಅಡ್ಮಿಟ್ ಮಾಡಿಕೊಂಡು ಕೇಳರಿಯದ ಪರೀಕ್ಷೆಗಳನ್ನು ಮಾಡಿಸಿ ʼಉಗುರಿನಲ್ಲಿ ಹೋಗುವ ಖಾಯಿಲೆಗೆ ಕೊಡಲಿʼ ಚಿಕಿತ್ಸೆ ಮಾಡಿ ಬಿಡುಗಡೆ ಮಾಡುತ್ತಾರೆ. ಇನ್ನು ಬಡ ಬಗ್ಗರಿಗೆ ಉಳಿದಿರುವುದೇ ಸರ್ಕಾರಿ ಆಸ್ಪತ್ರೆಗಳು. ನಗರ ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ತಕ್ಕಮಟ್ಟಿಗೆ ಸೌಲಭ್ಯಗಳಿವೆ. ಗುಣಮಟ್ಟದ ಚಿಕಿತ್ಸೆಯೂ ಲಭಿಸುತ್ತದೆ. ಆದರೆ ಜನಗಳ ದೊಡ್ಡ ದೂರು ಏನೆಂದರೆ, ಒಂದೊಂದು ಬಿಲ್ಡಿಂಗ್‌ಗಳಿಗೂ ಅಲೆದಾಡಿಸುತ್ತಾರೆ, ದೊಡ್ಡ ಕ್ಯೂ ಇರುತ್ತದೆ. ಕಾಯಬೇಕಾಗುತ್ತದೆ ಎಂಬುದು. ನಿಜವೇ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ದಿನಕ್ಕೆ ಒಂದು ಸಾವಿರದಿಂದ ಸಾವಿರದ ಇನ್ನೂರು ಮಂದಿ ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಎಲ್ಲರನ್ನೂ ಒಮ್ಮೆಗೇ ನೋಡಲು ಸಾಧ್ಯವೇ? ಅಲ್ಲದೆ ಆಸ್ಪತ್ರೆ ಬೆಳೆಯುತ್ತಿದ್ದ ಹಾಗೆ ಬೇರೆ ಬೇರೆ ಕಟ್ಟಡಗಳನ್ನು ಕಟ್ಟಿ ಬೇರೆ ಬೇರೆ ವಿಭಾಗಗಳನ್ನು ಸ್ಥಾಪಿಸಲಾಗಿದೆ. ಎಕ್ಸ್ ರೇ, ಲ್ಯಾಬೋರೇಟರಿ, ಪೆಥಾಲಜಿ, ಶಸ್ತ್ರಚಿಕಿತ್ಸಾ ವಿಭಾಗ, ವಾರ್ಡ್‌ಗಳು ಇತ್ಯಾದಿ ಇರುವುದರಿಂದ ಸುತ್ತಲೇಬೇಕಾದ ಅನಿವಾರ್ಯತೆ ಇದೆ.
ಬೋಧಕ ಸಿಬ್ಬಂದಿ, ಶುಶ್ರೂಶಕ ಸಿಬ್ಬಂದಿ, ಇತರೆ ಸಿಬ್ಬಂದಿಗಳ ಕೊರತೆಯ ನಡುವೆಯೂ ಸರ್ಕಾರಿ ಆಸ್ಪತ್ರೆಗಳು ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ ಎಂದರೆ ಅತಿಶಯೋಕ್ತಿ ಆಗಬಾರದು.
ʼವೈದ್ಯರ ದಿನʼ ಸಾರ್ಥಕವಾಗಬೇಕಾದರೆ ವೈದ್ಯರು ಕೆಲಸ ನಿರ್ವಹಿಸುವ ಸ್ಥಳಗಳು ಅಪಾಯರಹಿತವಾಗಬೇಕಾಗಿದೆ. ವೈದ್ಯರು ಸುರಕ್ಷಿತವಾಗಿಲ್ಲ. ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳಾ ವೈದ್ಯರಿಗೆ ರಕ್ಷಣೆ ಇಲ್ಲ. ಎಷ್ಟೋ ವೈದ್ಯರು ಹತರಾಗಿದ್ದಾರೆ. ಗಾಯಗೊಂಡಿದ್ದಾರೆ. ಅವರ ಕುಟುಂಬ ಪರಿಸ್ಥಿತಿಗಳು ಏರುಪೇರಾಗಿವೆ.
ಒಂದು ವೇಳೆ ವೈದ್ಯರು ಶಸ್ತ್ರತ್ಯಾಗ ಮಾಡಿದರೆ, ಚಿಕಿತ್ಸೆ ನೀಡದಿದ್ದರೆ ಸಮಾಜ ಏನಾಗಬಹುದು? ಆದರೂ ಏನೇ ಅಪಾಯ ಅವಘಡ, ಅಪಘಾತ ನಡೆದರೂ ವೈದ್ಯರು ಯಾವುದೇ ಸೇಡು, ನಂಜು ಇಟ್ಟುಕೊಳ್ಳದೆ, ಮನಸ್ಸು ಕಹಿಮಾಡಿಕೊಳ್ಳದೆ ಚಿಕಿತ್ಸೆ ನಡೆಸುತ್ತಲೇ ಇದ್ದಾರೆ. ವೈದ್ಯರ ದಿನದಂದು ಇವರಿಗೊಂದು ಸಲಾಂ ಹೇಳೋಣ.
ಹಾಗೆಯೇ ಭಾರತ ರತ್ನ ಡಾ.ಬಿದನ್ ಚಂದ್ರ ರಾಯ್, ಆಧುನಿಕ ಪಶ್ಚಿಮ ಬಂಗಾಳದ ಶಿಲ್ಪಿ, ಅಗ್ರಮಾನ್ಯ ವೈದ್ಯ, ಅಸಾಮಾನ್ಯ ಬುದ್ಧಿಶಕ್ತಿ ಅವರದು. ರಾಜಕೀಯ ದ್ರಷ್ಟಾರರು, ಯೋಜನಾ ಚತುರರು. ಕಲ್ಕತ್ತಾ ಕಾರ್ಪೊರೇಷನ್ನಿನ ಮೇಯರ್ ಆಗಿ, ಕಲ್ಕತ್ತಾ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ, ಬಂಗಾಳ ಪ್ರಾಂತೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ, ಭಾರತೀಯ ಮೆಡಿಕಲ್ ಕೌನ್ಸಿಲ್‌ನ ಪ್ರಥಮ ಖಾಸಗಿ ಅಧ್ಯಕ್ಷರಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ, ಸಾರ್ಥಕ ಜೀವನ ನಡೆಸಿ, ಎಲ್ಲರಿಂದಲೂ ಸೈ ಎನಿಸಿಕೊಂಡ ಮಹಾಪುರುಷರು. ಈ ದಿನ ಅವರನ್ನೂ ನೆನೆಯೋಣ.

ಡಾ. ಆರ್.ಕೆ. ಸರೋಜ
ರೇಡಿಯಾಲಜಿ ಪ್ರೊಫೆಸರ್ ಹಾಗೂ ನ್ಯೂಕ್ಲಿಯರ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು(ನಿ) ವಿಕ್ಟೋರಿಯಾ ಆಸ್ಪತ್ರೆ.
ಪ್ರಸ್ತುತ ಬೆಂಗಳೂರು ಮೆಡಿಕಲ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ (ಜಾಗತಿಕ) ಚುನಾಯಿತ ಅಧ್ಯಕ್ಷೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಲವತ್ತು ವರ್ಷಗಳ ಬೋಧನೆ. ಬರಹಗಾರ್ತಿ. ಮೂರು ಕೃತಿಗಳು ಪ್ರಕಟ.
2015ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ. 2018ರ ಚಿಕ್ಕಬಳ್ಳಾಪುರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ. 2019ರಲ್ಲಿ ವೈದ್ಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ. 2024ರಲ್ಲಿ ಶ್ರೇಷ್ಠ ವೈದ್ಯ ಪುರಸ್ಕಾರ.