- ಅಂಜನಾದ್ರಿಯಲ್ಲಿ ಬಿಜೆಪಿ ಸರ್ಕಾರ ಏನೂ ಕೆಲಸ ಮಾಡಲಿಲ್ಲ
- ಅಂಜನಾದ್ರಿ ಅಭಿವೃದ್ಧಿ ಮಾಡುವಂತೆ ಮುಖ್ಯಮಂತ್ರಿಗೆ ಮನವಿ
ಬಿಜೆಪಿಯವರು ಹಿಂದುತ್ವ ಜಪ ಬಿಟ್ಟು ಸ್ವಲ್ಪ ಭಗವಂತನ ಸೇವೆ ಮಾಡಬೇಕು ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ರಾಮ ಜಪ, ಹನುಮ ಜಪ ನಡೆದಿತ್ತು. ಆಗ ಅಂಜನಾದ್ರಿಯಲ್ಲಿ ಕೆಲಸ ಮಾಡಬಹುದಿತ್ತು. ಆದರೆ, ಬಿಜೆಪಿ ಸರ್ಕಾರ ಗಮನ ನೀಡಲಿಲ್ಲ” ಎಂದು ಕಿಡಿ ಕಾರಿದರು.
ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬರುವ ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಜನಾದ್ರಿ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದ್ದೇನೆ. ಆನೆಗುಂದಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾನೂನಾತ್ಮಕ ಕ್ರಮಕ್ಕೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂತ್ರಾಲಯದಲ್ಲಿ ರಾಮನ ವಿಗ್ರಹ; ಆಂಧ್ರದಲ್ಲಿ ಬಿಜೆಪಿಯ ಪ್ರತಿಮಾ ರಾಜಕಾರಣ
“ಅಂಜನಾದ್ರಿಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಅವರಿಗೆ ಉಳಿದುಕೊಳ್ಳಲು ಸೌಲಭ್ಯವಿಲ್ಲ. ಹೀಗಾಗಿ ಹೆಚ್ಚೆಚ್ಚು ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅಭಿವೃದ್ಧಿಗೆ ಭೂಸ್ವಾದೀನ ಕುರಿತು ರೈತರೊಂದಿಗೆ ಮಾತನಾಡುತ್ತೇನೆ. ಮೂಲ ಪ್ರಕೃತಿಗೆ ಧಕ್ಕೆಯಾಗದ ರೀತಿಯಲ್ಲಿ ಸೌಲಭ್ಯ ಕಲ್ಪಿಸಬೇಕಿದೆ. ಅಂಜನಾದ್ರಿ ಅಭಿವೃದ್ಧಿ ವಿಚಾರ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿವರಿಸುತ್ತೇನೆ” ಎಂದು ತಿಳಿಸಿದರು.
ಟಿಬಿ ಡ್ಯಾಂನಿಂದ ತಕ್ಷಣ ನೀರು ಬಿಡಬೇಕು
“ತುಂಗಭದ್ರಾ ಜಲಾಶಯಕ್ಕೆ ನೀರು ಬಂದು ನಾಲೆಗೆ ನೀರು ಬಿಡುವ ಸಂದರ್ಭದಲ್ಲಿ ಕಾಲುವೆ ದುರಸ್ಥಿ ಮಾಡುತ್ತಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು? ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ತುಂಗಭದ್ರಾ ಜಲಾಶಯದಿಂದ ನಾಲೆಗಳಿಗೆ ತಕ್ಷಣ ನೀರು ಬಿಡಬೇಕು” ಎಂದು ಒತ್ತಾಯಿಸಿದರು.