ಸಾಮಾನ್ಯ ಸಮಯಕ್ಕಿಂತ ಒಂಬತ್ತು ದಿನ ಮುನ್ನವೇ ದೇಶವನ್ನು ಮುಂಗಾರು ಮಳೆ ಆವರಿಸಿದೆ. ಜುಲೈ 8ರ ಬದಲಾಗಿ ಜೂನ್ 29ರಂದೇ ದೇಶದ್ಯಾಂತ ಮುಂಗಾರು ಆವರಿಸಿದೆ. ಇದಾದ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ, ಈ ಮುಂಗಾರಿನಲ್ಲಿ ಭಾರಿ ಮಳೆ ಮತ್ತು ಹಠಾತ್ ಪ್ರವಾಹದ ಎಚ್ಚರಿಕೆಯನ್ನು ನೀಡಿದೆ.
ಈ ಬಾರಿ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಶೇಕಡ 108ರಷ್ಟು ಅಧಿಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನು ಓದಿದ್ದೀರಾ? ಕೇರಳ ಕರಾವಳಿಗೆ ಮುಂಗಾರು ಪ್ರವೇಶ; ಮೂರು ದಿನ ಮುನ್ನವೇ ಮಳೆಗಾಲ ಆರಂಭ
ಕಳೆದ 26 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಮುಂಗಾರು ಅವಧಿಗೂ ಮುನ್ನ ದೇಶವನ್ನು ಆವರಿಸಿದೆ. ಕಳೆದ ವರ್ಷ, ಜುಲೈ 2ರಂದು ಮಾನ್ಸೂನ್ ಇಡೀ ದೇಶವನ್ನು ಆವರಿಸಿತ್ತು. ಈ ವರ್ಷ ಜೂನ್ 1ರ ಬದಲಾಗಿ ಮೇ 24ರಂದೇ ಕೇರಳವನ್ನು ಮುಂಗಾರು ಪ್ರವೇಶಿಸಿದೆ. ಇಡೀ ದೇಶವನ್ನೂ ಅವಧಿಗೂ ಮುನ್ನವೇ ಆವರಿಸಿದೆ.
ಕಳೆದ 26 ವರ್ಷಗಳಲ್ಲಿ, 2013 ಮತ್ತು 2016 (ಜೂನ್ 16), 2018 (ಜೂನ್ 29), ಮತ್ತು 2005 (ಜೂನ್ 30) ವರ್ಷಗಳಲ್ಲಿ ಜೂನ್‌ನಲ್ಲಿ ಮಾನ್ಸೂನ್ ಇಡೀ ದೇಶವನ್ನು ಆವರಿಸಿದೆ ಎಂದು ಐಎಂಡಿ ಡೇಟಾ ಹೇಳುತ್ತದೆ.
ಮುಂದಿನ ಏಳು ದಿನಗಳಲ್ಲಿ ವಾಯುವ್ಯ, ಮಧ್ಯ, ಪೂರ್ವ ಮತ್ತು ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಜೂನ್ 29 ಮತ್ತು 30ರಂದು ಜಾರ್ಖಂಡ್, ಜೂನ್ 29ರಂದು ಒಡಿಶಾದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.
ಇನ್ನು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಮತ್ತು ಪೂರ್ವ ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ, ಉತ್ತರಾಖಂಡದಾದ್ಯಂತ ಮತ್ತು ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ, ಯಮುನಾನಗರ ಜಿಲ್ಲೆ ಸೇರಿದಂತೆ ಕೆಲವೆಡೆ ಹಠಾತ್ ಪ್ರವಾಹ ಉಂಟಾಗುವ ಅಪಾಯವಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇದಲ್ಲದೆ, ಉತ್ತರ ಒಡಿಶಾ, ದಕ್ಷಿಣ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಸಮೀಪದ ಪ್ರದೇಶಗಳಲ್ಲಿಯೂ ದಿಢೀರ್ ಪ್ರವಾಹದ ಎಚ್ಚರಿಕೆ ನೀಡಿದೆ.
