“ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಉತ್ತಮ ಆಡಳಿತ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರಕಾರದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ” ಎಂದು ಜೆಡಿಎಸ್ ಪಕ್ಷದ ಮುಖಂಡರು ಆರೋಪಿಸಿದರು.
ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ರಾಜ್ಯ ಸರಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಸರಕಾರದ ವಿರುದ್ಧ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ, ತಹಶಿಲ್ದಾರ್ ಕಛೇರಿವರೆಗೆ ಮೆರವಣಿಗೆ ಹಮ್ಮಿಕೊಂಡು ತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
“ಕಾಂಗ್ರೆಸ್‌ನ ಹಿರಿಯ ನಾಯಕರೇ ದಾಖಲೆಗಳ ಸಮೇತ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದಾರೆ. ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳು ಕೊಟ್ಟು, ಸದ್ಯ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಆಗುತ್ತಿಲ್ಲ. ಇನ್ನು ವಸತಿ ಇಲಾಖೆಯಲ್ಲಂತೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಸರ್ಕಾರಿ ಆಸ್ಪತ್ರೆ ವೈದ್ಯರ ವರ್ಗಾವಣೆ: ಕರವೇ ಗಜಸೇನೆ ಖಂಡನಿಯ
“ವಸತಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಹಾಗೂ ಸಚಿವ ಝಮೀರ್ ಅಹ್ಮದ್ ವಿರುದ್ಧ ಅವರ ಪಕ್ಷದ ಶಾಸಕರೇ ಆಪಾದನೆ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಝಮೀರ್ ಅಹ್ಮದ್ ಅವರನ್ನು ಸಂಪುಟದಿಂದ ಕೈ ಬಿಡಬೇಕು” ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.
