ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಗಾರ್ಡ್ ಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಕುರಿತು ಪ್ರಕಟಿಸಿದ್ದ ವರದಿಗೆ ಸ್ಪಂದಿಸಿರುವ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
‘ಈದಿನ ಡಾಟ್ ಕಾಮ್’ ನಿನ್ನೆ (ಜೂನ್ 30) “ಗಾರ್ಡ್ ಗದ್ದೆಯ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ; ವಿದ್ಯಾರ್ಥಿಗಳ ಗೋಳು ಕೇಳೋರು ಯಾರು?” ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಇಂದು ತಾಲೂಕು ಶಿಕ್ಷಣಾಧಿಕಾರಿ ಗಣೇಶ್, ಶಾಲೆಗೆ ಭೇಟಿ ನೀಡಿ ಪ್ರಸ್ತುತ ಪರಿಸ್ಥಿತಿ ಪರಿಶೀಲಿಸಿ, ಸಂಬಂಧಿತ ಇಲಾಖೆಗಳಿಗೆ ವರದಿ ಸಲ್ಲಿಸಿದ್ದಾರೆ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ (SDMC) ಅಧ್ಯಕ್ಷ ಗಿರೀಶ್ ತಿಳಿಸಿದರು. ಜೊತೆಗೆ ಶಾಲಾ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಾದಿಕ್ ಕೂಡ ಶಾಲೆಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಅರಿವು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ವರದಿ ನೋಡಿ ಸ್ಪೂರ್ತಿಗೊಂಡ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಮಾಜಿ ಸೈನಿಕ ಶಿರೂರ್ ಪ್ರದೀಪ್ ಸಹ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ʼವಿದ್ಯಾರ್ಥಿ ಜೀವನದ ಮಹತ್ವʼದ ಕುರಿತು ಮಾರ್ಗದರ್ಶನ ನೀಡಿರುವ ಜೊತೆಗೆ ತಮ್ಮಿಂದ ಸಾಧ್ಯವಾದಷ್ಟು ಹಣದ ನೆರವನ್ನು ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತೀರ್ಥಹಳ್ಳಿ | ಗಾರ್ಡ್ ಗದ್ದೆಯ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ; ವಿದ್ಯಾರ್ಥಿಗಳ ಗೋಳು ಕೇಳೋರು ಯಾರು?

ಹಲವರು ಮುಂದಿನ ದಿನಗಳಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಈದಿನಕ್ಕೆ ಧನ್ಯವಾದ ತಿಳಿಸಿದ ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್, ʼಈ ಬೆಳವಣಿಗೆಯ ಮೂಲಕ ಶಾಲೆಯ ಭವಿಷ್ಯ ಸುಧಾರಿಸಲು ಹಲವರು ಮುಂದಾಗುತ್ತಿದ್ದಾರೆ ಎಂಬುದು ಖುಷಿಯ ಸಂಗತಿʼ ಎಂದು ಸಂತಸ ವ್ಯಕ್ತಪಡಿಸಿದರು.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.