ಮಳೆ ಕೊರತೆ, ಬಿತ್ತನೆ ಬೀಜ, ಗೊಬ್ಬರದ ಬೆಲೆ ಏರಿಕೆಯಿಂದಾಗಿ ಕಬ್ಬ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ರೈತರು ಬೆಳೆಯುವ ಟನ್ ಕಬ್ಬಿಗೆ 5,000 ರೂ. ಬೆಲೆ ನಿಗದಿ ಮಾಡಬೇಕು. ಕಳೆದ ವರ್ಷ ಕಬ್ಬು ಸರಬರಾಜು ಮಾಡಿದ ರೈತರಿಗೆ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು ಎಂದು ಸರ್ಕಾರ ಪ್ರಾಂತ ರೈತ ಸಂಘ ಒತ್ತಾಯಿಸಿದೆ.
ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘದ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಶರಣಬಸಪ್ಪ ಮಮಶೇಟ್ಟಿ, “ಕಲಬುರಗಿ ಜಿಲ್ಲೆಯ ರೈತರು ಹೆಚ್ಚಾಗಿ ಕಬ್ಬು ಬೆಳೆಯುತ್ತಿದ್ದಾರೆ. ಆದರೆ, ಬೆಳೆದ ಬೆಳೆಗೆ ಸರಿಯಾದ ಬೆಲೆ, ಲಾಭ ದೊರೆಯದೆ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಮಾಡುವ ಯುವ ರೈತರಿಗೆ ಉತ್ತಮ ಜೀವನ ನಡೆಸುವ ಭರವಸೆ ಇಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಎರಡನೇ ಸ್ಥಾನದಲ್ಲಿ ಭಾರತವಿದೆ. ಅದೇ ರೀತಿ ದೇಶದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಸುಮಾರು 5 ಕೋಟಿ ಕಬ್ಬು ಬೆಳೆಗಾರರು ದೇಶದಲ್ಲಿದ್ದಾರೆ. ರೈತರು ಒಂದು ಟನ್ ಕಬ್ಬು ಬೆಳೆಯಲು ಸುಮಾರು 3,500 ರೂಪಾಯಿ ಖರ್ಚು ಬರುತ್ತಿದೆ. ಆದರೆ, ಕಬ್ಬಿಗೆ ನಿಗದಿಯಾಗಿರುವ ಬೆಲೆ ಇದಕ್ಕಿಂತಲು ಕಡಿಮೆ ಇದೆ. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಲೆ ನಿಗಧಿಪಡಿಸಿ, ಪ್ರತಿ ಟನ್ ಕಬ್ಬಿಗೆ 5,000 ರೂ. ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ರಾಜ್ಯ ಸರ್ಕಾರ ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ನಿಯಂತ್ರಣ ಅಧಿನಿಯಮ-2013 ಹಾಗೂ ತಿದ್ದುಪಡಿ ಅಧಿನಿಯಮ -2014ರ ಕಲಂ 4 (ಎ) ಅಡಿ ಅಧಿಕಾರವನ್ನು ಚಲಾಯಿಸಿ ರಾಜ್ಯದ ಎಥೆನಾಲ್ ಉತ್ಪಾದಿಸುವ ಮತ್ತು ಉತ್ಪಾದಿಸದೆ ಇರುವ ಎಲ್ಲ ಸಕ್ಕರೆ ಕಾರ್ಖಾನೆಗಳು 2022-23ರ ಎಫ್‌ಆರ್‌ಪಿ ಜೊತೆಗೆ ಪ್ರತಿ ಟನ್‌ಗೆ 10 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಆದೇಶಿಸಿದೆ. ಅದರಂತೆ, ಚಾಮುಂಡೇಶ್ವರಿ ಸಕ್ಕರೆ ಕಂಪನಿಯು ರೈತರಿಗೆ ಸುಮಾರು ಹತ್ತೂವರೆ ಕೋಟಿ ರೂಪಾಯಿ ಹಣವನ್ನು ನೀಡಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ಪ್ರತಿಭಟನಾಕಾರರ ಬೇಡಿಕೆಗಳು
- ಒಂದು ಟನ್ ಕಬ್ಬಿಗೆ 5,000 ರೂ. ಬೆಲೆ ನಿಗಧಿಪಡಿಸಬೇಕು.
- ಡಾ. ಸ್ವಾಮಿನಾಥ್ ಆಯೋಗದ ವರದಿಯಂತೆ ಬೆಂಬಲ ಬೆಲೆ ನಿಗಧಿಪಡಿಸಬೇಕು.
- ಕಬ್ಬು ಸರಬರಾಜು ಮಾಡಿದ 14 ದಿನಗಳೊಳಗೆ ಹಣ ಪಾವತಿ ಮಾಡಬೇಕು.
- 12 ತಿಂಗಳ ಒಳಗೆ ಕಬ್ಬು ಕಟಾವು ಮಾಡಬೇಕು.
- ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಸ್, ಕಾಕಂಬಿ, ಎಥೆನಾಲ್, ಡಿಸ್ಟಿಲರಿಸ್, ಸಹವಿದ್ಯುತ್, ಬಯೋ ಕಾಂಪೋಸ್ಟ್, ಪಶು ಆಹಾರ – ಇತರೆ ಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೆ ಪಾಲು ನೀಡಬೇಕು.
- ಕಟಾವು ಮತ್ತು ಸಾಗಾಣಿಕ ವೆಚ್ಚಕ್ಕೆ ಸಂಬಂಧಪಟ್ಟಂತೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರ ನಡುವೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಸಮಿತಿ ರಚಿಸಬೇಕು.
- ಕೇಂದ್ರ ಸರ್ಕಾರ ಕಬ್ಬಿಗೆ 2023-24ನೇ ಸಾಲಿಗೆ ಎಫ್‌ಆರ್‌ಪಿ ದರವನ್ನು ಟನ್‌ಗೆ 100 ರೂ.ಗಳು ಮಾತ್ರ ಹೆಚ್ಚಳ ಮಾಡಿರುವುದು ರೈತ ವಿರೋಧಿಯಾಗಿದ್ದು, ಇದನ್ನು 500 ರೂ.ಗೆ ನಿಗಧಿಪಡಿಸಬೇಕು.
ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಸಾಯಿಬಣ್ಣ ಗುಡುಬಾ, ದಿಲೀಪ್ ಕುಮಾರ್, ಸುಭಾಷ್ ಹೋಸಮನಿ, ರಾಯಪ್ಪ ಹುರಮುಂಜಿ, ಜಾವೇದ್ ಹುಸೈನ್, ಎಂ.ಬಿ ಸಜ್ಜನ್ ಸೇರಿದಂತೆ ಹಲವಾರು ಕಬ್ಬು ಬೆಳೆಗಾರರು ಇದ್ದರು.