ಮೋದಿ-ಇಂದಿರಾ ನಡುವಣ ಐದು ಹೋಲಿಕೆಗಳು, ಇನ್ನೈದು ಭಿನ್ನತೆಗಳು

Date:

Advertisements

ಇಂದಿರಾ ಅವರು ಒಬ್ಬ ವ್ಯಕ್ತಿಯ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಅವರು ಪಿ.ಎನ್.ಹಕ್ಸರ್. ಅವರ ನಂತರ ತಮ್ಮ ಮಗ ಸಂಜಯಗಾಂಧಿಯವರ ಮಾತುಗಳನ್ನು ಕೇಳುತ್ತಿದ್ದರು. ಅದೇ ರೀತಿ ಮೋದಿಯವರು ನಂಬುವುದು ಏಕೈಕ ವ್ಯಕ್ತಿಯನ್ನು, ಅವರು ಗೃಹಮಂತ್ರಿ ಅಮಿತ್ ಶಾ. ಶಾ ಅವರು ಮೋದಿಯವರಷ್ಟೇ ಪಾರದರ್ಶಕರಹಿತ ಮತ್ತು ಸರ್ವಾಧಿಕಾರಿ ಆಳ್ವಿಕೆಯ ಸಮರ್ಥಕರುರಾಮಚಂದ್ರ ಗುಹಾ

ಇಬ್ಬರ ಕಾಲ ಮತ್ತು ಸೈದ್ಧಾಂತಿಕ ಬದ್ಧತೆಗಳು ಬೇರೆ ಬೇರೆಯಾದರೂ, ಮೋದಿ ಮತ್ತು ಇಂದಿರಾಗಾಂಧೀ ಸರ್ಕಾರಗಳ ನಡುವೆ ಎದ್ದು ಕಾಣುವ ಐದು ಹೋಲಿಕೆಗಳಿವೆ.

ತಮ್ಮ ವ್ಯಕ್ತಿತ್ವಗಳನ್ನು ದೈತ್ಯಾಕಾರದ ಪಂಥಗಳನ್ನಾಗಿ ಬೆಳೆಸಿಕೊಳ್ಳಲು ಇಬ್ಬರೂ ರಾಜಕೀಯ ಅಧಿಕಾರವನ್ನು ಹೇರಳವಾಗಿ ಬಳಸಿಕೊಂಡಿದ್ದಾರೆ. ತಾವೇ ಪಕ್ಷ ಮತ್ತು ಪಕ್ಷವೇ ತಾವು – ತಾವೇ ಸರ್ಕಾರ, ಸರ್ಕಾರವೇ ತಾವು- ತಾವೇ ದೇಶ, ದೇಶವೇ ತಾವು ಎಂದು ಘೋಷಿಸಿಕೊಂಡಿದ್ದಾರೆ ಮತ್ತು ಅದರಂತೆ ನಡೆದುಕೊಂಡಿದ್ದಾರೆ. ಈ ಸಂಬಂಧದ ಎಲ್ಲ ವೆಚ್ಚವನ್ನು ಸರ್ಕಾರಿ ಖಜಾನೆಯೇ ಭರಿಸಿದೆ. ಸುತ್ತಮುತ್ತಲ ಭಟ್ಟಂಗಿಗಳು ಈ ಪಂಥಗಳನ್ನು ಉಜ್ಜಿ ತೀಡಿ ಹೊಳಪುಗೊಳಿಸಿದ್ದಾರೆ.

Advertisements

ಪ್ರಜಾತಂತ್ರದ ಕಾರ್ಯನಿರ್ವಹಣೆಗೆ ಸಂಸ್ಥೆಗಳ ಸ್ವಾಯತ್ತತೆಗೆ ಬಹಳ ಮುಖ್ಯ. ಇಂದಿರಾ ಅವರಂತೆಯೇ ಮೋದಿ ಕೂಡ ಹಗಲಿರುಳು ಶ್ರಮಿಸಿ ಈ ಸಂಸ್ಥೆಗಳನ್ನು ಬೀಳುಗಳೆದಿದ್ದಾರೆ. ‘ಪ್ರತಿಬದ್ಧ ನೌಕರಶಾಹಿ’ ಮತ್ತು ‘ಪ್ರತಿಬದ್ಧ ನ್ಯಾಯಾಂಗ’ ಎಂಬ ಪದಪುಂಜವನ್ನು ಮೊದಲು ಹುಟ್ಟುಹಾಕಿದ್ದವರು ಇಂದಿರಾಗಾಂಧೀ. ಈ ಚಾಳಿಯನ್ನು ತನ್ನದೇ ಎಂಬಂತೆ ಜಾರಿಗೆ ತಂದು ಅರಗಿಸಿಕೊಂಡರು ಮೋದಿ. ಇಂದಿರಾ ಅವರಂತೆ ಮೋದಿ ಔಪಚಾರಿಕವಾಗಿ ತುರ್ತುಪರಿಸ್ಥಿತಿಯನ್ನು ಜಾರಿ ಮಾಡಿಲ್ಲ. ಆದರೆ ಸಾಂವಿಧಾನಿಕ ಜನತಂತ್ರದ ಪ್ರಕ್ರಿಯೆಗಳಿಗೆ ಅಷ್ಟೇ ಅನಾದರ ತೋರಿದ್ದಾರೆ. ಸತ್ಯವನ್ನು ಹತ್ತಿಕ್ಕಲು ಇಂದಿರಾ ಪತ್ರಿಕಾ ಸ್ವಾತಂತ್ರ್ಯದ ದಮನ ಮಾಡಿದರು. ಮೋದಿ ಅದೇ ಮಾಧ್ಯಮ ರಂಗವನ್ನು ಸುಳ್ಳುಗಳ ಸಾರುವ ತುತ್ತೂರಿಯನ್ನಾಗಿ ಬಗ್ಗಿಸಿಕೊಂಡಿದ್ದಾರೆ. ನೌಕರಶಾಹಿ ಮೋದಿ ಕಾಲಕ್ಕಿಂತ ಇಂದಿರಾ ಆಳ್ವಿಕೆಯಲ್ಲೇ ಹೆಚ್ಚು ಸ್ವತಂತ್ರವಾಗಿತ್ತು. ರಾಜಕೀಯ ಎದುರಾಳಿಗಳ ಬಾಯಿ ಮುಚ್ಚಿಸಲು ತನಿಖಾ ಏಜೆನ್ಸಿಗಳನ್ನು ಇಂದು ಅಂದಿಗಿಂತ ಹೆಚ್ಚು ಬಳಸಲಾಗುತ್ತಿದೆ.

ಅಮೆರಿಕದ ಅಧ್ಯಕ್ಷರು ಸರ್ವಶಕ್ತರು. ಭಾರತದ ಪ್ರಧಾನಿ ಅಮೆರಿಕೆಯ ಅಧ್ಯಕ್ಷರಂತೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಸಚಿವ ಸಂಪುಟದ ಸಹೋದ್ಯೋಗಿಗಳಷ್ಟೇ ಸಮಾನರು ಅವರು. ಆದರೆ ಸಮಾನರಲ್ಲಿ ಮೊದಲಿಗರು ಅಷ್ಟೇ ಎಂದು ಸಂವಿಧಾನ ಸಾರುತ್ತದೆ. ಸಮಾಲೋಚನೆಯ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಇಂದಿರಾ ಅವರಂತೆಯೇ ಮೋದಿ ಕೂಡ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆಯಿದು. ಇಂದಿರಾ ಅವರು ಒಬ್ಬ ವ್ಯಕ್ತಿಯ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಅವರು ಪಿ.ಎನ್.ಹಕ್ಸರ್. ಅವರ ನಂತರ ತಮ್ಮ ಮಗ ಸಂಜಯ ಗಾಂಧಿಯವರ ಮಾತುಗಳನ್ನು ಕೇಳುತ್ತಿದ್ದರು. ಅದೇ ರೀತಿ ಮೋದಿಯವರು ನಂಬುವುದು ಏಕೈಕ ವ್ಯಕ್ತಿಯನ್ನು, ಅವರು ಗೃಹಮಂತ್ರಿ ಅಮಿತ್ ಶಾ. ಶಾ ಅವರು ಮೋದಿಯವರಷ್ಟೇ ಪಾರದರ್ಶಕ ರಹಿತ ಮತ್ತು ಸರ್ವಾಧಿಕಾರಿ ಆಳ್ವಿಕೆಯ ಸಮರ್ಥಕರು.

sanjay gandhi

ಭಾರತದ ಒಕ್ಕೂಟ ಸ್ವರೂಪವನ್ನು ಇಬ್ಬರೂ ಅನಾದರದಿಂದ ಕಂಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದೆ ಇದ್ದ ರಾಜ್ಯ ಸರ್ಕಾರಗಳನ್ನು ವಜಾ ಮಾಡಲು ಸಂವಿಧಾನದ 356ನೆಯ ಅನುಚ್ಛೇದ ಬಳಸುವಲ್ಲಿ ಇಂದಿರಾ ಹಿಂದೆ ಮುಂದೆ ನೋಡಲಿಲ್ಲ. ಅಂತೆಯೇ ಮೋದಿಯವರು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸಲು, ತಾವೇ ನೇಮಿಸಿದ ರಾಜ್ಯಪಾಲರ ಹುದ್ದೆಯನ್ನು ಹತಾರಿನಂತೆ ಪ್ರಯೋಗಿಸಿದ್ದಾರೆ. ಪ್ರತಿಪಕ್ಷಗಳನ್ನು ಒಡೆದು ಜನಾದೇಶವನ್ನು ಉಲ್ಲಂಘಿಸಿ ಬಿಜೆಪಿಯ ರಾಜ್ಯ ಸರ್ಕಾರಗಳನ್ನು ನೆಡಲು ತಮ್ಮ ‘ಕುಖ್ಯಾತ ವಾಷಿಂಗ್ ಮಷೀನ್’ನ್ನು ಮೋದಿ ಮತ್ತು ಶಾ ಬಳಸಿಕೊಂಡಿದ್ದಾರೆ.

ಐದನೆಯದಾಗಿ ಇಂದಿರಾ ಅವರಂತೆ ಮೋದಿ ಕೂಡ ಅತ್ಯುಗ್ರ ರಾಷ್ಟ್ರವಾದವನ್ನು ಕೆದಕಿ ತಮ್ಮ ಪಟ್ಟವನ್ನು ಭದ್ರಪಡಿಸಿಕೊಂಡಿದ್ದಾರೆ. ಭಾರತದ ಬೇಕು-ಬೇಡಗಳು ಯಾವುವು ಎಂಬುದನ್ನು ನಿರ್ಧರಿಸಬಲ್ಲವರು, ತಾವೊಬ್ಬರೇ ಎಂದು ಬಿಂಬಿಸಿಕೊಳ್ಳಲು ತಮ್ಮ ಪಕ್ಷ, ಪ್ರಭುತ್ವ ಹಾಗೂ ಮೀಡಿಯಾವನ್ನು ಮೋದಿ ಬಳಸಿಕೊಂಡಿದ್ದಾರೆ. ಕಿವಿಗಡಚಿಕ್ಕುವ ರಾಷ್ಟ್ರವಾದದ ಗುರಾಣಿ ಮುಂದೆ ಮಾಡಿ ಎಲ್ಲ ಟೀಕೆಗಳು-ವಿಮರ್ಶೆಗಳನ್ನು ದುರುದ್ದೇಶಪೂರಿತ ಮತ್ತು ವಿದೇಶೀ ಶಕ್ತಿಗಳಿಂದ ಪ್ರೇರಿತ ಎಂದು ತಳ್ಳಿ ಹಾಕಿದ್ದಾರೆ. ಮಹಾನ್ ದೇಶಭಕ್ತ ಜಯಪ್ರಕಾಶ ನಾರಾಯಣ ಅವರನ್ನು ವಿದೇಶೀ ಏಜೆಂಟ್ ಎಂದು ಕರೆಯುವ ಹಂತಕ್ಕೆ ಹೋದರು ಇಂದಿರಾ. ಇದೀಗ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧೀ ಅವರು ಜಾರ್ಜ್ ಸೊರೋಸ್ ಅವರಿಂದ ಹಣ ಪಡೆದು ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದಾರೆಂದು ಆಪಾದಿಸಿದೆ.

ಇನ್ನು ಇಂದಿರಾ-ಮೋದಿ ಹೇಗೆ ಭಿನ್ನರಾಗಿದ್ದರು ಎಂಬುದನ್ನು ನೋಡೋಣ. ಸರ್ವಾಧಿಕಾರಿಯಾಗಿಯೂ ಸಂವಿಧಾನದಲ್ಲಿ ನಿಹಿತಗೊಂಡಿರುವ ಬಹುತ್ವ ಭಾರತದ ಮೌಲ್ಯವನ್ನು ಎತ್ತಿ ಹಿಡಿದರು ಇಂದಿರಾ. ಪೌರತ್ವವು ಭಾಷೆ, ಧರ್ಮ, ಜನಾಂಗೀಯತೆಯನ್ನು ಅವಲಂಬಿಸಿಲ್ಲ ಎಂದು ಸಂವಿಧಾನವೇ ಸಾರಿದೆ. ತತ್ವಬದ್ಧ ಜಾತ್ಯತೀತವಾದಿಯಾಗಿದ್ದ ಜವಾಹರಲಾಲ್ ನೆಹರೂ ಅಂತಹವರಿಗೆ ಕಾಂಗ್ರೆಸ್ ಅಧಿಕಾರಲ್ಲಿದ್ದ ಒಂದೇ ಒಂದು ರಾಜ್ಯಕ್ಕೂ ಮುಸ್ಲಿಮ್ ಮುಖ್ಯಮಂತ್ರಿಯ ನೇಮಕ ಮಾಡುವುದೂ ಸಾಧ್ಯವಾಗಲಿಲ್ಲ. ಆದರೆ ಇಂದಿರಾ ನಾಲ್ವರು ಮುಸ್ಲಿಮರನ್ನು ಮುಖ್ಯಮಂತ್ರಿಯಾಗಿಸಿದರು. ಸಿಖ್ ಅಂಗರಕ್ಷಕರನ್ನು ಮಂದುವರೆಸಬೇಡಿ ಎಂಬ ಕಿವಿಮಾತನ್ನೂ ಇಂದಿರಾ ತಳ್ಳಿ ಹಾಕಿದರು. ಈ ನಿಲುವು ಮುಂದೆ ಅವರ ಪ್ರಾಣವನ್ನೇ ಬಲಿ ತೆಗೆದುಕೊಂಡಿತು.

ಆದರೆ ನರೇಂದ್ರ ಮೋದಿಯವರು ಬಹುತ್ವವನ್ನು ಗಾಳಿಗೆ ತೂರಿ ಬಹುಸಂಖ್ಯಾತವಾದವನ್ನು ಬಲವಾಗಿ ಪ್ರತಿಪಾದಿಸಿರುವವರು. ಮುಸಲ್ಮಾನರು ಮತ್ತು ಕ್ರೈಸ್ತರನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸುವ ಮತ್ತು ದೇಶದ ರಾಜಕಾರಣವನ್ನು, ರಾಜಕೀಯ ಮೌಲ್ಯಗಳನ್ನು ಹಾಗೂ ಆಡಳಿತ ವೈಖರಿಯನ್ನು ಬಲಪಂಥೀಯ ಹಿಂದುಗಳೇ ತೀರ್ಮಾನಿಸುವ ಹಿಂದು ರಾಷ್ಟ್ರ ನಿರ್ಮಿಸುವಲ್ಲಿ ತೊಡಗಿರುವವರು.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮೋದಿಯವರ ಢೋಂಗಿ ಘೋಷಣೆಯನ್ನು ಅವರ ಹನ್ನೊಂದು ವರ್ಷಗಳ ಆಡಳಿತವು ಬೆತ್ತಲಾಗಿಸಿದೆ. 2014, 2019, 2024ರ ಲೋಕಸಭಾ ಚುನಾವಣೆಗಳಲ್ಲಿ ಚುನಾಯಿತರಾದ ಬಿಜೆಪಿಯ 800ಕ್ಕೂ ಹೆಚ್ಚು ಸಂಸದರಲ್ಲಿ ಒಬ್ಬರೇ ಒಬ್ಬರೂ ಮುಸ್ಲಿಮರಲ್ಲ. ಸಂಸತ್ತಿನ ಹೊರಗೆ ಭಾರತೀಯ ಮುಸಲ್ಮಾನರ ಮೇಲೆ ದೈಹಿಕ ದಾಳಿಗಳು, ಮುಸ್ಲಿಮ್ ಮನೆಗಳ ಮೇಲೆ ಬುಲ್ಡೋಝರ್ ಚಲಾಯಿಸುವಿಕೆ, ಭಾರತೀಯ ಮುಸಲ್ಮಾನರನ್ನು ಕೆಣಕುವ ಮತ್ತು ಕಳಂಕಿತರನ್ನಾಗಿಸುವ, ಅವರನ್ನು ಬಲವಂತವಾಗಿ ಬೇರೆ ದೇಶಗಳಿಗೆ ಉಚ್ಚಾಟಿಸುವ ದುರುಳ ಕ್ರಿಯೆಗಳಿಗೆ ಮೋದಿ ಬೆಂಬಲಿಗರು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ. ‘ಲಷ್ಕರ್- ಎ-ನೋಯ್ಡಾ’ ಎಂದು ಕರೆಯಲಾಗುವ ದೇಶದ ಸಮೂಹ ಮಾಧ್ಯಮಗಳ ಒಂದು ವರ್ಗ ಕೂಡ ಈ ಕ್ರಿಯೆಗಳನ್ನು ಬೆಂಬಲಿಸಿದೆ.

PM Modi Amit Shah 9

ಯಾವುದೇ ಧರ್ಮಕ್ಕೆ ಸೇರಿದವರಿದ್ದರೂ, ಈ ದೇಶವು ಎಲ್ಲ ಭಾರತೀಯರಿಗೆ ಸಮಾನವಾಗಿ ಸೇರಿದ್ದು ಎಂಬುದು ಇಂದಿರಾ ಅವರ ಗಾಢ ನಂಬಿಕೆಯಾಗಿತ್ತು. ಬಹುಸಂಖ್ಯಾತವಾದಿ ಮೋದಿ ಮತ್ತು ಬಹುತ್ವವಾದಿ ಇಂದಿರಾ ಅವರ ನಡುವಣ ಎರಡನೆಯ ದೊಡ್ಡ ವ್ಯತ್ಯಾಸವಿದು. ತುರ್ತುಪರಿಸ್ಥಿತಿಯ ಅವಧಿಯಲ್ಲಿ ತಮ್ಮ ಮಗ ಸಂಜಯ ಗಾಂಧೀ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಮತ್ತು 1980ರಲ್ಲಿ ಸಂಜಯ್ ಸಾವಿನ ನಂತರ ರಾಜೀವ ಗಾಂಧೀಯವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದ್ದರು ಇಂದಿರಾ. ಈ ನಡೆಯು ಕಾಂಗ್ರೆಸ್ ಪಕ್ಷದ ಇತಿಹಾಸ ಮತ್ತು ಪರಂಪರೆಯ ಉಲ್ಲಂಘನೆಯಾಗಿತ್ತು. ವಿನಾಶಕಾರಿ ಜನತಾಂತ್ರಿಕ ಪದ್ಧತಿಯೊಂದನ್ನು ಹುಟ್ಟಿ ಹಾಕಿತ್ತು. ಮಹಾತ್ಮಾ ಗಾಂಧೀಯವರ ನಾಲ್ವರೂ ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದರು. ಆದರೆ  ಸ್ವಾತಂತ್ರ್ಯ ಬಂದ ನಂತರ ಅವರ್ಯಾರೂ ಸಂಸದರು ಅಥವಾ ಮಂತ್ರಿಗಳಾಗಲಿಲ್ಲ.

ದೇಶದ ಅತ್ಯಂತ ಹಿರಿಯ ರಾಜಕೀಯ ಪಕ್ಷವೊಂದನ್ನು ಕೌಟುಂಬಿಕ ಉದ್ಯಮವನ್ನಾಗಿ ಪರಿವರ್ತಿಸಿದ್ದರು ಇಂದಿರಾ. ಅವರ ಆ ಕ್ರಿಯೆ ಇತರೆ ಪಕ್ಷಗಳ ನಾಯಕರನ್ನೂ ಹುರಿದಂಬಿಸಿತ್ತು. ಶಿವಸೇನೆ, ಡಿಎಂಕೆ, ಅಕಾಲಿದಳ, ಟಿ.ಎಂ.ಸಿ. ಒಂದು ಕಾಲಕ್ಕೆ ಪ್ರಾದೇಶಿಕ ಸ್ವಾಭಿಮಾನದ ಪ್ರತೀಕಗಳೆನಿಸಿದ್ದವು. ಆದರೆ ಇದೀಗ ಕುಟುಂಬ ರಾಜಕಾರಣದ ಗೂಡುಗಳಾಗಿ ಹೋಗಿವೆ. ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳ ಕೂಡ ಇದೇ ಸಾಲಿಗೆ ಸೇರಿವೆ.

ಮೋದಿಯವರ ತಂದೆ ತಾಯಿ ರಾಜಕೀಯದಲ್ಲಿರಲಿಲ್ಲ. ಮೋದಿಗೆ ಮಕ್ಕಳೂ ಇಲ್ಲ. ಈ ಅಂಶಗಳು ಅವರ ಪಾಲಿಗೆ ಭಾರೀ ಅನುಕೂಲಕಾರಿ. ಅವರ ರಾಜಕೀಯ ಪ್ರತಿಸ್ಪರ್ಧಿಯನ್ನು ರಾಜೀವ್-ಸೋನಿಯಾಗಾಂಧೀ ಮಗ ಮತ್ತು ಇಂದಿರಾಗಾಂಧೀ ಅವರ ಮೊಮ್ಮಗ ಎಂಬ ಕಾರಣಕ್ಕಾಗಿ ಎತ್ತರದ ಸ್ಥಾನದಲ್ಲಿ ಕುಳ್ಳಿರಿಸಲಾಗಿದೆ. ಪ್ರತಿಯಾಗಿ ಮೋದಿಯವರು ಸ್ವಂತ ಪ್ರಯತ್ನದಿಂದ ಮೇಲೆ ಬಂದವರು ಮತ್ತು ರಾಹುಲ್ ವಂಶಾಡಳಿತದ ಪ್ರತೀಕ ಎಂಬ ಅಂಶಗಳು ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿಗೆ ದೊಡ್ಡ ಕೊಡುಗೆ ನೀಡಿವೆ. ಮುಂದಿನ ಚುನಾವಣೆಯಲ್ಲೂ ಈ ಅಂಶಗಳು ಬಿಜೆಪಿಗೆ ನೆರವಾಗಬಹುದು. ಈ ಕಟುವಾಸ್ತವವು ಹಿಂದೂ ಬಹುಸಂಖ್ಯಾತವಾದದ ವಿರೋಧಿಗಳೂ, ಸದುದ್ದೇಶವಾದಿಗಳೂ ಆಗಿರುವವರ ಗಂಟಲಲ್ಲಿ ಸುಲಭವಾಗಿ ಇಳಿಯಲಾರದು.

ಇದನ್ನೂ ಓದಿ ಮೋದಿ-ಟ್ರಂಪ್ ಸಂಬಂಧ ಗಟ್ಟಿ; ಅಮೆರಿಕ-ಭಾರತ ಒಪ್ಪಂದ ಘೋಷಣೆ ಶೀಘ್ರ: ಶ್ವೇತಭವನ

ಭಾರತದ ಈವರೆಗಿನ ಎಲ್ಲ ಪ್ರಧಾನಮಂತ್ರಿಗಳ ಪೈಕಿ ಸ್ವಭಾವತಃ ಸರ್ವಾಧಿಕಾರಿ ಪ್ರವೃತ್ತಿಗಳಿರುವವರು ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ. ಇಬ್ಬರ ಪೈಕಿ ಯಾರದು ಕೆಟ್ಟದ್ದು? ಅಭಿವ್ಯಕ್ತಿ ಸ್ವಾತಂತ್ರ್ಯದ ಅಂಶದಲ್ಲಿ ಈಗಿನ ಪರಿಸ್ಥಿತಿ ತುಸು ಮೇಲು. ಸತ್ಯವನ್ನು ಹೇಳಬೇಕಾದ ರೀತಿಯಲ್ಲಿ ಹೇಳುತ್ತಿರುವ ಕೆಲವು ಪ್ರಾದೇಶಿಕ ಪತ್ರಿಕೆಗಳು ಮತ್ತು ಕೆಲವು ಸ್ವತಂತ್ರ ವೆಬ್ ಸೈಟ್ ಗಳು ಅಸ್ತಿತ್ವದಲ್ಲಿವೆ. ಇದೇ ರೀತಿ ರಾಜಕೀಯ ವಿರೋಧಕ್ಕೆ ಹೆಚ್ಚು ಆವರಣವಿದೆ, ಯಾಕೆಂದರೆ ಅರ್ಧ ಡಜನ್ ಗೂ ಹೆಚ್ಚು ರಾಜ್ಯ ಸರ್ಕಾರಗಳು ಬಿಜೆಪಿಯ ಕಡು ವಿರೋಧಿಗಳು. ತುರ್ತುಪರಿಸ್ಥಿತಿಯಲ್ಲಿ ಒಂದು ರಾಜ್ಯವನ್ನು ಬಿಟ್ಟರೆ ಉಳಿದೆಲ್ಲವೂ ಕಾಂಗ್ರೆಸ್ ನಿಯಂತ್ರಣದಲ್ಲಿದ್ದವು.

ಆದರೆ 2014ರ ಮೇ ತಿಂಗಳಿನಿಂದ ನಮ್ಮ ಸಾರ್ವಜನಿಕ ಸಂಸ್ಥೆಗಳು ರಾಜಕೀಯ ಹಸ್ತಕ್ಷೇಪದಿಂದಾಗಿ ದುರಸ್ತಿಯಾಗದಷ್ಟು ಜಖಂ ಆಗಿವೆ. ನೌಕರಶಾಹಿ ಮತ್ತು ರಾಜದೂತ ಸಿಬ್ಬಂದಿಗಳು ಆಳುವವರಿಗೆ ಸಂಪೂರ್ಣ ಶರಣಾಗಿವೆ. ಉಚ್ಚ ನ್ಯಾಯಾಂಗದ್ದು ಹೆಚ್ಚು ಕಡಿಮೆ ಇದೇ ಸ್ಥಿತಿ. ಆದರೆ ಕೊಂಚ ಕಮ್ಮಿ ಎಂದೇ ಹೇಳಬಹುದು. ತೆರಿಗೆ ಅಧಿಕಾರಿಗಳು ಮತ್ತು ರೆಗ್ಯೂಲೇಟರಿ ಏಜೆನ್ಸಿಗಳು ತಮ್ಮ ರಾಜಕೀಯ ಒಡೆಯರ ಸೇವೆಗೆ ಹಿಂದೆಂದಿಗಿಂತಲೂ ಹೆಚ್ಚು ಟೊಂಕ ಕಟ್ಟಿವೆ. ಚುನಾವಣಾ ಆಯೋಗವೂ ಅಷ್ಟೇ.

ಅಂತಿಮವಾಗಿ ಮೋದಿಯವರ ಮೂಗಿನ ಕೆಳಗೆ ಧರ್ಮಾಂಧತೆಯ ವಿಷ ಬಹುದೂರಕ್ಕೆ, ಅತ್ಯಂತ ಆಳಕ್ಕೆ, ಅಗಲಕ್ಕೆ ಹಬ್ಬಿರುವುದು ಅತ್ಯಂತ ಚಿಂತಾಕ್ರಾಂತ ಬೆಳವಣಿಗೆ. ದಿನನಿತ್ಯದ ಬದುಕಿನಲ್ಲಿ ಮತ್ತು ಹಿರಿಯ ಸಚಿವರ (ಗೃಹ ಸಚಿವರು ಮತ್ತು ಕೆಲವೊಮ್ಮೆ ಪ್ರಧಾನಿಯವರೂ ಸೇರಿದಂತೆ), ವಿಶೇಷವಾಗಿ ಉತ್ತರಪ್ರದೇಶ ಮತ್ತು ಅಸ್ಸಾಮ್ ಮುಖ್ಯಮಂತ್ರಿಗಳ ಭಾಷಣಗಳು ಮತ್ತು ವರ್ತನೆಯಲ್ಲಿ ಹೆಚ್ಚು ಹೆಚ್ಚು ನಂಜು ಕಾರತೊಡಗಿದ್ದಾರೆ. ಒಂದು ಕಾಲಕ್ಕೆ ಜಾತ್ಯತೀತತೆ ಮತ್ತು ಪಂಥ ನಿರಪೇಕ್ಷತೆಯ ಹೆಮ್ಮೆಗೆ ಹೆಸರಾಗಿದ್ದ ಭಾರತೀಯ ಸೇನೆಯನ್ನು ಹಿಂದೂ ಧರ್ಮ ಮತ್ತು ಹಿಂದೂ ಪ್ರಾಬಲ್ಯವನ್ನು ಬಹಿರಂಗ ನಿಷ್ಠೆ ತೋರಬೇಕೆಂದು ತಾಕೀತು ಮಾಡಲಾಗುತ್ತಿದೆ. ಸರ್ವಾಧಿಕಾರದೊಂದಿಗೆ ಬಹುಸಂಖ್ಯಾವಾದದ ಬೆಸುಗೆಯು ನರೇಂದ್ರ ಮೋದಿಯ ವೈಖರಿಯ ಆಡಳಿತದ ಅತ್ಯಂತ ಹಾನಿಕಾರಕ ಅಂಶ. ಅವರು ಅಧಿಕಾರದಿಂದ ಕೆಳಗಿಳಿದ ನಂತರವೂ ಈ ದುಸ್ಥಿತಿಯ ದುರಸ್ತಿಗೆ ದಶಕಗಳೇ ಹಿಡಿಯಬಹುದು.

(ಸೌಜನ್ಯ- ದಿ ಟೆಲಿಗ್ರ್ಯಾಫ್)
ಬರಹ : ರಾಮಚಂದ್ರ ಗುಹಾ. ಅನುವಾದ- ಡಿ.ಉಮಾಪತಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X