ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ದಾವಣಗೆರೆ ಜಿಲ್ಲಾ ಜವಾಹರ್ ಬಾಲ್ ಮಂಚ್ ವತಿಯಿಂದ ಮಾದಕ ವಸ್ತುಗಳು ಸಮಾಜಕ್ಕೆ ಹಾಗೂ ದೇಶಕ್ಕೆ ಮಾರಕ ಎಂಬ ಘೋಷವಾಕ್ಯದೊಂದಿಗೆ ಮಾದಕವಸ್ತು ವಿರೋಧಿ ಆಂದೋಲನವನ್ನು ಸಿದ್ಧಗಂಗಾ ಶಾಲಾ ಮಕ್ಕಳಿಂದ ಬೃಹತ್ ಮಾನವ ಸರಪಳಿ ಹಾಗೂ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಮಾದಕವಸ್ತು ವಿರೋಧಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ “ಡ್ರಗ್ಸ್, ಗಾಂಜಾ ಸೇರಿದಂತೆ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಸೇವಿಸಬೇಡಿ. ಇದರ ದಾಸರಾದರೆ ಭವಿಷ್ಯವೇ ಸರ್ವನಾಶವಾಗುತ್ತದೆ. ಹಾಗಾಗಿ, ಯುವಪೀಳಿಗೆಯಲ್ಲಿ ಮಾದಕ ವಸ್ತುಗಳ ಅಪಾಯ ಕುರಿತಂತೆ ಹೆಚ್ಚಾಗಿ ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ. ಮಾದಕ ವಸ್ತುಗಳ ದಾಸರಾಗದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
“ಮಾದಕ ವಸ್ತುಗಳ ದಾಸರಾಗಿ ಯುವಪೀಳಿಗೆ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ, ರಾಜ್ಯ ಸರ್ಕಾರವು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿವೆ. ಗಾಂಜಾ ಸೇವನೆ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಶದ ಅಭಿವೃದ್ಧಿ ದೃಷ್ಟಿಗೂ ಕಂಟಕ. ಇದಕ್ಕೆ ಕಡಿವಾಣ ಹಾಕಬೇಕಿದೆ. ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಯಾವಾಗಲೂ ಮಾದಕ ವಸ್ತುಗಳ ಸೇವನೆ ಮಾಡುವುದಿಲ್ಲ. ಇಂಥವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ” ಎಂದು ಸಲಹೆ ನೀಡಿದರು.
ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಮಾತನಾಡಿ, “ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಯುವಪೀಳಿಗೆಯವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಸಾವಿರಾರು ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ, ಕಾಲ್ನಡಿಗೆ ಜಾಥಾದ ಮೂಲಕ ಅರಿವು ಮೂಡಿಸಲಾಗುತ್ತಿದೆ. ಉತ್ತಮ ಸ್ಪಂದನೆ ಸಿಕ್ಕಿದೆ. ಬಿತ್ತಿಪತ್ರ ಹಿಡಿದು ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಇದು ಜನರ ಗಮನವನ್ನೂ ಸೆಳೆಯಿತು. ಇದು ಸಂತಸ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
“ಮಾದಕ ವ್ಯಸನಿಗಳಾಗಿ ಎಷ್ಟೋ ಮಂದಿ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಕೆಲವರು ದಾಸರಾದ ಬಳಿಕ ಬಿಡಲು ಸಾಧ್ಯವಾಗದೇ ಆತ್ಮಹತ್ಯೆ ದಾರಿ ಹಿಡಿದಿರುವ ಪ್ರಕರಣಗಳು ನಮ್ಮ ಕಣ್ಮುಂದೆ ಇವೆ. ಯುವ ಜನರು ಇಂಥ ವಸ್ತುಗಳ ದಾಸರಾಗದೇ ಉತ್ತಮ ಜೀವನ ಕಂಡುಕೊಳ್ಳಬೇಕು. ವಿದ್ಯಾರ್ಥಿ ದಿಸೆಯಿಂದಲೇ ಓದಿನತ್ತ ಹೆಚ್ಚು ಆಸಕ್ತಿ ವಹಿಸಬೇಕು. ಪೋಷಕರು ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗುತ್ತಾರೆ. ಇದನ್ನು ಅರಿತು ಯುವಕ ಮತ್ತು ಯುವತಿಯರು ಕಷ್ಟಪಟ್ಟು ಓದಿದರೆ ಭವಿಷ್ಯ ಉಜ್ವಲವಾಗಿರುತ್ತದೆ” ಎಂದು ತಿಳಿಸಿದರು.
“ಕ್ಷಣಿಕವಾಗಿ ಸಿಗುವ ಆನಂದಕ್ಕೋಸ್ಕರ ಡ್ರಗ್ಸ್, ಗಾಂಜಾ ಸೇವನೆ, ಧೂಮಪಾನ, ಮದ್ಯಪಾನದಂಥ ವ್ಯಸನಗಳಿಗೆ ಯುವಜನಾಂಗ ದಾಸರಾಗಿಬಿಡುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಜೊತೆಗೆ ತಡೆಯುವ ಕೆಲಸ ಜರೂರಾಗಿ ಆಗಬೇಕು. ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆಗದು. ಪೋಷಕರು ಹಾಗೂ ಸಾರ್ವಜನಿಕರು ಯಾರೇ ಮಾದಕ ವಸ್ತು, ಗಾಂಜಾ ಸೇರಿದಂತೆ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕು. ಆಗ ಮಾತ್ರ ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸೈನಿಕ ಹುಳುಗಳ ಹಾವಳಿಗೆ ನಲುಗಿದ ಮೆಕ್ಕೆಜೋಳ; ರೈತರ ನೆರವಿಗೆ ಬರಬೇಕಿದೆ ಕೃಷಿ ವಿಜ್ಞಾನ, ಸರ್ಕಾರ
ಸಿದ್ದಗಂಗಾ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಬಿತ್ತಿ ಪತ್ರಗಳನ್ನು ಹಿಡಿದು ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಿದರು. ಈ ವೇಳೆ ಜವಾಹರ್ ಬಾಲ್ ಮಂಚ್ ರಾಜ್ಯಾಧ್ಯಕ್ಷ ಹೆಚ್. ಜಿ. ಮೈನುದ್ದಿನ್, ಜಿಲ್ಲಾ ಪದಾಧಿಕಾರಿಗಳಾದ ಫಯಾಜ್ ಅಹ್ಮದ್, ಕೆ. ಹೆಚ್. ಪ್ರೇಮಾ, ನಾಗರಾಜ್, ಶಿಲ್ಪಾ, ಭರತ್, ವೀರೇಶ್, ಅಫ್ರೀದ್, ಪ್ರವೀಣ್, ರಾಜ್ಯ ಪದಾಧಿಕಾರಿಗಳಾದ ಲಿಯಾಖತ ಆಲಿ, ಸಲ್ಮಾ ಬಾನು, ಖಾಜ, ಅಮ್ಜದ್, ಯುವ ಕಾಂಗ್ರೆಸ್ ಮುಖಂಡರಾದ ಮುಜಾಹಿದ್, ಹರೀಶ್, ಭಾಷಾ ಮತ್ತಿತರರು ಹಾಜರಿದ್ದರು.