ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಶ್ರೀರಾಮ ಸೇನೆಯ ಐವರು ಕಾರ್ಯಕರ್ತರನ್ನು ಕಟ್ಟಿ ಥಳಿಸಿದ ಘಟನೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಕೋಮು ಸಂಘರ್ಷ ಘಟನೆ ಅಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ “ಬಂಧಿತರಲ್ಲಿ ಒಬ್ಬ ಹಿಂದೂ ಹಾಗೂ ಮೂವರು ಮುಸ್ಲಿಮರು ಇದ್ದಾರೆ. ಇದು ಕೋಮು ಹಿಂಸೆಯ ಪ್ರಕರಣವಲ್ಲ. ಘಟನೆಯ ಪ್ರತಿ ಅಂಗವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದರು.
ಜೂನ್ 26ರಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಐದು ಹಸುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು, ಹುಕ್ಕೇರಿ ಪೊಲೀಸ್ ಠಾಣೆಗೆ ಕರೆತಂದಿದ್ದರು. ಹಸುಗಳನ್ನು ಜಾತ್ರೆಯಲ್ಲಿ ಖರೀದಿಸಿ ಸಾಕಾಣಿಕೆಗೆ ಕರೆತರುತ್ತಿದ್ದೆವು ಎಂದು ಮಾಲೀಕರು ದಾಖಲೆ ನೀಡಿದರು. ಪೊಲೀಸರು ನಂತರ ಹಸುಗಳನ್ನು ಬೆಳಗಾವಿಯ ಗೋಶಾಲೆಗೆ ಕಳುಹಿಸಿದರು.
ಜೂನ್ 28ರಂದು ಹಸುಗಳ ಮಾಲೀಕ ಬಾಬುಸಾಬ್ ಮುಲ್ತಾನಿ ಗೋಶಾಲೆಗೆ ತೆರಳಿ, ಹಸುಗಳನ್ನು ಮರಳಿ ಕರೆದುಕೊಂಡು ಹೋಗುತ್ತಿದ್ದ ವೇಳೆ, ಶ್ರೀರಾಮ ಸೇನೆಯ ಕಾರ್ಯಕರ್ತರು ಹಿಂಬಾಲಿಸಿ, ಅವರ ಮನೆಗೆ ತೆರಳಿ ಗಲಾಟೆ ನಡೆಸಿದ್ದಾರೆ. ಅದೇ ಸಂದರ್ಭದಲ್ಲಿ ಮನೆಯಲ್ಲಿದ್ದ ಮಹಿಳೆಯರು ಸಹಾಯಕ್ಕಾಗಿ ಕೂಗಿದಾಗ ಗ್ರಾಮಸ್ಥರು ಧಾವಿಸಿ, ಐವರು ಕಾರ್ಯಕರ್ತರನ್ನು ಊರ ಮಧ್ಯೆ ತೆಂಗಿನ ಮರಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಈ ಕುರಿತು ಯಾರೂ ದೂರು ನೀಡದ ಕಾರಣ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನಾವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಹಾಗೆಯೇ ಮನೆಗೆ ನುಗ್ಗಿದ ಆರೋಪದ ಮೇಲೆ ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧವೂ ಪ್ರತ್ಯೇಕ ದೂರು ದಾಖಲಾಗಿದೆ,” ಎಂದು ಎಸ್‌ಪಿ ತಿಳಿಸಿದರು.