ಕೇರಳದ ಕುಂಬಳೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳನ್ನು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಮನೆಯಲ್ಲಿ ವಿರೋದ ವ್ಯಕ್ತವಾದರಿಂದ ಮನೆಮಂದಿಗೆ ಸೂಚನೆ ನೀಡದೆ ನಾಪತ್ತೆಯಾಗಿದ್ದರು. ಮನೆಮಂದಿ ಹುಡುಕಾಟ ನಡೆಸಿದರೂ, ಯುವಕ ಯುವತಿ ಪತ್ತೆಯಾಗದೆ ಇರುವುದರಿಂದ, ಕುಂಬಳೆ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಆರ್ ಪಿ ಎಫ್ ಸುನಿಲ್ ಕೆ.ಸಿ ಅವರಿಗೆ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಯುವತಿಯ ವರ್ತನೆಯಲ್ಲಿ ಅನುಮಾನಗೊಂಡು ವಿಚಾರಿಸಿದಾಗ, ಕುಂಬಳೆಯಿಂದ ನಾಪತ್ತೆಯಾಗಿದ್ದವರೆಂದು ತಿಳಿದುಬಂದಿದೆ. ಬಳಿಕ ಅವರು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಇಳಿಸಿ, ಇನ್ಸ್ಪೆಕ್ಟರ್ ಮಧುಸೂದನ್ ಅವರಿಗೆ, ಹಸ್ತಾಂತರಿಸಿದರು. ಅವರು ಪ್ರೇಮಿಗಳ ವಯಸ್ಸಿನಲ್ಲಿ ಅನುಮಾನಪಟ್ಟು, ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದರು.
ಮಕ್ಕಳ ಸಹಾಯವಾಣಿಯ, ಪ್ರಕಾಶ್, ಲಕ್ಷ್ಮೀಕಾಂತ್ ಅವರು, ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೆರವು ಪಡೆದು, ಪ್ರೇಮಿಗಳನ್ನು ಉಡುಪಿ ನಗರ ಮಹಿಳಾ ಪೋಲಿಸ್ ಠಾಣೆಯ ವಶಕ್ಕೆ ಒಪ್ಪಿಸಿದರು. ಅಲ್ಲಿ ವಿಚಾರಿಸಲ್ಪಟ್ಟಾಗ ಕುಂಬಳೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳೆಂದು ದೃಢಪಟ್ಟಿತು. ಬಳಿಕ ಪ್ರೇಮಿಗಳನ್ನು ಕುಂಬಳೆಯ ಪೋಲಿಸರಿಗೆ ಒಪ್ಪಿಸಲಾಯಿತು.