ಬೀದರ್ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ನಡುವೆ, ಕಾರಂಜಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದ್ದು, ಹಲವು ಗ್ರಾಮಗಳ ಸೇತುವೆಗಳು ಮುಳುಗಡೆಯಾಗಿವೆ.
ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವ ಹಿನ್ನೆಲೆ, ಕಾರಂಜಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಪರಿಣಾಮವಾಗಿ, ಜಲಾಶಯದಿಂದ ನದಿಗೆ 7,000 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.
ಭಾಲ್ಕಿ ತಾಲೂಕಿನ ತುಗಾಂವ್, ಕಣಜಿ, ಡಾವರಗಾಂವ್, ಲಖನಗಾಂವ್ ಸೇತುವೆಗಳು ಈಗಾಗಲೇ ನೀರಿನಲ್ಲಿ ಮುಳುಗಡೆಯಾಗಿದ್ದು, ಇದೀಗ ಮತ್ತಷ್ಟು ಮುಳುಗುತ್ತಿವೆ. ಸೇತುವೆಗಳ ಮೇಲೆ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.
ಸಾರ್ವಜನಿಕರು ಈ ರಸ್ತೆಗಳನ್ನು ಬಳಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮನವಿ ಮಾಡಿದ್ದಾರೆ.