ಪತ್ರಿಕೋದ್ಯಮವನ್ನು ಉಳಿಸುವ, ಬೆಳೆಸುವ, ಸಾಮಾಜಿಕ ಜವಾಬ್ದಾರಿಯುಳ್ಳವರ ಸಂಖ್ಯೆ ಕಡಿಮೆ ಇರಬಹುದು. ಮಾರಾಟಗಾರರ ಸಂಖ್ಯೆ ಮಾಡು ಮುಟ್ಟಿರಬಹುದು. ಅವರ ಆರ್ಭಟ ಅತಿರೇಕಕ್ಕೆ ಹೋಗಿರಬಹುದು. ಆದರೆ, ಹತ್ತಿದ್ದು ಇಳಿಯಲೇಬೇಕಲ್ಲ…
ಇಂದು ಜುಲೈ 1, ಪತ್ರಿಕಾ ದಿನಾಚರಣೆ ದಿನ. ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ, ಕಾಲಕ್ಕೆ ತಕ್ಕಂತೆ ಅದು ಬದಲಾದ ಬಗೆಯನ್ನು ಜನಸಾಮಾನ್ಯರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈ ದಿನ ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಆ ನಿಟ್ಟಿನಲ್ಲಿ ಕನ್ನಡ ಪತ್ರಿಕೋದ್ಯಮ ಕುರಿತು ಚರ್ಚೆ, ಅವಲೋಕನ ನಡೆಯುತ್ತದೆ.
1841ರ ಜುಲೈ 1ರಂದು ‘ಮಂಗಳೂರ ಸಮಾಚಾರ‘ ಆರಂಭಗೊಳ್ಳುವ ಮೂಲಕ ಕನ್ನಡ ಪತ್ರಿಕೋದ್ಯಮದ ಚರಿತ್ರೆಯೂ ಆರಂಭಗೊಂಡಿತು. ಕನ್ನಡ ಭಾಷೆ ಇದರಲ್ಲಿ ಬಳಕೆಯಾದ ಕಾರಣ ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು. ಸ್ವಿಟ್ಜರ್ಲೆಂಡ್‌ನ ಬಾಸೆಲ್‍ನಿಂದ 1834ರಲ್ಲಿ ಭಾರತಕ್ಕೆ ಬಂದ ಮಿಷನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿದರು. 1841ರಲ್ಲಿ ಬಾಸೆಲ್ ಮಿಶನ್ ಪ್ರೆಸ್- ಕಲ್ಲಚ್ಚಿನ ಮುದ್ರಣಾಲಯ ಸ್ಥಾಪಿಸಿ ಕನ್ನಡದಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದರು. ಕ್ರೈಸ್ತ ಮಿಷನರಿಗಳ ಬೋಧನಾ ಶಿಬಿರಗಳಲ್ಲಿ ಅಧ್ಯಾಪಕರಾಗಿದ್ದ ರೆವರೆಂಡ್ ಹರ್ಮನ್ ಮೋಗ್ಲಿಂಗ್ ‘ಮಂಗಳೂರ ಸಮಾಚಾರ’ ಪತ್ರಿಕೆಯ ಮೊದಲ ಸಂಪಾದಕರಾಗಿದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೊಹರಂ ನಿಷೇಧ; ರಾಯಚೂರು ಜಿಲ್ಲಾಧಿಕಾರಿ ಕೊಟ್ಟ ಸಂದೇಶವೇನು?
ಜರ್ಮನ್ ಮತ ಪ್ರಚಾರಕರಾದ ಮೋಗ್ಲಿಂಗ್‌ರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಪಿತಾಮಹ ಎಂದು ಕರೆಯಲಾಗುತ್ತದೆ. ಅವರು 1836ರಿಂದ 1860ರವರೆಗೆ ಭಾರತದಲ್ಲಿದ್ದರು, ಕಾಲ್ನಡಿಗೆಯಲ್ಲಿ ಕರ್ನಾಟಕದುದ್ದಕ್ಕೂ ಸಂಚರಿಸಿದ್ದರು. ಅವರಿಗೆ ಕನ್ನಡ, ಸಂಸ್ಕೃತ, ಗ್ರೀಕ್, ಜರ್ಮನ್ ಭಾಷಾ ಜ್ಞಾನವಿತ್ತು. ದಾಸರ ಪದಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದರು ಎಂಬುದನ್ನು ಚರಿತ್ರೆ ಹೇಳುತ್ತದೆ, ಇರಲಿ.
ಇನ್ನೂರು ವರ್ಷಗಳ ಹಿಂದೆ ‘ಮಂಗಳೂರ ಸಮಾಚಾರ’ ಪತ್ರಿಕೆಯೊಂದಿಗೆ ಆರಂಭವಾದ ಕನ್ನಡ ಪತ್ರಿಕಾರಂಗ ಇಂದು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮುದ್ರಣ ಮಾಧ್ಯಮದಿಂದ ಆರಂಭವಾಗಿ ರೇಡಿಯೋ, ವಿಷುಯಲ್, ಡಿಜಿಟಲ್, ಸೋಷಿಯಲ್ ಮೀಡಿಯಾಗಳವರೆಗೆ ಬೆಳೆದು ನಿಂತಿದೆ. ಕಲ್ಲಚ್ಚಿನ ಕಾಲದ ಪತ್ರಿಕೋದ್ಯಮ ಇಂದಿನ ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿದೆ. ಪ್ರಪಂಚದ ಯಾವುದೇ ಜಾಗದಲ್ಲಿ ಕೂತು, ಬೆರಳತುದಿಯ ಸ್ಪರ್ಶಕ್ಕೆ ತೆರೆದುಕೊಳ್ಳುವ, ಓದುವ, ಹಂಚುವ ಸಂಪರ್ಕ ಜಾಲವೇ ಸೃಷ್ಟಿಯಾಗಿದೆ, ಬೆರಗುಟ್ಟಿಸುತ್ತಿದೆ.
ಆದರೆ ಬದಲಾದ ಕಾಲಮಾನಕ್ಕೆ ತಕ್ಕಂತೆ ಪತ್ರಿಕೋದ್ಯಮವೂ ಬದಲಾಗಿದೆ. ಮೌಲ್ಯ, ತತ್ವ-ಸಿದ್ಧಾಂತ, ನ್ಯಾಯ-ನಿಷ್ಠುರತೆ, ಬದ್ಧತೆ, ನೈತಿಕತೆ, ವಸ್ತುನಿಷ್ಠತೆ, ಉತ್ತರದಾಯಿತ್ವ- ಕಾಲ ಸರಿದಂತೆ ಹಿಂದಕ್ಕೆ ಸರಿದಿವೆ. ಸುಳ್ಳು ಸುದ್ದಿ ಸೃಷ್ಟಿ, ಬ್ಲ್ಯಾಕ್‌ಮೇಲ್, ಅವಕಾಶವಾದಿತನ, ಮಾರುಕಟ್ಟೆ ಮೇಲುಗೈ ಸಾಧಿಸಿದೆ.
ಪತ್ರಿಕೋದ್ಯಮ- ಅದು ಯಾವತ್ತೂ ಉದ್ಯಮವೇ. ಹಿಂದೆ ಪತ್ರಿಕೆಗಳನ್ನು ಆರಂಭಿಸುತ್ತಿದ್ದ ಮಾಲೀಕರು ಯಾವುದಾದರೂ ಧ್ಯೇಯಕ್ಕೆ, ಸಿದ್ಧಾಂತಕ್ಕೆ ಬದ್ಧರಾಗಿರುತ್ತಿದ್ದರು. ಸಾರ್ಥಕ ದಿಕ್ಕಿನಲ್ಲಿಯೇ ಸಾಗುತ್ತಿದ್ದರು. ಈ ವಾತಾವರಣ ಬದಲಾಗಿದ್ದು 90ರ ದಶಕದಿಂದೀಚೆಗೆ- ಜಾಗತೀಕರಣ ನಮ್ಮನ್ನು ಇಡಿಯಾಗಿ ನುಂಗತೊಡಗಿದ ಮೇಲೆ- ಎಲ್ಲವೂ ಮಾರುಕಟ್ಟೆಯ ಸರಕಾಗಿದೆ. 2000ದ ನಂತರ ಅಂತರ್ಜಾಲ ಅಡಿಯಿಟ್ಟ ಮೇಲೆ- ಪತ್ರಿಕೋದ್ಯಮಕ್ಕೆ ಅಂಬಾನಿ-ಅದಾನಿಯಂತಹ ಕಾರ್ಪೊರೇಟ್ ಕುಳಗಳ ಆಗಮನವಾದ ಮೇಲೆ- ಸುದ್ದಿ ಕೂಡ ಬಿಕರಿಯಾಗುತ್ತಿದೆ. ಪತ್ರಿಕೋದ್ಯಮದ ಮೌಲ್ಯ ಮರೆಯಾಗಿದೆ. ಸರ್ಕ್ಯುಲೇಷನ್, ಟಿಆರ್‌ಪಿ, ವ್ಯೂಸ್ ಮುಖ್ಯವಾಗಿದೆ. ಸಂಪಾದಕ-ಪತ್ರಕರ್ತನ ಜಾಗದಲ್ಲಿ ಜಾಹೀರಾತು ವಿಜೃಂಭಿಸುತ್ತಿದೆ.
ಅದರಲ್ಲೂ 2014ರ ನಂತರ, ಭಾರತೀಯ ಪತ್ರಿಕೋದ್ಯಮದ ಚಿತ್ರಣ ಸಂಪೂರ್ಣವಾಗಿ ಬದಲಾಗಿಹೋಗಿದೆ. ಜನರಿಗೆ ಅಗತ್ಯವಿಲ್ಲದ ಸೆಕ್ಸ್-ಕ್ರೈಮ್-ಗ್ಲ್ಯಾಮರ್‍ನತ್ತ ಒತ್ತು ಕೊಡುವುದು, ಸುದ್ದಿ ತಿರುಚುವುದು, ಸುಳ್ಳು ಸುದ್ದಿ ಸೃಷ್ಟಿಸುವುದು, ದ್ವೇಷ ಬಿತ್ತುವುದು, ಕೋಮುಗಲಭೆಗೆ ಪ್ರಚೋದಿಸುವುದು, ಆಳುವ ಸರ್ಕಾರದ ತುತ್ತೂರಿಯಾಗುವುದು ಸಾಮಾನ್ಯವಾಗಿದೆ. ಭಿನ್ನವಾಗಿ ಯೋಚಿಸುವುದು, ಪ್ರಶ್ನಿಸುವುದು, ಪತ್ರಿಕೋದ್ಯಮವನ್ನು ಜನಪರವಾಗಿರಿಸುವುದು ಕಡಿಮೆಯಾಗುತ್ತಿದೆ.
ಇಂತಹ ಸ್ಥಿತಿಯಲ್ಲಿ ನಾವು ಪತ್ರಿಕೋದ್ಯಮವೆನ್ನುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗ; ಪತ್ರಿಕೆಗಳು/ಸುದ್ದಿವಾಹಿನಿಗಳು/ವೆಬ್ ತಾಣಗಳು ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು; ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು; ಪತ್ರಕರ್ತ ಸಮಾಜಮುಖಿಯಾಗಿರಬೇಕು- ಎಂದು ಬಯಸುವುದು ಎಷ್ಟು ಸರಿ?
ಯಾವ ಉದ್ಯಮವೇ ಆದರೂ, ಅದಕ್ಕೊಂದು ಸ್ವಹಿತಾಸಕ್ತಿ ಇರಲೇಬೇಕು. ಆದ್ದರಿಂದ ಪತ್ರಕರ್ತರಾದವರಿಗೆ ಸ್ವಾತಂತ್ರ್ಯದ ಪರಿಧಿ ಇರುವಂತೆಯೇ ನಿಷಿದ್ಧ ವಲಯವೂ ಇದ್ದೇ ಇರುತ್ತದೆ. ತನ್ನ ಮಾಲೀಕರ ಸ್ವಹಿತಾಸಕ್ತಿ ವಲಯವನ್ನು ಆತ ಎಂದೂ ಅತಿಕ್ರಮಿಸಲಾರ. ಜನಪರವಾಗಿ ಇರಲಾರ. ಅಂದಮೇಲೆ ಪತ್ರಕರ್ತನ ನೈತಿಕತೆ, ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮಾತನಾಡುವುದು ಎಷ್ಟು ಸರಿ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಿಂದುಗಳೆಲ್ಲ ಒಂದು ಎನ್ನುವ ಆರೆಸ್ಸೆಸ್‌ಗೆ ಜಾತ್ಯತೀತ, ಸಮಾಜವಾದ ಅಂದರೇಕೆ ಅಸಹನೆ?
ಇವೆಲ್ಲವುಗಳ ನಡುವೆಯೇ ಶಿಸ್ತು, ಶ್ರದ್ಧೆ, ಸಂಯಮದಿಂದ ಕೆಲಸ ಮಾಡುವ ಪತ್ರಕರ್ತರು ಈಗಲೂ ಇದ್ದಾರೆ. ಜನಪರ, ಜೀವಪರವಾಗಿ ಯೋಚಿಸುವ; ತಮ್ಮ ಇತಿಮಿತಿಯಲ್ಲಿಯೇ ಆಳುವ ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತರೂ ಇದ್ದಾರೆ. ತಾವು ನಂಬಿದ ತತ್ವ-ಸಿದ್ಧಾಂತಗಳನ್ನು ಬಲಿಕೊಡದೆ ವೃತ್ತಿಗೆ ಬದ್ಧರಾದವರು ಇನ್ನೂ ಇದ್ದಾರೆ. ಅವರಿಂದಲೇ ಪತ್ರಿಕೋದ್ಯಮ ಜೀವಂತವಾಗಿದೆ. ಜನರಿಟ್ಟ ನಂಬಿಕೆ, ವಿಶ್ವಾಸ ಬತ್ತದೆ ಬೆಳೆಯುತ್ತಿದೆ.
ಪತ್ರಿಕೋದ್ಯಮವನ್ನು ಉಳಿಸುವ, ಬೆಳೆಸುವ, ಸಾಮಾಜಿಕ ಜವಾಬ್ದಾರಿಯುಳ್ಳವರ ಸಂಖ್ಯೆ ಕಡಿಮೆ ಇರಬಹುದು. ಮಾರಾಟಗಾರರ ಸಂಖ್ಯೆ ಮಾಡು ಮುಟ್ಟಿರಬಹುದು. ಅವರ ಆರ್ಭಟ ಅತಿರೇಕಕ್ಕೆ ಹೋಗಿರಬಹುದು. ಆದರೆ, ಹತ್ತಿದ್ದು ಇಳಿಯಲೇಬೇಕಲ್ಲ… ಇಳಿಯುತ್ತದೆ. ಒಳಿತು ಉಳಿಯುತ್ತದೆ.
