ತುಮಕೂರು ನಗರದ ಹೊರ ಹೊಲಯದಲ್ಲಿರುವ ರಿಂಗ್ ರಸ್ತೆಯ ಸೂಲಪ್ಪ ಸರ್ಕಲ್, ದಾನಃ ಪ್ಯಾಲೇಸ್ ಸಿಗ್ನಲ್ ಈಗ ಅಪಘಾತಗಳಿಗೆ ಮುಕ್ತ ಆಹ್ವಾನ ನೀಡುತ್ತಿದೆ.
ಬನಶಂಕರಿ ರೈಲ್ವೆ ಬ್ರಿಡ್ಜ್ ನ ಅಂಡರ್ ಪಾಸ್ ಈಗ ಸಂಪೂರ್ಣ ಬಂದ್ ಆಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ಸ್ಥಳದಲ್ಲಿ ಕೆಲ ದಿನಗಳ ಹಿಂದೆ ಗೂಡ್ಸ್ ಲಾರಿಯೊಂದು ಉರುಳಿ ಬಿದ್ದು ಅಪಘಾತ ಸಂಭವಿಸಿತ್ತು. ಇದಕ್ಕೆ ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ರಸ್ತೆ ದುರಸ್ತಿಪಡಿಸದಿರುವುದೇ ಮುಖ್ಯ ಕಾರಣಗಿತ್ತು.
ಸಾರ್ವಜನಿಕರ ದೂರುಗಳ ನಂತರವೂ ಎಚ್ಚೆತ್ತುಕೊಳ್ಳದ ಪಾಲಿಕೆ ಆಡಳಿತ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ ಅಪಘಾತವಾದ ನಂತರ ಈಗ ಬನಶಂಕರಿ ರೈಲ್ವೆ ಬ್ರಿಡ್ಜ್ ನ ಅಂಡರ್ ಪಾಸ್ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದೆ. ಇದರಿಂದಾಗಿ ಬಸ್ಸು, ಕಾರು, ಆಟೋ ರಿಕ್ಷಾಗಳು, ಲಾರಿಗಳು ಕುಣಿಗಲ್ ಮಾರ್ಗದ ರಿಂಗ್ ರೋಡ್ ಮುಖಾಂತರವೇ ಸಂಚರಿಸುತ್ತಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ವಾಹನಗಳ ಸಂಚಾರ ಹೆಚ್ಚಾದಲ್ಲಿ ಟ್ರಾಫಿಕ್ ಸಂಭವಿಸುವುದು ಸಹಜ. ಆದರೆ, ನಿತ್ಯ ಟ್ರಕ್ ಗಳು, ಗೂಡ್ಸ್ ಗಾಡಿಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ಈಗ ಸಣ್ಣಪುಟ್ಟ ವಾಹನಗಳೂ ಹೆಚ್ಚಾಗಿ ಸಂಚರಿಸುತ್ತಿವೆ.
ಟ್ರಕ್‌ಗಳು, ಬಸ್‌ಗಳು ಶರವೇಗದಲ್ಲಿ ಸಂಚರಿಸುವುದರಿಂದ ದ್ವಿಚಕ್ರವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದೆ. ಮರಳೂರು, ಗಂಗಸಂದ್ರ ರಸ್ತೆ, ರಿಂಗ್ ರೋಡ್ ಸುತ್ತಮುತ್ತಲ ರೈತರು, ಸ್ಥಳೀಯ ನಿವಾಸಿಗಳು ಹಾಲು, ಸೊಪ್ಪು, ಹುಲ್ಲು ಹೊತ್ತೊಯ್ಯುತ್ತಾರೆ. ಶೇಷಾದ್ರಿಪುರಂ ಕಾಲೇಜು, ಸಿದ್ಧಾರ್ಥ ಕಾಲೇಜು, ಹತ್ತಿರವೇ ಇರುವುದರಿಂದ ವಿದ್ಯಾರ್ಥಿಗಳು ಟೀ, ಕಾಫೀ, ಇತರ ಕಾರಣಗಳಿಗೆ ರಸ್ತೆ ದಾಟುವುದು, ಓಡಾಡುವುದನ್ನು ಮಾಡುತ್ತಲೇ ಇರುತ್ತಾರೆ. ಪುಟ್ಟ ಮಕ್ಕಳು ಸೈಕಲ್ ಏರಿ ಹೋಗುತ್ತಿರುತ್ತಾರೆ. ವೃದ್ಧರು ಸಾಮಾನ್ಯ ರಸ್ತೆ ದಾಟುವುದೇ ದುಸ್ತರವಾದಾಗ ಇನ್ನೂ ಹೈವೇಯಲ್ಲಿ ಅತೀ ವೇಗದಲ್ಲಿ ಸಂಚರಿಸುವ ವಾಹನಗಳ ನಡುವೆ ಓಡಾಡುವುದಾದರೂ ಹೇಗೆ? ಇದರಿಂದ ಜನರು ತೊಂದರೆಗೆ ಸಿಲುಕಿದ್ದಾರೆ.
ಸಂಜೆ 7 ಗಂಟೆ ನಂತರ ಸಿಗ್ನಲ್ ಲೈಟ್ ಇರಲಿ ಇಲ್ಲದಿರಲಿ ಲಾರಿ ಹಾಗೂ ಬಸ್‌ನವರು ನಿಯಮ ಪಾಲಿಸದೆ ಎಗ್ಗಿಲ್ಲದೆ ನುಗ್ಗುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಒಂದು ಗಂಟೆ ಸಮಯ ಸೂಲಪ್ಪ ಸರ್ಕಲ್ ಬಳಿ ನಿಂತು ಗಮನಿಸಬೇಕು. ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಬೃಹತ್ ಗಾತ್ರದ ವಾಹನಗಳು ಪಾಸ್ ಆಗುತ್ತವೆ. ಈ ಸಮಸ್ಯೆ ಕಡಿವಾಣಕ್ಕೆ ಇರುವ ಪರಿಹಾರವಾದರೂ ಏನು? ಇಲ್ಲಿ ನಾವು ಕಂಡಂತೆ ಐದಾರು ಬಾರಿ ಭೀಕರ ಅಪಘಾತಗಳು ಕೂದಲೆಳೆ ಅಂತರದಲ್ಲಿ ತಪ್ಪಿವೆ ಎಂದು ಅಂಗಡಿಯವರೊಬ್ಬರು ಹೇಳಿದರು.

ನಿತ್ಯ ಪಾದಚಾರಿಗಳು, ಸೈಕಲ್ ಸವಾರರು, ಸಣ್ಣಪುಟ್ಟ ವಾಹನ ಸವಾರರು ಜೀವಭಯದಲ್ಲೇ ಸಂಚರಿಸಬೇಕಾಗಿದೆ. ಅವರಿಗೂ ಒಂದು ಕುಟುಂಬವಿರುತ್ತದೆ, ಹೆಂಡತಿ ಮಕ್ಕಳು- ತಂದೆ ತಾಯಿಗಳು ಮಗನ, ಮಗಳ ಬರುವಿಕೆಗಾಗಿ ಕಾಯುತ್ತಿರುತ್ತಾರೆ ಅಲ್ಲವೇ? ಪ್ರತೀ ಜೀವಕ್ಕೂ ಬೆಲೆ ಇದೆ. ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸಿದ್ಧಾರ್ಥ ಕಾಲೇಜು ಹಿಂಬದಿಯಲ್ಲಿಯೇ ಈ ರಸ್ತೆ ಹಾದುಹೋಗುವುದರಿಂದ ಈ ಕಾಲೇಜಿನ ವಿದ್ಯಾರ್ಥಿಗಳು ಅಪಘಾತಗಳಿಗೆ ಬಲಿಯಾದರೆ ಸಂಬಂಧಿಸಿದ ಅಧಿಕಾರಿಗಳೇ ಇದರ ಹೊಣೆ ಹೊರಬೇಕಾಗುತ್ತದೆ.
ಕಾಲೇಜಿನ ಮಾಲೀಕರಾದ ಹಾಗೂ ರಾಜ್ಯದ ಗೃಹ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರ ಮೇಲೆ ಈಗಾಗಲೇ ವಿರೋಧ ಪಕ್ಷಗಳು ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಮತ್ತೊಂದು ಗಂಭೀರ ಆರೋಪಗಳಿಗೆ ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಲ್ಲದೆ, ಕಾಲೇಜಿಗೂ ಕೆಟ್ಟ ಹೆಸರು ಬರುತ್ತದೆ. ಇದರ ಮೂಲ ಕೆದಕಿ ನೋಡಲು ಶುರು ಮಾಡಿದಾಗ ಬನಶಂಕರಿ ರೈಲ್ವೆ ಬ್ರಿಡ್ಜ್ ನ ಅಂಡರ್ ಪಾಸ್ ದುರಸ್ತಿ ಕಾರ್ಯ, ಸಂಚಾರಿ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕಾದ ಪೊಲೀಸರ ನಿರ್ಲಕ್ಷ್ಯ ಎಲ್ಲವೂ ಮುನ್ನೆಲೆಗೆ ಬರುತ್ತದೆ. ಇರುವುದರಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿವಹಿಸುತ್ತಿರುವ ಪಾಲಿಕೆ ಆಯುಕ್ತರೂ ಹೊಣೆ ಹೊರುವವಂತೆ ಆಗುತ್ತದೆ. ಹೀಗಾಗುವುದು ಬೇಡ. ಆದ್ದರಿಂದ ಎಚ್.ಎಂ ಗಂಗಾಧರಯ್ಯ ಸರ್ಕಲ್ ನಿಂದ ರಿಂಗ್ ರೋಡ್‌ನ ವಾಲ್ಮೀಕಿ ವೃತ್ತದ ವರೆಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಪೊಲೀಸ್ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಬೇಕು. ಸಿಗ್ನಲ್‌ಗಳ ಬಳಿ ಅಲ್ಲಲ್ಲಿ ರೋಡ್ ಹಂಪ್‌ಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವ ಜವಾಬ್ದಾರಿ ಅಧಿಕಾರಿಗಳದ್ದೇ ಆಗಿರುತ್ತದೆ.
ಇದನ್ನೂ ಓದಿ: ತುಮಕೂರು | ಸರ್ಕಾರಿ ಭೂಮಿ ಪರಿವರ್ತನೆ ಆರೋಪ: ಡಿಸಿ ಶುಭ ಕಲ್ಯಾಣ್ ವಿರುದ್ಧ ದೂರು
“ಕುಣಿಗಲ್ ರಸ್ತೆಗೆ ಸಂಪರ್ಕಿಸುವ ರಿಂಗ್ ರೋಡ್‌ನ ಸೂಲಪ್ಪ ಸರ್ಕಲ್‌ನಲ್ಲಿ ಅಪಘಾತ ಸಂಭವನೀಯತೆ ಹೆಚ್ಚಿದ್ದು, ಇದರ ನಿಯಂತ್ರಣಕ್ಕೆ ರೋಡ್ ಹಂಪ್‌ಗಳನ್ನು ಅಳವಡಿಸುವ ಕುರಿತು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್ಪಿ ಅಶೋಕ್ ಕೆ.ವಿ ಅವರ ಗಮನಕ್ಕೆ ತರಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು, ರೋಡ್ ಹಂಪ್‌ಗಳನ್ನು ಅಳವಡಿಸಿ, ಸಂಚಾರ ನಿಯಮಗಳ ಪಾಲನೆಗೆ ಒತ್ತು ನೀಡುವ ಭರವಸೆ ನೀಡಿದ್ದಾರೆ. ಎಸ್ಪಿ ಅವರು ಜನಪರ ಕಾರ್ಯಗಳಲ್ಲಿ ಮುಂಚೂಣಿ ಎಂಬ ನಂಬಿಕೆ ಜಿಲ್ಲೆಯ ಜನರಲ್ಲಿದೆ ” ಎಂದು ಜನಪರ ಹೋರಾಟಗಾರರು ಮಂಜುನಾಥ್ ಹೆತ್ತೇನಹಳ್ಳಿ ಹೇಳಿದರು.