ರಸ್ತೆಯ ಅಗಲಿಕರಣ ಸಮಿತಿಯ ಹಿಂದಿನ ಸಭೆಯಂತೆ ಜಗಳೂರು ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಮಲ್ಪೆ-ಮೊಳಕಾಲ್ಮೂರು ರಸ್ತೆಯನ್ನು 69 ಅಡಿಗೆ ನಿಗದಿಯಂತೆ ಅಗಲೀಕರಣಗೊಳಿಸಿ ಉತ್ತಮ ರಸ್ತೆ ನಿರ್ಮಿಸಬೇಕೆಂದು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಕಚೇರಿ ಮುಂಭಾಗದಲ್ಲಿ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ರಸ್ತೆ ಅಗಲಿಕರಣ ಸಮಿತಿಯ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿ ಪ್ರಾರಂಭಿಸಿದ್ದಾರೆ.

ಜಗಳೂರು ಪಟ್ಟಣ ದಿನೇ ದಿನ ಬೆಳೆಯುತ್ತಿದ್ದು ಇದು ರಾಜ್ಯ ಹೆದ್ದಾರಿ ಆಗಿರುವುದರಿಂದ ಸಂಚಾರದ ದಟ್ಟಣೆ ಹೆಚ್ಚಾಗಿದ್ದು ರಸ್ತೆ ಮಾತ್ರ ನಗರದಲ್ಲಿ ಕಿರಿದಾಗಿದೆ. ಇದರಿಂದ ಅಲ್ಲಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಪಘಾತಗಳು ಕೂಡ ಸಂಭವಿಸುತ್ತಿದೆ. ಹಾಗಾಗಿ ರಸ್ತೆಯನ್ನು ಈ ಕೂಡಲೇ ನಿಗದಿಯಂತೆ 69 ಅಡಿಗೆ ಅಗಲಿಕರಣ ಗೊಳಿಸಿ ಕಾಮಗಾರಿ ಕಾರ್ಯ ಸಂಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಪಯೋಗಿ ಇಲಾಖೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸ್ಥಳೀಯ ಪತ್ರಕರ್ತ ಪ್ರಗತಿಪರ ಮುಖಂಡ ರಾಜಪ್ಪ ವ್ಯಾಸಗೊಂಡನಳ್ಳಿ ” ಹಿಂದೆ ನಡೆದಿರುವ ಸಭೆಗಳಂತೆ ರಸ್ತೆಯನ್ನು 69 ಅಡಿಗೆ ವಿಸ್ತರಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಗೊಂದಲವಿದೆ. ನಗರದ ಹಿತ ದೃಷ್ಟಿಯಿಂದ ಕೂಡಲೇ ಕಾಮಗಾರಿ ಕೈಗೊಳ್ಳಬೇಕು. ಕಿಶ್ಕಿಂದೆಯಂತ ರಸ್ತೆಯ ಅಗಲಿಕರಣಕ್ಕೆ ಕಾಮಗಾರಿ ಕೈಗೊಳ್ಳುವವರೆಗೂ ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಆಗ್ರಹಿಸಿದರು.

ರೈತ ಸಂಘದ ತಾಲೂಕುಅಧ್ಯಕ್ಷ ಕುಮಾರ್ “ಮಾತನಾಡಿ ಬಿತ್ತನೆ ಕಾಲವಾಗಿರುವುದರಿಂದ ರೈತರು ಹಳ್ಳಿಗಳಿಂದ ಗೊಬ್ಬರ ಕೀಟನಾಶಕ ಬೀಜ ಮತ್ತು ರೈತರ ಕೆಲಸ ಕಾರ್ಯಗಳಿಗೆ ನಗರಕ್ಕೆ ಆಗಮಿಸುತ್ತಾರೆ. ಅವುಗಳನ್ನು ತೆಗೆದುಕೊಂಡು ಹೋಗುವಾಗ ರೈತರು ಮೃತಪಟ್ಟಿರುವ ನಿದರ್ಶನಗಳಿವೆ. ಇದಕ್ಕೆ ಕಿರಿದಾದ ರಸ್ತೆ ಕಾರಣವಾಗಿದ್ದು ಜಗಳೂರು ಮುಖ್ಯ ರಸ್ತೆಯನ್ನು ಶೀಘ್ರವೇ ಈ ಹಿಂದಿನ ಯೋಜನೆಯಂತೆ 69 ಅಡಿವರೆಗೆ ವಿಸ್ತರಿಸಬೇಕು” ಎಂದು ಒತ್ತಾಯಿಸಿದರು.
ಮುಖಂಡ ಯಾದವ್ ರೆಡ್ಡಿ ಮಾತನಾಡಿ “ರಸ್ತೆಯ ಅಗಲೀಕರಣಕ್ಕೆ ಯಾರು ಕೂಡ ಅಡ್ಡಿ ಮಾಡಬಾರದು ಎಂದು ಕಾನೂನಿನಲ್ಲಿದೆ. ತಿದ್ದುಪಡಿ ಮಾಡಿ 69 ಅಡಿ ರಸ್ತೆಗೆ ಅಧಿನಿಯಮ ತಿದ್ದುಪಡಿ ಮಾಡಲಾಗಿದೆ. ಜಿಲ್ಲಾಧಿಕಾರಿಗಳೇ ಈ ಮಾರ್ಪಾಡು ಮಾಡಿದ್ದಾರೆ. ಹಾಗಾಗಿ ಇದಕ್ಕೆ ಕಾರಣಗಳನ್ನು ಹೇಳದೆ ಜಿಲ್ಲಾಧಿಕಾರಿಗಳೇ ಕೂಡಲೇ ಸಭೆ ಕರೆದು 69 ಅಡಿ ಅಗಲದ ರಸ್ತೆಗೆ ನಿರ್ಣಯ ಕೈಗೊಂಡು ಶೀಘ್ರವೇ ರಸ್ತೆ ಅಗಲೀಕರಣ ಕಾಮಗಾರಿ ಮುಗಿಸಬೇಕು” ಎಂದು ಒತ್ತಾಯಿಸಿದರು.

ಹೋರಾಟದ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಪಿ ರಾಜೇಶ್ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿ “ರಸ್ತೆಯ ಅಗಲೀಕರಣಕ್ಕಾಗಿ ಎಲ್ಲ ಸಂಘಟನೆಗಳು ಸೇರಿ ಹೋರಾಟ ನಡೆಸುತ್ತಿರುವುದು ಸ್ವಾಗತ. ಇದಕ್ಕೆ ಸಾರ್ವಜನಿಕರ ಬೆಂಬಲವಿದೆ. ಅಧಿಕಾರಿಗಳು ರಸ್ತೆಯ ಅಗಲಿಕರಣಕ್ಕೆ ಸರಿಯಾದ ಒಂದು ನಿರ್ಧಾರವನ್ನು ಕೈಗೊಂಡು ಅಗಲೀಕರಣ ನಡೆಸುತ್ತಿಲ್ಲ. ಒಂದೊಂದು ಜಾಗದಲ್ಲಿ ಒಂದೊಂದು ಅಳತೆಯ ರಸ್ತೆ ಅಗಲೀಕರಣ ಕಾಮಗಾರಿ ನಡೆಸುತ್ತಿದ್ದಾರೆ. ಹಾಗಾಗಿ ಈ ಕೂಡಲೇ ತಾಲೂಕು ಪಂಚಾಯತ್ ಅಧಿಕಾರಿಗಳು ಮತ್ತು ಸ್ಥಳೀಯ ಸಂಘಟನೆಗಳೊಂದಿಗೆ ಸಭೆ ಮಾಡಿ ಕೂಡಲೇ ರಸ್ತೆ ಅಗಲೀಕರಣದ ಒಂದು ಮಿತಿಯನ್ನು ನಿಗದಿಪಡಿಸಿ ಕೂಡಲೇ ಕಾಮಗಾರಿ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪಂಚಾಯತಿ ಇಲಾಖೆ ಹಾಗೂ ಶಾಸಕರು ಕೂಡಲೇ ಈ ಸಮಸ್ಯೆ ಪರಿಹರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸೈನಿಕ ಹುಳುಗಳ ಹಾವಳಿಗೆ ನಲುಗಿದ ಮೆಕ್ಕೆಜೋಳ; ರೈತರ ನೆರವಿಗೆ ಬರಬೇಕಿದೆ ಕೃಷಿ ವಿಜ್ಞಾನ, ಸರ್ಕಾರ
ಹೋರಾಟದಲ್ಲಿ ರಸ್ತೆ ಅಗಲೀಕರಣ ಸಮಿತಿಯ ಅಧ್ಯಕ್ಷ ಸಣ್ಣ ಓಬಯ್ಯ ನವನಿರ್ಮಾಣ ವೇದಿಕೆಯ ಮಹಾಲಿಂಗಪ್ಪ, ರೈತ ಮುಖಂಡ ಗುಮ್ಮನೂರು ಬಸವರಾಜ್, ರಾಜ್ಯ ರೈತೋದಯ ಸಂಘದ ಮುಖಂಡ ಎಂ ಚೌಡಮ್ಮ, ಅಂಬೇಡ್ಕರ್ ಪುತ್ಥಳಿ ಸಮಿತಿಯ ಅಧ್ಯಕ್ಷ ಪೂಜಾರ್ ಸಿದ್ದಪ್ಪ, ವಕೀಲರ ಸಂಘದ ಅಧ್ಯಕ್ಷ ಮರೇನಳ್ಳಿ ಬಸವರಾಜು , ರಸ್ತೆ ಅಗಲೀಕರಣ ಸಮಿತಿಯ ಕುಮಾರ್, ಕಾಡಪ್ಪ, ಸೇರಿದಂತೆ ರೈತರು, ಕಾರ್ಮಿಕರು ಹೋರಾಟಗಾರರು ಭಾಗವಹಿಸಿದ್ದರು.