ಮಹಾನಗರ ಪಾಲಿಕೆ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರ ಮೇಲೆ ಪುಂಡರ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬಿಜೆಪಿ ಅಧಿಕಾರದಲ್ಲಿರುವ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಹಲ್ಲೆಗೈದವರು ಬಿಜೆಪಿ ಕಾರ್ಯಕರ್ತರು ಎಂದು ಆರೋಪಿಸಲಾಗಿದೆ.
ಭುವನೇಶ್ವರ ಮಹಾನಗರ ಪಾಲಿಕೆ (ಬಿಎಂಸಿ) ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರ ಮೇಲೆ ಬಿಜೆಪಿ ಕಾರ್ಪೋರೇಟರ್ ಎದುರೇ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ರತ್ನಾಕರ್ ಅವರನ್ನು ಪಾಲಿಕೆ ಕಚೇರಿಯಿಂದ ಹೊರಗೆ ಎಳೆದು ತಂದು, ಮುಖಕ್ಕೆ ಕಾಲಿನಿಂದ ಒದ್ದು, ನಿರಂತರವಾಗಿ ಥಳಿಸಿದ್ದಾರೆ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಂದುಕೊರತೆ ವಿಚಾರಣೆಯ ಸಮಯದಲ್ಲಿ ಸಾಹೂ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
“ಸಾರ್ವಜನಿಕರ ಸಮಸ್ಯೆಗಳ ವಿಚಾರಣೆ ನಡೆಯುತ್ತಿರುವಾಗ, ಕೆಲವರು ನಮ್ಮ ಕೊಠಡಿಗೆ ನುಗ್ಗಿದರು. ನನ್ನ ಕಾಲರ್ ಹಿಡಿದು ‘ಜಗ್ ಭಾಯ್’ (ಬಿಜೆಪಿ ನಾಯಕ ಜಗನ್ನಾಥ್ ಪ್ರಧಾನ್ ಎನ್ನಲಾಗಿದೆ) ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದೀಯಾ ಎಂದು ಆರೋಪಿಸಿ, ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನನ್ನು ಬಲವಂತವಾಗಿ ತಮ್ಮ ವಾಹನದಲ್ಲಿ ಹತ್ತಿಸಿಕೊಂಡು ಕೊರೆದೊಯ್ಯಲು ಯತ್ನಿಸಿದರು” ಎಂದು ಹಲ್ಲೆಗೊಳಗಾದ ಅಧಿಕಾರಿ ಆರೋಪಿಸಿದ್ದಾರೆ.
“ನಾನು ಬೆಳಿಗ್ಗೆ 11.30ರ ಸುಮಾರಿಗೆ ಸಾರ್ವಜನಿಕರ ಸಮಸ್ಯೆಗಳನ್ನು ವಿಚಾರಣೆ ನಡೆಸುತ್ತಿದ್ದೆ. ಆಗ ಬಿಎಂಸಿ ಕಾರ್ಪೊರೇಟರ್ ಜೀವನ್ ರಾವತ್ ಸೇರಿದಂತೆ ಐದಾರು ಮಂದಿ ನನ್ನ ಕೊಠಡಿಗೆ ನುಗ್ಗಿದರು. ಕಾರ್ಪೊರೇಟರ್ ರಾವತ್ ಅವರು ‘ನೀನು ಜಗ್ ಭಾಯ್ ಜೊತೆ ಅನುಚಿತವಾಗಿ ವರ್ತಿಸಿದೆಯಾ’ ಎಂದು ಪ್ರಶ್ನಿಸಿದರು. ನಾನು ಅವರ ಆರೋಪವನ್ನು ನಿರಾಕರಿಸಿದೆ. ಆಗ ಅವರೊಂದಿಗೆ ಬಂದಿದ್ದವರು ನನ್ನ ಮೇಲೆ ದಾಳಿ ನಡೆಸಿದರು. ನನ್ನನ್ನು ನನ್ನ ಕಚೇರಿಯಿಂದ ಹೊರಗೆ ಎಳೆದುಕೊಂಡು ಹೋಗಿ, ಥಳಿಸಿ, ಬಲವಂತವಾಗಿ ತಮ್ಮ ವಾಹನಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದರು” ಎಂದು ವಿವರಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ; ಗೂಂಡಾಗಳು ಅಧಿಕಾರಿ ರತ್ನಾಕರ್ ಅವರನ್ನು ನೆಲೆದಲ್ಲಿ ಎಳೆದಾಡಿ, ವಾಹನದ ಬಳಿಗೆ ಎಳೆದೊಯ್ಯುವುದು ಕಂಡುಬಂದಿದೆ.
I am utterly shocked seeing this video.
— Naveen Patnaik (@Naveen_Odisha) June 30, 2025
Today, Shri Ratnakar Sahoo, OAS Additional Commissioner, BMC, a senior officer of the rank of Additional Secretary was dragged from his office and brutally kicked and assaulted in front of a BJP Corporator, allegedly linked to a defeated… pic.twitter.com/yf7M3dLt9C
ಸಂತ್ರಸ್ತ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಭುವನೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರ್ಪೋರೇಟರ್ ಜೀವನ್ ರಾವತ್ ಹಾಗೂ ಅವರೊಂದಿಗೆ ಬಂದಿದ್ದ ರಶ್ಮಿ ಮಹಾಪಾತ್ರ ಮತ್ತು ದೇಬಾಶಿಶ್ ಪ್ರಧಾನ್ ಎಂಬವರನ್ನು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆಯನ್ನು ಖಂಡಿಸಿ ವಿಪಕ್ಷ ಬಿಜು ಜನತಾದಳ (ಬಿಜೆಡಿ)ದ ಕಾರ್ಪೊರೇಟರ್‌ಗಳು ಮತ್ತು ಬಿಎಂಸಿ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ‘ಯಾರೂ ಸುರಕ್ಷಿತವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖ್ಯಸ್ಥ, ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, “ಅಧಿಕಾರಿ ರತ್ನಾಕರ್ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವುದು ತೀವ್ರ ಆಘಾತ ಉಂಟುಮಾಡಿದೆ. ಈ ಅಮಾನವೀಯ ದಾಳಿ ನಡೆಸಿದ, ದಾಳಿಗೆ ಪಿತೂರಿ ರೂಪಿಸಿದ ರಾಜಕೀಯ ನಾಯಕರು ಸೇರಿದಂತೆ ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನು ಒತ್ತಾಯಿಸಿದ್ದಾರೆ.
“ಈ ವೀಡಿಯೊವನ್ನು ನೋಡಿ ನನಗೆ ಆಘಾತವಾಗಿದೆ. ಇಂದು, ಬಿಎಂಸಿಯ ಹುಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರನ್ನು ಗೂಂಡಾಗಳು ಎಳೆದೊಯ್ದು ಬಿಜೆಪಿ ಕಾರ್ಪೊರೇಟರ್ ಮುಂದೆಯೇ ಕ್ರೂರವಾಗಿ ಹಲ್ಲೆ ನನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಯೊಂದಿಗೆ ಆರೋಪಿಗಳು ಸಂಬಂಧ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಇದು ರಾಜಕೀಯ ಪಿತೂರಿ ಮತ್ತು ಹಲ್ಲೆ. ಒಬ್ಬ ಹಿರಿಯ ಅಧಿಕಾರಿ ತನ್ನದೇ ಕಚೇರಿಯಲ್ಲಿ ಸುರಕ್ಷಿತವಾಗಿ ಇರಲು ಸಾಧ್ಯವಾಗಿದ್ದರೆ, ಸಾಮಾನ್ಯ ನಾಗರಿಕರು ಸರ್ಕಾರದಿಂದ ಯಾವ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರೀಕ್ಷಿಸಲು ಸಾಧ್ಯ” ಎಂದು ಪಟ್ನಾಯಕ್ ಪ್ರಶ್ನಿಸಿದ್ದಾರೆ.