ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಪರಭಾರೆ ಹಾಗೂ ಭೂ ಪರಿವರ್ತನೆ ಆರೋಪ ಪ್ರಕಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿರುದ್ದ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ರಾಜ್ಯ ಮಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ದೂರು ನೀಡಿದ್ದಾರೆ.
ಮಧುಗಿರಿ ತಾಲೂಕಿನ ತುಮ್ಮಲು ಗ್ರಾಮದ ಸರ್ವೆ ನಂ. 22ರಲ್ಲಿ 20 ಎಕರೆ 31 ಗುಂಟೆ ಸರ್ಕಾರಿ ದರಕಾಸ್ತು ಭೂಮಿ ಪರಭಾರೆ ಹಾಗೂ ಸರ್ವೆ ನಂ. 40 ರಲ್ಲಿ 7 ಎಕರೆ 4 ಗುಂಟೆ ಸರ್ಕಾರಿ ಭೂಮಿ ಪರಿವರ್ತನೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
“ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಸರ್ಕಾರಿ ದರಕಾಸ್ತು ಭೂಮಿಯನ್ನ ಏಷಿಯನ್ ಪ್ಯಾಬ್ ಟೆಕ್ ಲಿ. ಸೋಲಾರ್ ಪವರ್ ಪ್ಲಾಂಟ್ ಸ್ಥಾಪನೆಗೆ ಭೂ ಪರಿವರ್ತನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಭಾನುಪ್ರಕಾಶ್, ಮಧುಗಿರಿ ತಹಶೀಲ್ದಾರ್ ಸಿರಿನ್ ತಾಜ್, ಕಂದಾಯ ಅಧಿಕಾರಿ ಚಿಕ್ಕರಾಜು ಅಕ್ರಮದಲ್ಲಿ ಭಾಗಿಯಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ಅಂದಿನ ಉಪವಿಭಾಗಾಧಿಕಾರಿ ಎಸ್ ಎಲ್ ಮಂಜುನಾಥ್ ಆದೇಶದಂತೆ ಮಧುಗಿರಿ ತಾಲೂಕಿನ ತೊಂಡೋಟಿ ಗ್ರಾಮದ ಟಿ ಎಸ್ ವಿಶ್ವೇಶ್ವರ ಶಾಸ್ತ್ರಿ ಹೆಸರಿಗೆ 10 ಎಕರೆ 31 ಗುಂಟೆ, ಭಾನು ಪ್ರಕಾಶ್-ಸತ್ಯಪ್ರಕಾಶ್ ಹೆಸರಿಗೆ ಜಂಟಿ ಯಾಗಿ 10 ಎಕರೆ 31 ಗುಂಟೆ, ಸರ್ವೆ ನಂ 40 ರಲ್ಲಿ ಟಿ ಎಸ್ ವೆಂಕಟನಾರಾಯಣ ಶಾಸ್ತ್ರಿ-ಶ್ರೀನಿವಾಸ್ ಶಾಸ್ತ್ರಿಗೆ ಜಂಟಿ 7 ಎಕರೆ 4 ಗುಂಟೆ ಸರ್ಕಾರಿ ಆಸ್ತಿ ಖಾತೆ ಮಾಡಲಾಗಿದೆ. ಇದೇ 7 ಎಕರೆ ಭೂಮಿಯನ್ನ ಶಿವಾಜಿನಗರದ ಮಹಮದ್ ಇಕ್ಬಾಲ್, ಮಹಮದ್ ಇಕ್ಬಾಲ್‌ನಿಂದ ದೇವನಹಳ್ಳಿ ತಾಲೂಕು ಚಮ್ಮೆನಹಳ್ಳಿ ಗ್ರಾಮದ ಗೋಪಾಲಗೌಡ ಎನ್ನುವವರಿಗೆ ಕ್ರಯ ಮಾಡಲಾಗಿದೆ. ಗೋಪಾಲಗೌಡನಿಂದ ಏಷಿಯನ್ ಪ್ಯಾಬ್ ಟೆಕ್ ಲಿ.ಗೆ, ಕಾಂಗ್ರೆಸ್ ಶಾಸಕ ಪುಟ್ಟಸ್ವಾಮಿಗೌಡ ಮಗ ಕೆ ಪವನ್ ಒಡೆತನದ ಸೋಲಾರ್ ಕಂಪನಿಗೆ, ಕುಣಿಗಲ್ ಸಬ್ ರಿಜಿಸ್ಟ್ರಾರ್ ಕಚೇರಿಯ ಕೆ ಪಿ ಪವನ್ ಹೆಸರಿಗೆ ನೊಂದಣಿ ಮಾಡಲಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ತುಮಕೂರು | ರಿಂಗ್ ರೋಡ್ ನೀಡುತ್ತಿದೆ ಸಾವಿನ ಆಹ್ವಾನ! : ಎಚ್ಚೆತ್ತುಕೊಳ್ಳುವರೇ ಅಧಿಕಾರಿಗಳು?
ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ರಮೇಶ್ ಒತ್ತಾಯಿಸಿದ್ದಾರೆ.