ಉತ್ತರಾಖಂಡದಲ್ಲಿ ಮಳೆ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ರುದ್ರಪ್ರಯಾಗದಲ್ಲಿ ಅಲಕನಂದಾ ನದಿ ತುಂಬಿ ಹರಿಯುತ್ತಿದೆ. ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವುದು ನದಿ ತಟದ ಪ್ರದೇಶಗಳಲ್ಲಿ ಆತಂಕ ಹೆಚ್ಚಾಗಿದೆ. ಅಲ್ಲಿನ ದೇವಾಲಯಗಳು ಮತ್ತು ಶಿವನ ಬೃಹತ್ ಪ್ರತಿಮೆ ನೀರಿನಲ್ಲಿ ಮುಳಿಗಿವೆ.
ಇದೇ ಸಂದರ್ಭದಲ್ಲಿ, ಉತ್ತರಾಖಂಡದ ಪ್ರಸಿದ್ಧ ತಾಣ ಕೇದಾರನಾಥದಲ್ಲಿ ‘ಕೇದಾರನಾಥ ಯಾತ್ರೆ’ಯೂ ನಡೆಯುತ್ತಿದೆ. ಸುಮಾರು 8 ಸಾವಿರ ಭಕ್ತರು ಕೇದಾರನಾಥದಲ್ಲಿದ್ದಾರೆ. ಅಲ್ಲಿಯೂ ಮಳೆ ಸುರಿಯುತ್ತಿದ್ದು, ಭಕ್ತರು ಆತಂಕಗೊಂಡಿದ್ದಾರೆ. ಕೇದಾರನಾಥದಲ್ಲಿದ್ದ ಎಲ್ಲ ಭಕ್ತರನ್ನು ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಸೋನ್‌ಪ್ರಯಾಗಕ್ಕೆ ಸ್ಥಳಾಂತರಿಸಿದ್ದಾರೆ.
ಮಳೆಯಿಂದಾಗಿ, ಚಾರ್‌ಧಾಮ ಯಾತ್ರೆಯನ್ನು ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಯಾತ್ರಾರ್ಥಿಗಳನ್ನು ವಾಹನಗಳಲ್ಲಿ ಕೇದಾರನಾಥಕ್ಕೆ ಕರೆದೊಯ್ಯಲಾಗಿದೆ.
ಕೇದಾರನಾಥದ ಗೌರಿಕುಂಡ್ ಹೆದ್ದಾರಿಯಲ್ಲಿ ಶಟಲ್ ಪಾರ್ಕಿಂಗ್ ಮತ್ತು ಮುಂಕಟಿಯಾ ಬಳಿ ಭೂಕುಸಿತಗಳೂ ಸಂಭವಿಸಿವೆ. ನಿರಂತರ ಮಳೆ ಸುರಿಯುತ್ತಿರುವ ಕಾರಣ ಹೆದ್ದಾರಿ ಮತ್ತು ಪಾದಚಾರಿ ಮಾರ್ಗವು ಹಲವೆಡೆ ಆತಂಕಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH | Uttarakhand: Water level of Alaknanda River rises, submerging small temples and a statue of Lord Shiva in Rudraprayag. pic.twitter.com/AKGxZXm8b2
— ANI (@ANI) July 1, 2025
ಇನ್ನು – ಡೆಹ್ರಾಡೂನ್, ಉತ್ತರಕಾಶಿ, ತೆಹ್ರಿ, ಪೌರಿ, ರುದ್ರಪ್ರಯಾಗ, ನೈನಿತಾಲ್ ಹಾಗೂ ಬಾಗೇಶ್ವರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಜುಲೈ 6ರವರೆಗೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಹಿಮಾಚಲ ಪ್ರದೇಶದಲ್ಲಿಯೂ ಮಳೆಯಾಗುತ್ತಿದೆ. ಕುಲ್ಲು, ಮನಾಲಿ ಹಾಗೂ ಬಂಜಾರ್ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಪ್ರದೇಶಗಳ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಶಾಲೆಗಳು, ಐಟಿಐಗಳು, ವೃತ್ತಿಪರ ತರಬೇತಿ ಕೇಂದ್ರಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.