ಸುಮಾರು ವರ್ಷಗಳಿಂದ ಬಯಲು ಸೀಮೆ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಈ ಭಾಗದ ಜಿಲ್ಲೆಗಳಲ್ಲಿ ಸಮಸ್ಯೆ ಬಗೆಹರಿದಿಲ್ಲ. ನಾಳೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವ ಕಾರಣ ಕುಡಿಯುವ ನೀರಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಜೈವಿಕ ಸಂಸ್ಥೆಯ ಚಿಕ್ಕಬಳ್ಳಾಪುರ ಸಂಯೋಜಕ ನಾರಾಯಣಸ್ವಾಮಿ ಮನವಿ ಮಾಡಿದರು.
“ವೀರಪ್ಪ ಮೊಯ್ಲಿ ಸಂಸದರಾದಾಗಿನಿಂದಲೂ ಎತ್ತಿನಹೊಳೆ ಯೋಜನೆಯ ಪ್ರಸ್ತಾಪ ಆಗ್ತಿದೆ. ಆದ್ರೆ ಇದುವರೆಗೂ ಕಾರ್ಯಗತವಾಗಿಲ್ಲ. ಎತ್ತಿನಹೊಳೆ ಯೋಜನೆ ಬಗ್ಗೆ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಕಾರ್ಯಗತ ಮಾಡಿದರೆ ಬಹಳ ಅನುಕೂಲ ವಾಗುತ್ತದೆ” ಎಂದರು.
“ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ಸಾವಿರ ಜೀತ ಮುಕ್ತರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ ಸಚಿವರಿಗೂ ಮನವಿ ಮಾಡಲಾಗಿದೆ. ಜಿಲ್ಲೆಯ ಅಧಿಕಾರಿಗಳೂ ನಿರ್ಲಕ್ಷ್ಯವಹಿಸಿರುವಂತೆ ಕಾಣುತ್ತಿದೆ. ನಾಳೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿ ಜೀತ ಮುಕ್ತರಿಗೆ ಪುನರ್ವಸತಿ ನೀಡಬೇಕು ಹಾಗೂ ಗ್ರಾಮೀಣ ಭಾಗದಲ್ಲಿ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತು ನೀಡಬೇಕು. ಮನೆ ಮನೆ ಗಂಗೆ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಲಾಗಿಲ್ಲ” ಎಂದು ಆರೋಪಿಸಿದರು.
“ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಎತ್ತಿನಹೊಳೆ ಯೋಜನೆ ಎಲ್ಲಿಯವರೆಗೆ ಆಗಿದೆ ಎಂಬುದರ ಕುರಿತು ಮಾಹಿತಿ ನೀಡಿ, ಕೂಡಲೇ ಈ ಯೋಜನೆಯನ್ನು ಪೂರ್ಣಗೊಳಿಸಬೇಕು” ಎಂದು ಆಗ್ರಹಿಸಿದರು.
“ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬಡ ಜನರಿಗೆ ವಸತಿ ಕೊಡುವ ಯೋಜನೆ ಬಗ್ಗೆ ಚರ್ಚೆ ಮಾಡಿ ಕಾರ್ಯಗತ ಮಾಡಿದ್ರೆ ಬಹಳ ಸಂತೋಷವಾಗುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹೆಚ್ ಎನ್ ವ್ಯಾಲಿ ನೀರನ್ನು 3ನೇ ಹಂತದ ಶುದ್ಧೀಕರಣ ಮಾಡಬೇಕು” ಎಂದು ಎದ್ದೇಳು ಕರ್ನಾಟಕ ಸಂಯೋಜಕ ಸಲ್ಮಾನ್ ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಕೋಮಲ್ ನಾಮನಿರ್ದೇಶಿತ ನಿರ್ದೇಶಕರಾಗಿ ಮೊಹಮದ್ ಯೂಸೂಫ್ ಶಂಶೀರ್ ಆಯ್ಕೆ
ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸದಲ್ಲೇ ಅದರಲ್ಲೂ ವಿಶೇಷವಾಗಿ ಐತಿಹಾಸಿಕ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮೊದಲ ಬಾರಿ ನಡೆಯುತ್ತಿರುವುದರಿಂದ ಬಯಲು ಸೀಮೆ ಜಿಲ್ಲೆಗಳ ಜನರು ಸರ್ಕಾರದ ಮೇಲೆ ಬಹಳ ನೀರಿಕ್ಷೆ ಇಟ್ಟಿದ್ದು, ನಾಳೆ ಸಚಿವ ಸಂಪುಟ ಸಭೆ ಬಳಿಕ ಯಾವ ರೀತಿಯ ವಿಶೇಷ ಅನುದಾನ ಹಾಗೂ ಯೋಜನೆಗಳನ್ನು ಈ ಜಿಲ್ಲೆಗಳಿಗೆ ನೀಡಲಾಗುತ್ತದೆ ಎಂದು ಗೊತ್ತಾಗಲಿದೆ.