‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳುವುದು ಕೇವಲ ಭಾವನೆಗಳ ಅಭಿವ್ಯಕ್ತಿಯಾಗಿದೆ, ಅದು ಲೈಂಗಿಕ ಉದ್ದೇಶವಾಗಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಹಾಗೆಯೇ 2015ರಲ್ಲಿ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಿಂದ 35 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.
ಅನುಚಿತವಾಗಿ ಸ್ಪರ್ಶಿಸುವುದು, ಬಲವಂತದಿಂದ ಬಟ್ಟೆ ಕಳಚುವುದು, ಅಸಭ್ಯವಾಗಿ ಸನ್ನೆ ಮಾಡುವುದನ್ನು ಲೈಂಗಿಕ ಉದ್ದೇಶ ಎಂದು ಹೇಳಲಾಗುತ್ತದೆ ಎಂದು ನ್ಯಾಯಮೂರ್ತಿ ಉರ್ಮಿಳಾ ಜೋಶಿ-ಫಾಲ್ಕೆ ಅವರ ಪೀಠ ತೀರ್ಪಿನಲ್ಲಿ ಹೇಳಿದೆ.
ಇದನ್ನು ಓದಿದ್ದೀರಾ? ಕುನಾಲ್ ಕಾಮ್ರಾ ವಿಡಿಯೋ ಹಂಚಿಕೊಂಡವರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಂಡಿಲ್ಲ: ಬಾಂಬೆ ಹೈಕೋರ್ಟ್
ಈ ವ್ಯಕ್ತಿಯು ನಾಗ್ಪುರದಲ್ಲಿ 17 ವರ್ಷದ ಬಾಲಕಿಯ ಕೈ ಹಿಡಿದು ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳಿದ್ದ. ಈ ಸಂಬಂಧ ನಾಗ್ಪುರದ ಸೆಷನ್ಸ್ ನ್ಯಾಯಾಲಯವು 2017ರಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆಯಡಿ ಆತನನ್ನು ದೋಷಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣವನ್ನು ಖುಲಾಸೆಗೊಳಿಸಿದೆ. “ಆರೋಪಿಯು ಸಂತ್ರಸ್ತೆಯ ಜೊತೆ ಲೈಂಗಿಕ ಸಂಪರ್ಕ ಸಾಧಿಸುವ ಉದ್ದೇಶ ಹೊಂದಿದ್ದ ಎಂದು ಸೂಚಿಸುವ ಯಾವುದೇ ಘಟನೆಗಳು ನಡೆದಿಲ್ಲ. ‘ಐ ಲವ್ ಯು’ ಎಂಬುದು ಲೈಂಗಿಕ ಉದ್ದೇಶವನ್ನು ಸೂಚಿಸಲ್ಲ. ಇದು ನಿಜವಾಗಿ ಭಾವನೆಯ ಅಭಿವ್ಯಕ್ತಿ” ಎಂದು ಹೈಕೋರ್ಟ್ ಉಲ್ಲೇಖಿಸಿದೆ.
