ಪತ್ರಕರ್ತರಿಗೆ ನೈತಿಕತೆ ಬಹಳ ಮುಖ್ಯ. ಪತ್ರಿಕೋದ್ಯಮ ಉಳಿಯಬೇಕು ಹಾಗೂ ಸಮಾಜ ಉಳಿಯಬೇಕು ಅಂದರೆ ಇದರಲ್ಲಿ ಹೆಚ್ಚು ಪ್ರಾಮಾಣಿಕತೆ ಇರಬೇಕು ಎಂದು ಸಂಯುಕ್ತ ಕರ್ನಾಟಕದ ಸಹಾಯಕ ಸಂಪಾದಕ, ಪತ್ರಕರ್ತ ಶಿವಕುಮಾರ್ ಮೆಣಸಿನಕಾಯಿ ಹೇಳಿದರು.
ಕೊಪ್ಪಳ ನಗರದ ಭಾಗ್ಯನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಕೊಪ್ಪಳ ಮಿಡಿಯಾ ಕ್ಲಬ್ ವತಿಯಿಂದ ಆಯೋಜಿಸಿದ್ದ ಪತ್ರಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪತ್ರಕರ್ತರಲ್ಲಿ ಕಠಿಣತೆ ಹೆಚ್ಚು. ಸಮಾಜ ಕಟ್ಟಕಡೆಯ ಸಮುದಾಯದಲ್ಲಿ ಏನಾದರೂ ನಡೆದರೆ ಅದರ ಬಗ್ಗೆ ನಾನು ಪರಿತಪಿಸುತ್ತೇನೆ. ರಾಜ್ಯದ ಯಾವುದೇ ಮೂಲೆಯಲ್ಲಿ ಸುದ್ಧಿಗಳ ಸಂಗ್ರಹ ಪಡೆಯಬೇಕೆಂದರೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟಕೊಳ್ಳಬೇಕು. ಪತ್ರಿಕೋದ್ಯಮ ಉದ್ಯಮವಾಗಿ ಬದಲಾದರೂ ಪತ್ರಕರ್ತ ಬದಲಾಗಬಾರದು. ಪತ್ರಿಕೋದ್ಯಮ ಅಪರಾಧಿ ಸ್ಥಾನದಲ್ಲಿ ಇದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುವ ವರದಿಗಾರರು ಹಾಗೂ ಛಾಯಾಗ್ರಾಹಕರಿಕೆ ಅತಿ ಹೆಚ್ಚು ಸವಾಲುಗಳಿವೆ. ಕಾರಣ, ಅವರು ಅಧ್ಯಯನಶೀಲರಾಗುತ್ತಿಲ್ಲ. ಅವರು ಬ್ರೇಕಿಂಗ್ ಸುದ್ಧಿಗಳಲ್ಲಿ ಬಹಳ ತಲ್ಲೀನರಾಗಿರುತ್ತಾರೆ. ಪತ್ರಿಕಾ ಮಾಧ್ಯಮವನ್ನು ಜನರು ಅಪರಾಧಿ ಸ್ಥಾನದಲ್ಲಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹುಡುಕುವಿಕೆ ಹಾಗೂ ಸಮಾಜವನ್ನ ನೋಡುವ ದೃಷ್ಟಿಕೋನ ನಮ್ಮಲ್ಲಿ ಬದಲಾಗಬೇಕು. ರಾಜಿ ಮಾಡಿಕೊಳ್ಳುವ ಭಾವನೆ ಬಂದರೆ ಪತ್ರಿಕಾ ಧರ್ಮಕ್ಕೆ ಮಾಡುವ ಬಹು ದೊಡ್ಡ ಅವಮಾನ” ಎಂದು ಕಿವಿಮಾತು ಹೇಳಿದರು.
ಕ್ಲಬ್ ವತಿಯಿಂದ ಪ್ರಥಮ ಬಾರಿಗೆ ಪತ್ರಿಕೋದ್ಯಮದಲ್ಲಿ ಸಾಧನಗೈದ ಪಬ್ಲಿಕ್ ವಾಹಿನಿ ನಿರೂಪಕ ಅರುಣ್ ಬಡಿಗೇರರವರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಮಾತನಾಡಿ, “ಪತ್ರಿಕೋದ್ಯಮ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅವಲೋಕಿಸಬೇಕಿದೆ. ನಿಕೋಬಾರ್ ದ್ವೀಪದಲ್ಲಿ ಅದ್ಬುತವಾದ ಹೈ ಲ್ಯಾಂಡ್ ಇದೆ. ಅಲ್ಲಿ 215 ಜನರ ಸಮುದಾಯ ವಾಸ ಮಾಡುತ್ತಿತ್ತು. ಇಂತಹ ಸ್ಥಳಗಳಲ್ಲಿ ಕಂಪನಿ ಆರಂಭಿಸಲು ಅವಕಾಶ ಇಲ್ಲ. ಆದರೆ, ದೇಶದ ಪ್ರತಿಷ್ಠಿತ ಕಂಪನಿಯೊಂದು ದ್ವೀಪದಲ್ಲಿ ಕಾಲಿಟ್ಟಿದೆ. ಇದೀಗ ಅಲ್ಲಿ ವಾಸಿಸುತ್ತಿರುವ ಜನರು ದ್ವೀಪದಲ್ಲಿ ಇಲ್ಲ. ಆ ಕಾಡು ಖಾಲಿಯಾಗಿದೆ. ಈ ಬಗ್ಗೆ ಒಂದೂ ವರದಿ ಬಂದಿಲ್ಲ. ಈ ಬಗ್ಗೆ ಚರ್ಚಿಸುವ ಅಗತ್ಯತೆ ಇದೆ” ಎಂದರು.
ಪಬ್ಲಿಕ್ ವಾಹಿನಿ ಪತ್ರಕರ್ತ ಅರುಣ್ ಬಡಿಗೇರ ಮಾತನಾಡಿ, “ನೀವೆಲ್ಲ ಪರದೆಯಲ್ಲಿ ಕಾಣುವವರನ್ನ ಹೆಚ್ಚು ಗುರುತಿಸುವ ಕೆಲಸ ಮಾಡುತ್ತೀರಿ. ಆದರೆ, ಪರದೆಯ ಹಿಂಭಾಗ ಕೆಲಸ ಮಾಡುವವರು ಹೆಚ್ಚು ಇರುತ್ತಾರೆ. ಅಂತಹವರನ್ನು ಗುರುತಿಸಿಸುವ ಕೆಲಸ ಆಗಬೇಕು. ಮಾಧ್ಯಮಗಳು ತುರ್ತು ಚಿಕಿತ್ಸೆಯಲ್ಲಿವೆ. ಪತ್ರಿಕೆಗಳು ಉದ್ಯಮದಲ್ಲಿವೆ. ಅದರಲ್ಲಿ ಮೌಲ್ಯಗಳೇ ಇಲ್ಲ. ತೊರಿಸಿದ್ದನ್ನೇ ತೋರಿಸುವ ಮೀಡಿಯಾದವರ ಮೇಲೆ ಜನರ ಬೇಸರ ಇದೆ. ಆದರೆ, ಜನ ಒಳ್ಳೆಯದನ್ನ ತೋರಿಸಿದಾಗ ನೋಡಲ್ಲ ಇದು ದುರಂತ” ಎಂದರು.
ಇದನ್ನೂ ಓದಿ: ಕೊಪ್ಪಳ | ವಿವಾಹೇತರ ಸಂಬಂಧ ಆರೋಪ : ಕೊಡಲಿಯಿಂದ ಹೊಡೆದು ವ್ಯಕ್ತಿ ಕೊಲೆ
ಮೀಡಿಯಾ ಕ್ಲಬ್ ಅಧ್ಯಕ್ಷ ರವೀಂದ್ರ ವಿ ಕೆ ಮಾತನಾಡಿ, “ಸದ್ಯ ಮಾಧ್ಯಮ ಕ್ಷೇತ್ರ ಬದಲಾಗಿದೆ. ಪತ್ರಿಕೋದ್ಯಮದಲ್ಲಿ ಹಲವು ಸವಾಲುಗಳಿವೆ. ದೇಶ ಕಟ್ಟುವಲ್ಲಿ ಮೂರು ಅಂಗಗಳ ಜತೆಗೆ ಪತ್ರಿಕೋದ್ಯಮವೂ ಸೇರಿದೆ. ಪತ್ರಿಕೋದ್ಯಮ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪತ್ರಿಕಾ ರಂಗವನ್ನು ರಾಜಕೀಯ ಪಕ್ಷಗಳಿಗೆ ಗುರುತಿಸುವ ಕೆಲಸ ಆಗುತ್ತಿದೆ. ಆದರೆ, ಈಗಲೂ ವಿಪಕ್ಷವಾಗಿ ಕೆಲಸ ಮಾಡುತ್ತಿದೆ. ಪತ್ರಿಕಾ ರಂಗ ಉದ್ಯಮವಾಗಿ ಮಾರ್ಪಟ್ಟಿದ್ದರೂ, ಪತ್ರಿಕೆಗಳು ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿವೆ” ಎಂದು ತಿಳಿಸಿದರು.
ಎಸ್ಎಫ್ಎಸ್ ಶಾಲೆಯ ಪ್ರಾಚಾರ್ಯ ಫಾದರ್ ಜಬಮಲೈ ಮಾತನಾಡಿ, “ಸಮಾಜ ಕ್ರಮಬದ್ಧವಾಗಿ ಬದುಕಲು ಪತ್ರಿಕೋದ್ಯಮದ ಕೊಡುಗೆ ಅಪಾರವಾಗಿದೆ. ಮಂಗಳೂರು ಸಮಾಚಾರದಲ್ಲಿ ಕನಕದಾಸ ಸೇರಿ ಮಹನೀಯರ ಕೀರ್ತನೆಗಳು ಪ್ರಕಟವಾಗುತ್ತಿದ್ದವು. ಹೊರದೇಶದವರು ಕನ್ನಡಕ್ಕೆ ಆದ್ಯತೆ ನೀಡಿದ್ದಾರೆ. ಕರ್ನಾಟಕ ಎಲ್ಲರನ್ನೂ ಸ್ವಾಗತಿಸಿದೆ. ಎಲ್ಲರೂ ತಪ್ಪದೇ ಕನ್ನಡಲ್ಲೇ ಮಾತನಾಡಬೇಕು ಹಾಗೂ ವ್ಯವಹರಿಸಬೇಕು” ಎಂದರು.