ನರೇಂದ್ರ ಮೋದಿ ಸರ್ಕಾರ ಕಳೆದ 8 ವರ್ಷಗಳ ಹಿಂದೆ ಜಾರಿಗೊಳಿಸಿದ ಜಿಎಸ್‌ಟಿ ತೆರಿಗೆ ಕಾರ್ಫೊರೇಟ್ ಉದ್ಯಮಿಗಳಿಗೆ ನೆರವಾಗಿ, ಬಡವರ ಬದುಕನ್ನು ಹಾಳುಮಾಡಿ ದೇಶದ ಆರ್ಥಿಕ ವ್ಯವಸ್ಥೆಯನ್ನು ನಾಶಗೊಳಿಸಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಅವರು, ಬಡವರನ್ನು ಶಿಕ್ಷಿಸಲು, ಎಂಎಸ್‌ಎಂಇಗಳನ್ನು ಹತ್ತಿಕ್ಕಲು, ರಾಜ್ಯಗಳನ್ನು ದುರ್ಬಲಗೊಳಿಸಲು ಮತ್ತು ಪ್ರಧಾನಿಯವರ ಕೆಲವು ಶತ ಕೋಟ್ಯಾಧೀಶ ಸ್ನೇಹಿತರಿಗೆ ಪ್ರಯೋಜನವನ್ನು ನೀಡಲು ಇದನ್ನು ಜಾರಿಗೊಳಿಸಲಾಗಿದೆ. ಉತ್ತಮ ಮತ್ತು ಸರಳ ತೆರಿಗೆ ಎಂದು ಆರಂಭದಲ್ಲಿ ಭರವಸೆ ನೀಡಲಾಯಿತು. ಆದರೆ, 900 ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡುವುದರೊಂದಿಗೆ ದೇಶಕ್ಕೆ ದುಃಸ್ವಪ್ನವಾದ ಐದು ಸ್ಲ್ಯಾಬ್ ತೆರಿಗೆಯನ್ನು ವಿಧಿಸಲಾಯಿತು ಎಂದು ಹೇಳಿದರು.
ಪಾಪ್‌ಕಾರ್ನ್ ಮತ್ತು ಕ್ರೀಮ್ ಬನ್‌ಗಳು ಸಹ ಜಿಎಸ್‌ಟಿ ಜಾಲದಲ್ಲಿ ಸಿಲುಕಿಕೊಂಡಿವೆ. ಇದರಿಂದ ದೊಡ್ಡ ಕಾರ್ಪೊರೇಟ್‌ಗಳಿಗೆ ಅನುಕೂಲಕರವಾಗಿದೆ. ಆದರೆ ಸಣ್ಣ ಅಂಗಡಿಯವರು, ಎಂಎಸ್‌ಎಂಇಗಳು ಮತ್ತು ಸಾಮಾನ್ಯ ವ್ಯಾಪಾರಿಗಳು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಜಿಎಸ್‌ಟಿ ಪೋರ್ಟಲ್ ದಿನನಿತ್ಯದ ಸಮಸ್ಯೆಯ ಮೂಲವಾಗಿ ಉಳಿದಿದೆ. ಭಾರತದ ಅತಿದೊಡ್ಡ ಉದ್ಯೋಗ ಸೃಷ್ಟಿಕರ್ತರಾದ ಎಂಎಸ್‌ಎಂಇಗಳು ಹೆಚ್ಚು ನಷ್ಟ ಅನುಭವಿಸಿವೆ. ಎಂಟು ವರ್ಷಗಳ ಹಿಂದೆ ಜಿಎಸ್‌ಟಿ ಜಾರಿಗೆ ಬಂದ ನಂತರ 18 ಲಕ್ಷಕ್ಕೂ ಹೆಚ್ಚು ಉದ್ಯಮಗಳು ಮುಚ್ಚಲ್ಪಟ್ಟಿವೆ ಎಂದು ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕಾ ದಿನಾಚರಣೆ: ಅತಿರೇಕ ಅಳಿಯುತ್ತದೆ, ಒಳಿತು ಉಳಿಯುತ್ತದೆ
ಸಾರ್ವಜನಿಕರು ಈಗ ಚಹಾದಿಂದ ಆರೋಗ್ಯ ವಿಮೆಯವರೆಗೆ ಎಲ್ಲದಕ್ಕೂ ಜಿಎಸ್‌ಟಿ ಪಾವತಿಸುತ್ತಾರೆ. ಆದರೆ ಕಾರ್ಪೊರೇಟ್ ಉದ್ಯಮಿಗಳು ವಾರ್ಷಿಕವಾಗಿ 1 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ವಿನಾಯಿತಿಗಳನ್ನು ಪಡೆಯುತ್ತಾರೆ. ಪೆಟ್ರೋಲ್ ಮತ್ತು ಡೀಸೆಲ್‌ಅನ್ನು ಉದ್ದೇಶಪೂರ್ವಕವಾಗಿ ಜಿಎಸ್‌ಟಿಯಿಂದ ಹೊರಗೆ ಇಡಲಾಗಿದ್ದು, ರೈತರು, ಸಾಗಣೆದಾರರು ಮತ್ತು ಸಾಮಾನ್ಯ ಜನರಿಗೆ ನೋವುಂಟುಮಾಡುತ್ತಿದೆ. ಬಿಜೆಪಿಯೇತರ ಆಡಳಿತದ ರಾಜ್ಯಗಳನ್ನು ಶಿಕ್ಷಿಸಲು ಜಿಎಸ್‌ಟಿ ಬಾಕಿಗಳನ್ನು ಸಹ ಅಸ್ತ್ರವಾಗಿ ಬಳಸಲಾಗುತ್ತಿದೆ. ಇದು ಮೋದಿ ಸರ್ಕಾರದ ಒಕ್ಕೂಟ ವಿರೋಧಿ ಕಾರ್ಯಸೂಚಿಯ ಸ್ಪಷ್ಟ ಪುರಾವೆಯಾಗಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಜಿಎಸ್‌ಟಿ ಯುಪಿಎ ಸರ್ಕಾರದಿಂದ ಬಂದ ಒಂದು ದಾರ್ಶನಿಕ ಕಲ್ಪನೆಯಾಗಿದ್ದು, ಭಾರತದ ಮಾರುಕಟ್ಟೆಗಳನ್ನು ಏಕೀಕರಿಸುವ ಮತ್ತು ತೆರಿಗೆಯನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಕಳಪೆ ಅನುಷ್ಠಾನ, ರಾಜಕೀಯ ಪಕ್ಷಪಾತ ಮತ್ತು ಅಧಿಕಾರಶಾಹಿ ಅತಿರೇಕದಿಂದ ಅದರ ಭರವಸೆಯನ್ನು ಹಾಳುಮಾಡಲಾಗಿದೆ. ಜಿಎಸ್‌ಟಿ ಜನರಿಗೆ ಅನುಕೂಲವಾಗಿ, ವ್ಯವಹಾರ ಸ್ನೇಹಿಯಾಗಿ ಮತ್ತು ನಿಜವಾಗಿಯೂ ಒಕ್ಕೂಟ ಸ್ನೇಹಿಯಾಗಿ ಇರಬೇಕು. ಸಣ್ಣ ಅಂಗಡಿಯವರಿಂದ ಹಿಡಿದು ರೈತರವರೆಗೆ ಪ್ರತಿಯೊಬ್ಬ ಭಾರತೀಯರೂ ನಮ್ಮ ರಾಷ್ಟ್ರದ ಪ್ರಗತಿಯಲ್ಲಿ ಪಾಲುದಾರರಾಗಲು ಜಿಎಸ್‌ಟಿಯಿಂದ ಸಾಧ್ಯವಾಗಬೇಕು. ಸವಲತ್ತು ಪಡೆದ ಕೆಲವರಿಗೆ ಮಾತ್ರವಲ್ಲದೆ ಶ್ರಮಪಡುವ ಎಲ್ಲರಿಗೂ ಅನುಕೂಲವಾಗುವ ತೆರಿಗೆ ವ್ಯವಸ್ಥೆಯನ್ನು ಭಾರತವು ಬಯಸುತ್ತದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.