2023ರ ಡಿಸೆಂಬರ್ 13ರಂದು ಅಂದಿನ ಸಂಸದ (ಈಗ ಮಾಜಿ) ಪ್ರತಾಪ್ ಸಿಂಹ ಅವರಿಂದ ಪಡೆದಿದ್ದ ಪಾಸ್‌ಗಳನ್ನು ಬಳಸಿ ಸಂಸತ್ತಿಗೆ ನುಗ್ಗಿ, ಕಲಾಪದ ವೇಳೆ ದಾಂಧಲೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದ ಇಬ್ಬರಿಗೆ ಇಬ್ಬರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಆರೋಪಿಗಳಾದ ನೀಲಂ ಆಜಾದ್ ಮತ್ತು ಮಹೇಶ್ ಕುಮಾವತ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಇಬ್ಬರಿಗೂ ಶರತ್ತುಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದೆ.
2001ರ ಸಂಸತ್ ಭಯೋತ್ಪಾದಕ ದಾಳಿಯ 22ನೇ ವಾರ್ಷಿಕೋತ್ಸವದ ದಿನ ಸಂಸತ್ತಿನಲ್ಲಿ ಕಲಾಪ ನಡೆಯುವಾಗ ಸಂಸತ್ತಿಗೆ ನುಗ್ಗಿ, ಈ ಇಬ್ಬರೂ ದಾಂಧಲೆ ನಡೆಸಿದ್ದರು. ಬಣ್ಣದ ಬಾಂಬುಗಳನ್ನು ಸಿಡಿಸಿ, ಆತಂಕ ಸೃಷ್ಟಿಸಿದ್ದರು. ಇಬ್ಬರನ್ನೂ ಅಂದೇ ಬಂಧಿಸಲಾಗಿತ್ತು. ಅಂದಿನಿಂದ ಈವರೆಗೆ ಇಬ್ಬರೂ ಜೈಲಿನಲ್ಲಿಯೇ ಇದ್ದಾರೆ.
ಇದೀಗ, ಇಬ್ಬರಿಗೂ ಜಾಮೀನು ದೊರೆತಿದೆ. ಆರೋಪಿಗಳಿಗೆ ಹೈಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ. ಅವುಳಲ್ಲಿ, ಇಬ್ಬರೂ ತನಿಖೆ ಅಥವಾ ವಿಚಾರಣಾ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಬಾರದು. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪತ್ರಿಕಾಗೋಷ್ಠಿ, ಮಾಧ್ಯಮ ಸಂದರ್ಶನ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಳ್ಳಬಾರದು ಎಂದು ನಿರ್ದೇಶಿಸಿದೆ.
ಈ ಲೇಖನ ಓದಿದ್ದೀರಾ?: ಬಿಹಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ: ‘ಎನ್‌ಆರ್‌ಸಿ’ಗಿಂತಲೂ ಹೆಚ್ಚು ಅಪಾಯಕಾರಿ
ಮಾತ್ರವಲ್ಲದೆ, ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಿಗ್ಗೆ 10:00 ಗಂಟೆಗೆ ತಮ್ಮ ನಿವಾಸದ ಬಳಿಯ ಪೊಲೀಸ್ ಠಾಣೆಯಲ್ಲಿ ವರದಿ ಮಾಡಿಕೊಳ್ಳಬೇಕು. ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ, ದೆಹಲಿ ಎನ್‌ಸಿಆರ್ ವ್ಯಾಪ್ತಿಯಿಂದ ಹೊರಹೋಗಬಾರದು ಎಂದು ಹೇಳಿದೆ.
ಪ್ರಕರಣದ ಇತರ ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಡಿ, ಲಲಿತ್ ಝಾ ಹಾಗೂ ಮಹೇಶ್ ಕುಮಾವತ್ ಅವರು ಈಗಾಗಲೇ ಜಾಮೀನು ಪಡೆದಿದ್ದಾರೆ.