ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯ ವೇಳೆ ಸಮೀಕ್ಷೆ ನಡೆಸದೇ ಇದ್ದರೂ, ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕೆಲಸವನ್ನು ಬಿಬಿಎಂಪಿ ಅಧಿಕಾರಿಗಳು ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.
ಕಳೆದ ಒಂದೂವರೆ ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಕುಟುಂಬದ ಸರ್ವೆ ಕಾರ್ಯವನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಶೇ.91 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಬೆಂಗಳೂರು ನಗರದಲ್ಲಿ ಶೇ.50 ರಷ್ಟು ಸಮೀಕ್ಷೆ ಪೂರ್ಣಗೊಂಡಿಲ್ಲ ಎಂದು ವರದಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಮೀಕ್ಷೆ ಪೂರ್ಣಗೊಂಡ ಮನೆಗಳನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಬಿಬಿಎಂಪಿ ಕಮಿಷನರ್, ಸಮೀಕ್ಷೆ ನಡೆಸುವವರು ‘ಸಮೀಕ್ಷೆ ಪೂರ್ಣಗೊಳಿಸಲಾಗಿದೆ’ ಎಂಬ ಸ್ಟಿಕ್ಕರ್ ಅಂಟಿಸುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಕಳೆದ ಜೂನ್ 23ರಿಂದ ನಗರದಲ್ಲಿ ಸ್ಟಿಕ್ಕರ್ ಅಂಟಿಸುವ ಕಾರ್ಯ ಆರಂಭಿಸಲಾಗಿದೆ. ಆದರೆ, ಇದೀಗ ಸಮೀಕ್ಷೆ ನಡೆಸದೇ ಸ್ಟಿಕ್ಕರ್ ಅಂಟಿಸುತ್ತಿರುವ ಕುರಿತು ವ್ಯಾಪಕ ದೂರು ಕೇಳಿ ಬರುತ್ತಿವೆ. ಅಲ್ಲದೇ, ಜೆಡಿಎಸ್ ಪಕ್ಷದ ಸೋಷಿಯಲ್ ಮೀಡಿಯಾ ಘಟಕವು ವಿಡಿಯೋವೊಂದನ್ನು ಹಂಚಿಕೊಂಡು, ಸರ್ಕಾರದ ವಿರುದ್ಧ ಕಿಡಿಕಾರಿತ್ತು.

ಟ್ವೀಟ್ನಲ್ಲಿ, “ಇದು ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಡೋಂಗಿ ಸಮೀಕ್ಷೆ. ಪರಿಶಿಷ್ಟರ ಉದ್ಧಾರ ಮಾಡುತ್ತೇವೆ ಎಂದು ಬೊಗಳೆ ಬಿಡುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರೇ, ಮನೆ ಮಾಲಿಕರ/ವಾಸವಿರುವವರ ಬಳಿ ಮಾಹಿತಿಯನ್ನು ಪಡೆಯದೇ ಕದ್ದು ಮುಚ್ಚಿ ಮನೆಗಳಿಗೆ ಚೀಟಿ ಅಂಟಿಸುವುದು ಯಾವ ಮಾದರಿಯ ಸಮೀಕ್ಷೆ? ಲಂಚಗುಳಿತನ, ಭ್ರಷ್ಟಾಚಾರ, ಅಧಿಕಾರ ದಾಹ, ಕುರ್ಚಿ ಕಿತ್ತಾಟದಲ್ಲಿ ಮಗ್ನರಾಗಿರುವ ಸಿಎಂ, ಡಿಸಿಎಂ ನಿಮ್ಮ ರಾಜಕೀಯ ಮೇಲಾಟಗಳಿಗಾಗಿ ಕನ್ನಡಿಗರ ತರಿಗೆ ಹಣವನ್ನು ಪೋಲು ಮಾಡಬೇಡಿ” ಎಂದು ಆರೋಪಿಸಿತ್ತು.
ಈ ಹಿನ್ನೆಲೆಯಲ್ಲಿ ನಾಗರಿಕರಿಗೆ ಬಿಬಿಎಂಪಿ ಸ್ಪಷ್ಟೀಕರಣ ನೀಡಿದ್ದು, “ಪ್ರತಿ ಅರ್ಹ ಕುಟುಂಬವು ಸಮೀಕ್ಷೆಯಲ್ಲಿ ಪ್ರತಿನಿಧಿಸಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಲು ಈ ಕಾರ್ಯ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದೆ.
ಕರ್ನಾಟಕ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ, ಬೆಂಗಳೂರು ನಗರದಾದ್ಯಂತ ಪರಿಶಿಷ್ಟ ಜಾತಿ(SC)ಸಮಗ್ರ ಸಮೀಕ್ಷೆಯನ್ನು ನಡೆಸುತ್ತಿದೆ. ಈ ಸಮೀಕ್ಷೆಯು ಪ್ರತಿ ಅರ್ಹ ಕುಟುಂಬವನ್ನು ಒಳಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಸಮೀಕ್ಷಾ ತಂಡಗಳು ನಿವಾಸಿಗಳೊಂದಿಗೆ ಸಂವಹನ ನಡೆಸದೆ ಮನೆಗಳ ಮೇಲೆ ಸಮೀಕ್ಷೆಯ ಸ್ಟಿಕ್ಕರ್ಗಳನ್ನು ಅಂಟಿಸಿವೆ ಎಂದು ಕೆಲವು ನಿವಾಸಿಗಳು, ಸಾಮಾಜಿಕ ಮಾಧ್ಯಮ, ಟಿವಿ ಸುದ್ದಿ ವಾಹಿನಿಗಳು ಮತ್ತು ನಮ್ಮ ಸಹಾಯವಾಣಿಯಲ್ಲಿ ಕಳವಳ ವ್ಯಕ್ತಪಡಿಸಿರುವುದನ್ನು ಗಮನಿಸಿದ್ದೇವೆ. ಈ ಕಳವಳಗಳನ್ನು ನಿವಾರಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಹಲವು ಅಂಶಗಳ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಬಿಬಿಎಂಪಿ ತಿಳಿಸಿದೆ.
ಇದನ್ನು ಓದಿದ್ದೀರಾ? ಪುತ್ತೂರಿನಲ್ಲೊಂದು ʼಲವ್ ಸೆಕ್ಸ್ ದೋಖಾʼ ಪ್ರಕರಣ; ಹಿಂದುತ್ವದ ಹುಲಿಗಳು ಈಗ ಎಲ್ಲಿ ಅವಿತಿದ್ದಾರೆ?
- ಸ್ಟಿಕ್ಕರ್ ಅಂಟಿಸುವ ಉದ್ದೇಶ:
ಸಮೀಕ್ಷಾ ತಂಡಗಳು ಪ್ರತಿ ಮನೆಗೆ ಭೇಟಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ದೃಢೀಕರಿಸುವ ಉದ್ದೇಶದಿಂದ ಮನೆ-ಮನೆಗೆ ಸ್ಟಿಕ್ಕರ್ಗಳನ್ನು ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಒಂದು ಭಾಗವಾಗಿದೆ. ಇದರಿಂದ ಯಾವುದೇ ಪರಿಶಿಷ್ಟ ಜಾತಿ ಕುಟುಂಬವು ಸಮೀಕ್ಷೆಯಿಂದ ಹೊರಗುಳಿಯದಂತೆ ಖಚಿತಪಡಿಸುತ್ತದೆ. - ಸಂವಹನದ ಅಗತ್ಯತೆ:
ಮನೆಯ ಸದಸ್ಯರೊಂದಿಗೆ ಸಂವಹನ ನಡೆಸದೆ ಸ್ಟಿಕ್ಕರ್ಗಳನ್ನು ಅಂಟಿಸಬಾರದು ಎಂದು ಸಮೀಕ್ಷಾ ತಂಡಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಆದಾಗ್ಯೂ, ಕೆಲ ಸಂದರ್ಭಗಳಲ್ಲಿ ಇದನ್ನು ಅನುಸರಿಸದಿರಬಹುದು ಎಂದು ನಾವು ಒಪ್ಪಿಕೊಳ್ಳುತ್ತೇವೆ. ಸಮೀಕ್ಷೆ ನಡೆಸಿದ ಲಕ್ಷಾಂತರ ಮನೆಗಳಲ್ಲಿ, ಕೆಲವು ಮನೆಗಳು ನಮ್ಮ ಸಮೀಕ್ಷಾಕರಿಂದ ತಪ್ಪಿಹೋಗಿರಬಹುದು. - ಸಂವಹನ ನಡೆಯದಿದ್ದಲ್ಲಿ ಏನು ಮಾಡಬೇಕು?:
ಯಾವುದೇ ಸಂವಹನವಿಲ್ಲದೆ ಸ್ಟಿಕ್ಕರ್ ಅಂಟಿಸಿದ್ದರೆ, ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆ 9481359000ಗೆ ಕರೆ ಮಾಡಿ(ಸಂಖ್ಯೆಯು ಸ್ಟಿಕ್ಕರ್ನ ಮೇಲೆ ಮುದ್ರಿತವಾಗಿರುತ್ತದೆ) ಸಮೀಕ್ಷೆಯನ್ನು ಸರಿಯಾಗಿ ಪೂರ್ಣಗೊಳಿಸಲು ಅಗತ್ಯ ವ್ಯವಸ್ಥೆ ಮಾಡುತ್ತೇವೆ. - ಸ್ವಯಂ ಘೋಷಣೆಯ ಆಯ್ಕೆ:
ಇನ್ನು ಸಮೀಕ್ಷೆಗೆ ಒಳಪಡದ ಯಾವುದೇ ಪರಿಶಿಷ್ಟ ಜಾತಿ ಕುಟುಂಬವು ಆನ್ಲೈನ್ನಲ್ಲಿ ಸ್ವಯಂ ಘೋಷಣಾ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಲಿಂಕ್ ಅನ್ನು ಪ್ರವೇಶಿಸಲು ಮತ್ತು ನಿಮ್ಮ ಮಾಹಿತಿಯನ್ನು ಸಲ್ಲಿಸಲು ಸ್ಟಿಕ್ಕರ್ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ. - ನಾಗರಿಕರ ಭಾಗವಹಿಸುವಿಕೆ ಮುಖ್ಯ:
ಸ್ಟಿಕ್ಕರ್ ಕೇವಲ ಸಮೀಕ್ಷಾ ತಂಡವು ಆ ಮನೆಗೆ ತಲುಪಿರುವುದನ್ನು ಮಾತ್ರ ಸೂಚಿಸುತ್ತದೆ. ನೇರ ಸಂವಹನ ನಡೆಯದ ಹೊರತು ಸಮೀಕ್ಷೆ ಪೂರ್ಣಗೊಂಡಿದೆ ಎಂದರ್ಥವಲ್ಲ. ತಮ್ಮ ಕುಟುಂಬವನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಿವಾಸಿಗಳು ಸಹಾಯವಾಣಿ ಅಥವಾ ಆನ್ಲೈನ್ ಪೋರ್ಟಲ್ ಅನ್ನು ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. .
ಆನ್ಲೈನ್ ಸ್ವಯಂ ಘೋಷಣಾ ಪೋರ್ಟಲ್:
https://schedulecastesurvey.karnataka.gov.in/selfdeclaration/
ಪರಿಶಿಷ್ಟ ಜಾತಿ ಸಮೀಕ್ಷಾ ಸಹಾಯವಾಣಿ: 9481359000
“ಸಮಗ್ರ ಮತ್ತು ನಿಖರವಾದ ಸಮೀಕ್ಷೆಯನ್ನು ನಡೆಸಲು ನಾಗರಿಕರು ಸಹಕರಿಸಬೇಕು. ನಿಮ್ಮ ಧ್ವನಿ ಕೂಡ ಮುಖ್ಯವಾಗಿದೆ. ಪ್ರತಿ ಅರ್ಹ ಕುಟುಂಬವು ಸಮೀಕ್ಷೆಯಲ್ಲಿ ಪ್ರತಿನಿಧಿಸಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡೋಣ” ಎಂದು ಬಿಬಿಎಂಪಿ ಅಧಿಕಾರಿಗಳು ನಾಗರಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
