ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿರುವ ಕಾಂಪೌಂಡ್ ಗೋಡೆಗಳ ಮೇಲೆ ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ, ವಿದ್ಯಾರ್ಥಿನಿಯ ಹೆಸರು ಬರೆದು ವಿಕೃತಿ ಮೆರೆದಿದ್ದ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಪೊಲೀಸರು ಬಂಧಿಸಿದ್ದಾರೆ.
ಕನಕಗಿರಿಯ ಕೆಪಿಎಸ್ ಮತ್ತು ಖಾಸಗಿ ಪಿಯು ಕಾಲೇಜಿನಲ್ಲಿ ಗೋಡೆಗಳ ಮೇಲೆ ಅಶ್ಲೀಲ ಚಿತ್ರಗಳನ್ನು ಬಿಡಿಸಿ, ಚಿತ್ರದ ಬಳಿ ವಿದ್ಯಾರ್ಥಿನಿಯ ಹೆಸರನ್ನು ಬರೆಯಲಾಗಿತ್ತು. ಕೃತ್ಯದ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದರು. ಈ ಬೆನ್ನಲ್ಲೇ ಆರೋಪಿ ಮೆಹಬೂಬ ಸಿಕ್ಕಲಗಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿರುದ್ಧ 2022ರ ಅಕ್ಟೋಬರ್ ಮತ್ತು 2023ರ ಜೂನ್ ತಿಂಗಳಿನಲ್ಲಿಯೇ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದವು. ಆದರೂ, ಆತನನ್ನು ಬಂಧಿಸಲಾಗಿರಲಿಲ್ಲ. ಇದೀಗ, ಆತ ಮತ್ತೆ ವಿಕೃತ ವರ್ತನೆ ತೋರಿದ್ದು, ಆತನನ್ನು ಬಂಧಿಸಲಾಗಿದೆ.
ಆರೋಪಿಯು ತನ್ನ ಸಂಬಂಧಿಯಾಗಿದ್ದ ಅಪ್ರಾಪ್ತ ಬಾಲಕಿಯನ್ನು 2 ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆ ಆರೋಪಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಬಳಿಕ, ಆಕೆಯ ಬಗ್ಗೆ ಅಶ್ಲೀಲವಾಗಿ ಗೋಡೆಗಳ ಮೇಲೆ ಆರೋಪಿ ಬರೆಯಲಾರಂಭಿಸಿದ್ದ.
ಅಲ್ಲದೆ, ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದು, ಅಶ್ಲೀಲ ಚಿತ್ರಗಳನ್ನು ಆಕೆಯ ಹೆಸರಿನಲ್ಲಿ ಪೋಸ್ಟ್ ಮಾಡುತ್ತಿದ್ದ ಎಂದೂ ಆರೋಪಿಸಲಾಗಿದೆ.