ಗದಗ ಜಿಲ್ಲಾದ್ಯಂತ ನಿರಂತವಾಗಿ ಮಳೆ ಸುರಿಯುತ್ತಿದ್ದು, ಜನ ಜಾನುವಾರು ಜೀವ ರಕ್ಷಣೆಗೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಹಾನಿಗೀಡಾದ ಮನೆಗಳನ್ನು 48 ಗಂಟೆಗಳಲ್ಲಿ ಸರ್ವೆ ನಡೆಸಿ, ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ತಿಳಿಸಿದ್ದಾರೆ.
“ಎಲ್ಲ ತಹಶೀಲ್ದಾರರ ಕಾರ್ಯಾಲಯ, ತಾಲೂಕು ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಾಲಯಗಳಲ್ಲಿ 24*7 ಕಂಟ್ರೋಲ್ ರೂಮ್‌ಗಳನ್ನು ತೆರೆದು, ಸಿಬ್ಬಂದಿಗಳನ್ನು ನೇಮಕ ಮಾಡಿ ಕಾರ್ಯನಿರ್ವಹಿಸಬೇಕು. ನದಿ, ಕಾಲುವೆ, ಹಳ್ಳಗಳ ಪ್ರವಾಹಗಳಿಂದ ತೊಂದರೆಗೊಳಗಾಗುವ ಪ್ರದೇಶದಲ್ಲಿ ಜನ ಜಾನುವಾರುಗಳು ಓಡಾಡದಂತೆ ಡಂಗೂರ ಸಾರಿರಬೇಕು. ಅಗತ್ಯವಿದ್ದೆಡೆ, ಕಾಳಜಿ ಕೇಂದ್ರಗಳನ್ನು ತೆರೆಯಬೇಕು” ಎಂದು ಸೂಚಿಸಿದ್ದಾರೆ.
“ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗಟಾರ, ಕಾಲುವೆ, ಚರಂಡಿಗಳಲ್ಲಿ ತುಂಬಿರುವ ಕಸ-ಪ್ಲಾಸ್ಟಿಕ್‌ಗಳನ್ನು ತೆಗೆದು ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಕ್ರಮ ವಹಿಸಬೇಕು. ಪ್ರವಾಹದಿಂದ ಬೆಳೆ ಹಾನಿಯಾದಲ್ಲಿ ಜಂಟಿ ಸರ್ವೇ ನಡೆಸಿ, ವರದಿ ಸಲ್ಲಿಸಬೇಕು. ಈ ಬಗ್ಗೆ ಸಂಬಂಧಿತ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು” ಎಂದು ಸೂಚಿಸಿದ್ದಾರೆ.
“ಜಿಲ್ಲೆಯಲ್ಲಿ ಅತೀವೃಷ್ಠಿ, ಪ್ರವಾಹದಿಂದ ಯಾವುದೇ ಅವಘಡಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ, ಪಂಚಾಯತ್ ಇಲಾಖೆ, ಪೊಲೀಸ್ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ನಿಯೋಜಿತ ಅಧಿಕಾರಿಗಳು ನಿರಂತರ ಮೇಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಬೇಕು. ಎಲ್ಲ ಅಧಿಕಾರಿ ನೌಕರರು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು” ಎಂದು ಸೂಚಿಸಿದ್ದಾರೆ.