ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಮಾಜಿ ಸಂಸದೆ, ಸ್ಯಾಂಡಲ್‌ವುಡ್ ನಟಿ ರಮ್ಯಾ ಬೆಂಬಲ ಸೂಚಿಸಿದ್ದು, “ರೈತರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕರುಣೆ ತೋರಿಸಬೇಕು” ಎಂದು ವಿನಂತಿಸಿದ್ದಾರೆ.
ದೇವನಹಳ್ಳಿ ಹೋರಾಟಕ್ಕೆ ಸಂಬಂಧಿಸಿ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಯ ಜೊತೆಗೆ ಟ್ವೀಟ್ ಮಾಡಿರುವ ರಮ್ಯಾ, “ಸಿಎಂ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಸ್ವಲ್ಪ ಕರುಣೆ ತೋರಿಸಿ, ಅವರಿಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ರೈತರ ಸಂಕಷ್ಟದ ಈ ಕಥೆ ಕರ್ನಾಟಕದ ರೈತರದ್ದಲ್ಲ, ದೇಶಾದ್ಯಂತ ಒಂದೇ ಆಗಿದೆ. ಕೈಗಾರಿಕೆಗಳು ಉದ್ಯೋಗಗಳನ್ನು ಸೃಷ್ಟಿಸುತ್ತವೆ, ಆದರೆ ರೈತರ ಜೀವನೋಪಾಯವನ್ನು ಸಹ ನಾವು ಖಚಿತಪಡಿಸಿಕೊಳ್ಳಬೇಕು” ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಏನಿದು ದೇವನಹಳ್ಳಿಯ ರೈತ ಹೋರಾಟ?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಫಲವತ್ತಾದ 1777 ಎಕರೆ ಕೃಷಿ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ಸರ್ಕಾರವು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದನ್ನು ವಿರೋಧಿಸಿ ಕಳೆದ 1180ಕ್ಕೂ ಹೆಚ್ಚು ದಿನಗಳಿಂದ 13 ಗ್ರಾಮಗಳ ರೈತರು ಹೋರಾಟ ನಡೆಸುತ್ತಿದ್ದಾರೆ.
ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿ ಹೊಮ್ಮಿರುವ ‘ಸಂಯುಕ್ತ ಹೋರಾಟ ಕರ್ನಾಟಕ’ವು ಕಳೆದ ಜೂನ್ 25ರಂದು ‘ದೇವನಹಳ್ಳಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಹೋರಾಟಕ್ಕೂ ಮುನ್ನ ಭೂ ಸ್ವಾಧೀನ ಕೈಬಿಡುವುದಾಗಿ ತಿಳಿಸಿತ್ತು. ಆದರೂ ದೇವನಹಳ್ಳಿ ಚಲೋ ಹೋರಾಟವನ್ನು ನಡೆಸಿದ್ದರಿಂದ ಹೋರಾಟಗಾರರನ್ನು ಬಂಧಿಸಿತ್ತು. ಆ ಬಳಿಕ ಸಿಎಂ ಬಳಿಗೆ ನಟ ಪ್ರಕಾಶ್ ರಾಜ್ ನೇತೃತ್ವದ ನಿಯೋಗವು ಭೇಟಿ ಮಾಡಿತ್ತು.
ಈ ವೇಳೆ ಮುಖ್ಯಮಂತ್ರಿಗಳು ಜುಲೈ 4ರಂದು ದೇವನಹಳ್ಳಿ ರೈತರೊಂದಿಗೆ ಸಭೆ ನಡೆಸಲು ಒಪ್ಪಿದ್ದಾರೆ ಎಂದು ಸಭೆಯ ನಂತರ ಪ್ರಕಾಶ್ ರಾಜ್ ಅವರು ತಿಳಿಸಿದ್ದರು.
“ಜುಲೈ 4ರಂದು ರೈತರೊಂದಿಗೆ ಸಭೆ ನಡೆಸುವ ಭರವಸೆ ಸಿಕ್ಕಿದೆ. ಅಲ್ಲಿಯವರೆಗೆ ರೈತರ ಹೋರಾಟವು ಫ್ರೀಡಂ ಪಾರ್ಕಿನಲ್ಲೂ ಮುಂದುವರಿಯಲಿದೆ. ಸಿ ಎಂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಜುಲೈ ನಾಲ್ಕರ ನಂತರ ಏನಾಗುತ್ತದೆ ಎಂಬುದರ ಮೇಲೆ ಮುಂದಿನ ಹೋರಾಟ ನಿಂತಿದೆ” ಎಂದು ಪ್ರಕಾಶ್ ರಾಜ್ ತಿಳಿಸಿದ್ದರು.
ಈ ಮಧ್ಯೆ, ಜುಲೈ 2ರಂದು (ಬುಧವಾರ) ಎರಡು ಪ್ರಮುಖ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಚನ್ನರಾಯಪಟ್ಟಣದ 13 ಹಳ್ಳಿಗಳ ಸಂತ್ರಸ್ತ ರೈತರು, “ನಮ್ಮ ಬದುಕು ಈ ಮಣ್ಣಿನಲ್ಲಿದೆ, ಈ ಮಣ್ಣಿನ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ” ಎಂಬ ಘೋಷವಾಕ್ಯದೊಂದಿಗೆ ದೇವನಹಳ್ಳಿಯ ನಾಡ ಕಚೇರಿ ಮುಂಭಾಗದಲ್ಲಿರುವ ಧರಣಿ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅದೇ ರೀತಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ‘ಭೂಮಿ ಸತ್ಯಾಗ್ರಹ’ದಲ್ಲಿ ಖ್ಯಾತ ನಟ ಪ್ರಕಾಶ್ ರೈ ಆದಿಯಾಗಿ ನಾಡಿನ ಅನೇಕ ಸಂವೇದನಾಶೀಲ ಕಲಾವಿದರು, ರಂಗಕರ್ಮಿಗಳು ಉಪವಾಸ ನಿರತ ರೈತರನ್ನು ಬೆಂಬಲಿಸಿ ಬೆಂಬಲ ಉಪವಾಸ ಸತ್ಯಾಗ್ರಹ’ ಕೂತಿದ್ದಾರೆ.
ಇದನ್ನು ಓದಿದ್ದೀರಾ? ಜುಲೈ 4ರ ಸಭೆ ನಿರ್ಣಾಯಕ, ಅಲ್ಲಿಯವರೆಗೆ ಹೋರಾಟ ಮುಂದುವರಿಯಲಿದೆ- ಪ್ರಕಾಶ್ ರಾಜ್
ಜುಲೈ 4ರಂದು ಸರ್ಕಾರ ರೈತ ಮುಖಂಡರು ಮತ್ತು ಹೋರಾಟಗಾರರೊಂದಿಗೆ ಕರೆದಿರುವ ಸಭೆಯು 1190 ದಿನಗಳ ಹೋರಾಟಕ್ಕೆ ಮಹತ್ವದ ತಿರುವು ನೀಡಲಿದೆ ಎಂದು ಹೋರಾಟ ಸಮಿತಿಯು ಹೇಳಿದೆ.