ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಜೆಡಿಯು ಕಚೇರಿಯಲ್ಲಿದ್ದು, ಈ ವಿಚಾರವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಿಹಾರ ವಿಧಾನಸಭೆ ವಿಪಕ್ಷ ನಾಯಕ ತೇಜಸ್ವಿ ಯಾದವ್ ಅಣಕಿಸಿದ್ದಾರೆ. ಹಾಗೆಯೇ ತೀಶ್ ಕುಮಾರ್ ಅವರಿಗೆ ವಿಶ್ವಾಸಾರ್ಹತೆಯ ಕೊರತೆ ಇದ್ದು, ಬಿಹಾರವನ್ನು ಇನ್ನು ಮುಂದೆ ನಿಭಾಯಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.
ಎನ್‌ಡಿಟಿವಿಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಯಾದವ್, “ನಿತೀಶ್ ಕುಮಾರ್ ಅವರಿಗೆ ಈಗ ಪ್ರಜ್ಞೆಯಿಲ್ಲ. ಹಾಗಾಗಿ ಈ ಹಿಂದೆ ಎಂದೂ ಕಾಣದ ಮೋದಿಜಿಯವರ ಫೋಟೋ ಈಗ ಜೆಡಿಯು ಕಚೇರಿಯಲ್ಲಿ ಕಾಣಿಸಿದೆ. ಇದೇ ಸಿಎಂ ಅವರು ಮೋದಿಯವರ ಕೈಕುಲುಕುವ ವಿಚಾರದಲ್ಲಿ ವಿವಾದದಲ್ಲಿದ್ದರು. ಈಗ ಅವರ ಕಚೇರಿಯಲ್ಲಿ ಮೋದಿ ಅವರ ಫೋಟೋ ಇದೆ” ಎಂದು ಯಾದವ್ ಲೇವಡಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಪ್ರತಿಪಕ್ಷಗಳಲ್ಲಿ ಪ್ರಧಾನಿ ಮೋದಿಗಿಂತ ಅನುಭವಿ ನಾಯಕರಿದ್ದಾರೆ: ತೇಜಸ್ವಿ ಯಾದವ್
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಿತೀಶ್ ಕುಮಾರ್ ಅವರು ನರೇಂದ್ರ ಮೋದಿ ಅವರ ಪಾದಕ್ಕೆ ನಮಸ್ಕರಿಸಲು ಮುಂದಾಗಿದ್ದರು. ಈ ವೇಳೆ ಪ್ರಧಾನಿ ನಿತೀಶ್ ಅವರ ಕೈ ಹಿಡಿದು ಹಸ್ತಲಾಘವ ಮಾಡಿದ್ದರು. ನಿತೀಶ್ ಅವರು ಮೋದಿ ಕಾಲಿಗೆ ನಮಸ್ಕಾರ ಮಾಡಲು ಹೋಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಿತೀಶ್ ಟ್ರೋಲ್‌ಗೆ ಒಳಗಾಗಿದ್ದರು.
ಬೇರೆ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾ, ಮೈತ್ರಿ ಮುರಿಯುತ್ತಾ ಬಂದಿರುವ ನಿತೀಶ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಯಾದವ್ ಟೀಕಿಸಿದರು. “ಮುಖ್ಯಮಂತ್ರಿಗಳು ನನ್ನನ್ನು ಕೆಲವರು ಒಂದೆಡೆ ಕರೆದೊಯ್ದು, ಮತ್ತೆ ಅವರೇ ಹಿಂದೆ ಕರೆತಂದರು ಎನ್ನುತ್ತಾರೆ. ಹಾಗಾದರೆ ಅವರು ಯಾವುದನ್ನೂ ಅವರ ಒಪ್ಪಿಗೆಯಿಂದ ಮಾಡಿಲ್ಲವೇ” ಎಂದು ಪ್ರಶ್ನಿಸಿದರು.
