ಹದಿಹರೆಯದ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆಯುವ ಕಡೆಗೆ ಮಾತ್ರ ಹೆಚ್ಚಿನ ಗಮನಹರಿಸಬೇಕು. ಆಸೆ, ಆಕರ್ಷಣೆಗಳಿಗೆ ಬಲಿಯಾಗಬಾರದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಂ ವಿಜಯ್ ಸಲಹೆ ನೀಡಿದ್ದಾರೆ.
ಚಿತ್ರದುರ್ಗದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಸರ್ಕಾರಿ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪದವಿಪೂರ್ವ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ‘ಪೋಕ್ಸೋ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳು’ ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಹದಿಹರೆಯದ ವಿದ್ಯಾರ್ಥಿಗಳ ಮನಸ್ಥಿತಿ ಯಾವಾಗಲೂ ಓದುವ ಕಡೆಗೆ ಮಾತ್ರ ಇರಬೇಕು. ಬೇರೆ ಯಾವುದೇ ಆಕರ್ಷಣೆ, ಆಸೆ- ಆಮಿಷಗಳಿಗೆ ಒಳಗಾಗಬಾರದು. ಉತ್ತಮ ಶಿಕ್ಷಣ ಪಡೆದು ತಂದೆ-ತಾಯಿ, ಸಮಾಜಕ್ಕೆ ಕೀರ್ತಿತರುವ ಮೂಲಕ ಸ್ವಾಸ್ಥ್ಯ ಜೀವನ ನಡೆಸಬೇಕು” ಎಂದು ಹೇಳಿದರು.
“ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಬದಲಾವಣೆಗಳಾಗುತ್ತವೆ. 16 ರಿಂದ 18 ವರ್ಷದ ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ತಪ್ಪು ದಾರಿ ಹಿಡಿದರೆ ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ” ಎಂದು ತಿಳಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಮಾತನಾಡಿ, “ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಯಂತಹ ಸ್ಪರ್ಧೆಗಳಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ಆಮಿಷಗಳಿಗೆ ಒಳಗಾಗಿ ಜೀವನ ಹಾಳುಮಾಡಿ ಕೊಳ್ಳಬಾರದು” ಎಂದು ಸಲಹೆ ನೀಡಿದರು.
“ವಿದ್ಯಾರ್ಥಿಗಳು ಬೇರೆ ಯಾವುದೇ ಆಸೆಗಳಿದ್ದರೂ, ತಂದೆ-ತಾಯಿಗಳ ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು. ಕಲಿಕೆಗೆ ಹೆಚ್ಚು ಕಟ್ಟು, ಉತ್ತಮ ಪ್ರಜೆಗಳಾಗಿ ಭವ್ಯ ಭಾರತದ ನಿರ್ಮಾಣದಲ್ಲಿ ತೊಡಗಬೇಕು. ಸನ್ಮಾರ್ಗಗಳ ಬೆಳೆವಣಿಗೆ ದೆಸೆಯಲ್ಲಿ ವಿದ್ಯಾರ್ಥಿಗಳು ಯೋಚಿಸಬೇಕು” ಎಂದರು.
ಪೋಕ್ಸೋ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಕೀಲ ಡಿ.ಎಂ.ಬಸವರಾಜ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಕಾರ್ಯದರ್ಶಿ ಆರ್.ಗಂಗಾಧರ್, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಡಾ.ಬಿ.ಕೃಷ್ಣಪ್ಪ, ಉಪನ್ಯಾಸಕರಾದ ಡಾ. ಬಿ.ಎಂ ಹೇಮಂತರಾಜು, ಕೆ ರೇಣುಕಾ, ಆರ್. ಚಂದ್ರಕಲಾ ಸೇರಿದಂತೆ ಮತ್ತಿತರರು ಇದ್ದರು.