ಐದು ವರ್ಷ ನಾನೇ ಮುಖ್ಯಮಂತ್ರಿ, ನಮ್ಮ ಸರ್ಕಾರ ಕಲ್ಲು ಬಂಡೆ ತರ ಇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಬಿರುಸಾಗಿ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡಿರುವುದು ಕುತೂಹಲ ಸೃಷ್ಟಿಸಿದೆ.
ನಂದಿಬೆಟ್ಟದಲ್ಲಿ ಬುಧವಾರ ನಡೆಯುತ್ತಿರುವ ಸಚಿವ ಸಂಪುಟ ಸಭೆಗೂ ಮುನ್ನ ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
“ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುತ್ತೇನೆ. ನಿಮಗೆ ಅನುಮಾನವೇ? ನಮ್ಮ ಸರ್ಕಾರ ಬಂಡೆ ತರ ಭದ್ರವಾಗಿದೆ ನಿಮಗ್ಯಾಕೆ” ಎಂದು ಮಾಧ್ಯಮದವರನ್ನು ಸಿಎಂ ಪ್ರಶ್ನಿಸಿದರು.
‘ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ. ಈ ಸರ್ಕಾರ ಪತನವಾಗಲಿದೆ’ ಎಂಬ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, “ಆರ್ ಅಶೋಕ್ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಅವರೇನು ನಮ್ಮ ಹೈಕಮಂಡಾ? ಬಿಜೆಪಿ-ಜೆಡಿಎಸ್‌ನವರು ಸುಳ್ಳು ಹೇಳುವುದರಲ್ಲಿ ಪರಿಣಿತರು. ಸತ್ಯ ಹೇಳುವುದು ಅವರಿಗೆ ಗೊತ್ತೇ ಇಲ್ಲ” ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಬಿಜೆಪಿ-ಕುಮಾರಸ್ವಾಮಿ ಜತೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಏನು ಮಾಡಿದ್ದಾರೆ ಎಲ್ಲವೂ ಗೊತ್ತಿದೆ. ಸುಳ್ಳು ಹೇಳಿಕೊಂಡು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವನ್ನು ಇವರಿಬ್ಬರು ನಡೆಸಿದ್ದಾರೆ. ಇದನ್ನು ಬಿಟ್ಟರೆ ಇವರು ಇನ್ನೇನೂ ಮಾಡಿಲ್ಲ” ಎಂದು ಕಿಡಿಕಾರಿದರು.
“ಬಿಜೆಪಿಯವರು ಜೆಡಿಎಸ್‌ನವರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಇವರು ಏನೂ ಮಾಡಲಿಲ್ಲ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳುವ ಹಾಗೆ ಏನು ಮಾಡಿದ್ದಾರೆ ಎಂಬುದರ ಸಾಕ್ಷಿಗುಡ್ಡೆ ಹಾಕಲಿ” ಎಂದರು.
ಜಾತಿಗಣತಿ: ಆನ್ ಲೈನ್ ಮೂಲಕ ಜಾತಿ ನಮೂದಿಸಬಹುದು
“ಜಾತಿ ಸಮೀಕ್ಷೆಯಲ್ಲಿ ತೊಂದರೆಗಳಾಗಿದ್ದರೆ ಆನ್ ಲೈನ್ ಮಾಡಲು ತೊಂದರೆಯಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಯಾವುದಾದರೂ ಒಂದು ದಾರಿಯಲ್ಲಿ ಜಾತಿ ಹೇಳಿಕೊಳ್ಳಬೇಕು. ಸಮೀಕ್ಷೆ ಮಾಡುವವರು ಮನೆಗೆ ಬಂದಾಗ ಅಥವಾ ಶಿಬಿರದಲ್ಲಿ ಅಥವಾ ಯಾವುದಾದರೂ ಒಂದು ವಿಧಾನದಲ್ಲಿ ಪರಿಶಿಷ್ಟರ ಜಾತಿ/ವರ್ಗ ಹೇಳಿಕೊಳ್ಳಬೇಕು. ಸಮೀಕ್ಷೆ ಮಾಡುವವರು ಮನೆ ಮನೆಗೆ ತೆರಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಕೆಲವರು ಸಾಮಾಜಿಕ ಕಳಂಕ ಇದ್ದರೆ ಆನ್ ಲೈನ್ ನಲ್ಲಿ ಜಾತಿಯ ಹೆಸರನ್ನು ದಾಖಲಿಸಬಹುದು” ಎಂದರು.
ಸಚಿವ ಸ್ಥಾನ :ವರಿಷ್ಠರಿಂದ ಅಂತಿಮ ತೀರ್ಮಾನ
“ಪ್ರಜಾಪ್ರಭುತ್ವದಲಿ ಎಲ್ಲರಿಗೂ ಸಚಿವರಾಗುವ ಅಧಿಕಾರವಿದೆ. ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. 142 ಜನ ನಮ್ಮ ಪಕ್ಷದವರಿದ್ದಾರೆ. 34 ಜನರನ್ನು ಮಾತ್ರ ಸಚಿವರನ್ನಾಗಿಸಬಹುದು. ಎಲ್ಲರನ್ನು ಮಾಡಲಾಗುವುದಿಲ್ಲ. ಶೇ.15% ಜನರನ್ನು ಮಾತ್ರ ಮಾಡಬಹುದು” ಎಂದರು.
ರಾಜ್ಯದ ಎಲ್ಲ ಕಂದಾಯ ವಿಭಾಗಗಳಲ್ಲಿ ಸಚಿವ ಸಂಪುಟ ಸಭೆ
“ರಾಜ್ಯದ ಎಲ್ಲ ಕಂದಾಯ ವಿಭಾಗಗಳಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕೆಂದು ತೀರ್ಮಾನಿಸಿ ಗುಲ್ಬರ್ಗಾ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೆಳಗಾವಿ ಹಾಗೂ ವಿಜಯಪುರದಲ್ಲಿ ಕೂಡ ನಡೆಸಲಾಗುವುದು. ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು ಕಂದಾಯ ವಿಭಾಗದ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ. ಬಜೆಟ್ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಸಣ್ಣಪುಟ್ಟ ಕೆಲಸಗಳಿದ್ದರೆ ಮಾಡಿ ಕೊಡಲಾಗುವುದು” ಎಂದು ತಿಳಿಸಿದರು.