ಬೀದರ್ ಜಿಲ್ಲಾದ್ಯಂತ ಕಳೆದ ವಾರದಿಂದ ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ನಗರದ ರಸ್ತೆಗಳು ಕಿತ್ತು ಹೋಗಿದ್ದು, ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬೀದರ್‌ನ ದೇವಿ ಕಾಲೋನಿಯ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಮಳೆ ನೀರು ಸಂಗ್ರಹವಾಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕ್ಯಾರೇ ಎನ್ನುತ್ತಿಲ್ಲ” ಎಂದು ಸ್ಥಳೀಯರು ಆರೋಪಿಸಿದರು.
“ಚಿದ್ರಿ ರಸ್ತೆಯ ಸಂಗಮೇಶ್ವರ ಕಾಲೋನಿಯಲ್ಲಿ ಸಿಸಿ ರಸ್ತೆಗಳು ಹದಗೆಟ್ಟಿದ್ದು, ಹಾಳಾಗಿವೆ. ರಸ್ತೆ ಮಧ್ಯೆ ಇರುವ ಗುಂಡಿಗಳು ಅಪಾಯಕ್ಕೆ ಆಹ್ವಾನಿಸುವಂತಿವೆ. ಕಾಲೋನಿಯ ನಿವಾಸಿಗಳು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಿರುಗಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗುಂಡಿ ಮುಚ್ಚಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

“ಬೀದರ್ ನಗರದಿಂದ ನೌಬಾದ್ ನಡುವಿನ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದ ಪರಿಣಾಮ ಜನರು ಸಂಚಾರಕ್ಕೆ ಹೈರಾಣಾಗುತ್ತಿದ್ದಾರೆ. ಕಳೆದ ಬೀದರ್ ಉತ್ಸವ ಸಂದರ್ಭದಲ್ಲಿ ನಗರದ ಹಲವೆಡೆ ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗಿತ್ತು. ಆದರೆ ವರ್ಷ ಕಳೆಯುವ ಮುನ್ನವೇ ರಸ್ತೆಗಳು ಕಿತ್ತು ಬಂದಿವೆ” ಎಂದು ನಾಗರಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭಾರೀ ಮಳೆ; ಸಂಕಷ್ಟದಲ್ಲಿರುವ ಕುಟುಂಬಗಳ ಆಸರೆಗೆ ಶಾಸಕ ಹರೀಶ್ ಸೂಚನೆ
“ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ನಗರ ಸಾರಿಗೆ ಬಸ್ ನಿಲ್ದಾಣದ ಎದುರು ರಸ್ತೆ ಗುಂಡಿ ಬಿದ್ದು ನೀರು ಸಂಗ್ರಹವಾಗಿದೆ. ಇದರಿಂದ ಜನರು ಓಡಾಡಲು ಪರದಾಡುತ್ತಿದ್ದಾರೆ. ನಗರದ ಹೃದಯ ಭಾಗವಾದ ನಗರ ಸಾರಿಗೆ ಬಸ್ ನಿಲ್ದಾಣ ಹೆಚ್ಚಿನ ಜನರು ಓಡಾಡುವ ಸ್ಥಳವಾಗಿದ್ದರೂ ನೈರ್ಮಲ್ಯ ಇಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಹಲವೆಡೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ, ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದ ಕಾರಣ ಗಬ್ಬು ನಾರುತ್ತಿರುವ ಪರಿಣಾಮ ನಿವಾಸಿಗಳು ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.