ಇಲ್ಲಿ ಬಹುಮುಖ್ಯವಾಗಿ ಎರಡು ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಒಂದನೆಯದು ರಶ್ಮಿಯವರಿಗೆ ತಾವು ಹೊರಿಸಿದ್ದ ಆರೋಪವನ್ನು ಸಮರ್ಥಿಸಿಕೊಂಡು ಅದನ್ನು ಸಾಬೀತುಪಡಿಸುವುದು. ಎರಡನೆಯದು ಕೃಷ್ಣಪ್ರಸಾದರಿಗೆ ತಮ್ಮ ಸಂಸ್ಥೆಯ ಪ್ರತಿಷ್ಠೆ ಹಾಳಾಗದಂತೆ ಅದರ ಭವಿಷ್ಯವನ್ನು ಉಳಿಸಿಕೊಳ್ಳುವುದು. ಈ ಎರಡು ದ್ವಂದ್ವಗಳ ನಡುವೆ ಖುಷ್ಬು ತಮ್ಮ ಅಭಿಪ್ರಾಯ ಬಿಜೆಪಿಯ ರಣೋತ್ಸಾಹಕ್ಕೆ ತಣ್ಣೀರೆರಚಿರುವುದು ಬಿಜೆಪಿಗರಿಗೆ ನುಂಗಲಾರದ ತುತ್ತಾಗಿದೆ
ಇತ್ತೀಚೆಗೆ ಉಡುಪಿಯ ಕಾಲೇಜೊಂದರಲ್ಲಿ ಮೂವರು ವಿದ್ಯಾರ್ಥಿನಿಯರು ಕಾಲೇಜು ಶೌಚಾಲಯದಲ್ಲಿ ಮೊಬೈಲ್ ಅನ್ನು ರಹಸ್ಯವಾಗಿರಿಸಿ ತಮ್ಮ ಸಹಪಾಠಿಯ ಖಾಸಗಿ ವಿಡಿಯೋ ಮಾಡಿದ್ದಾರೆಂಬ ವಿಷಯ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದು ಬೇಸರದ ಸಂಗತಿ. ಇಂತಹ ಕೆಟ್ಟ ಘಟನೆಗಳಿಗೆ ಪ್ರಜ್ಞಾವಂತರ ಜಿಲ್ಲೆಯೆನ್ನುವ ಹಣೆಪಟ್ಟಿಯಿರುವ ಉಡುಪಿ ಸಾಕ್ಷಿಯಾಗುತ್ತಿರುವುದು ಹೆಮ್ಮೆ ಪಡುವ ವಿಚಾರವೇನಲ್ಲ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಲಾಭ ಪಡೆಯುವ ಪ್ರಯತ್ನಗಳು ನಡೆಯುತ್ತಿರುವುದು, ಪರಸ್ಪರ ಕೆಸರೆರೆಚಾಟ ನಡೆಯುತ್ತಿರುವುದು ಕಂಡು ಬರುತ್ತಿದ್ದು, ಅದೀಗ ರಾಜ್ಯವ್ಯಾಪಿ ಪ್ರತಿಭಟನೆ ನಡೆಯುವ ಹಂತಕ್ಕೆ ಮುಟ್ಟಿದೆ. ಇದೇ ಸಮಯದಲ್ಲಿ ಪೋಲೀಸರು ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ, ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಒಂದೆಡೆ ಬಿಜೆಪಿ ಈ ಕುರಿತು ಪ್ರತಿಭಟನೆಯ ಮಾತನಾಡುತ್ತಾ, ಸಿದ್ದತೆ ನಡೆಸುತ್ತಿದ್ದರೆ ಇಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ, ಬಿಜೆಪಿ ನಾಯಕಿ ಖುಷ್ಬು ಸುಂದರ್ “ಈ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿ ಈಗಲೇ ತೀರ್ಪು ನೀಡಬೇಡಿ, ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರಿಕರಣಕ್ಕೆ ಸಂಬಂಧಿಸಿ ಇದುವರೆಗೆ ಪೋಲೀಸರಿಗೆ ಯಾವುದೇ ವಿಡಿಯೋ ಸಾಕ್ಷ್ಯ ಲಭ್ಯವಾಗಿಲ್ಲ…” ಎಂದು ಪ್ರಕರಣ ನಡೆದ ಕಾಲೇಜನ್ನು ಪರಿಶೀಲಿಸಿ, ತನಿಖೆ ನಡೆಸುತ್ತಿರುವ ಪೋಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿದ ಅನಂತರ ಹೇಳಿಕೆ ಕೊಟ್ಟಿದ್ದಾರೆ…! ಹಾಗಾದರೆ ಬಿಜೆಪಿಯವರು ಇಂದು ನಡೆಸುತ್ತಿರುವ ಉದ್ದೇಶಿಸಿರುವ ಪ್ರತಿಭಟನೆ ಯಾರ ವಿರುದ್ದ….?
ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿದ್ಯಾರ್ಥಿನಿಯ ವಿಡಿಯೋ ಮಾಡಿದ್ದರೇ ಅದು ಅಕ್ಷಮ್ಯ ಅಪರಾಧ. ಈ ಕೃತ್ಯವನ್ನು ಯಾರೇ ಮಾಡಿರಲಿ ಅದನ್ನು ಒಪ್ಪಿಕೊಳ್ಳುವ, ಬೆಂಬಲಿಸುವ ವಿಕೃತ ಮನಸ್ಸಿನವರು ಉಡುಪಿ ಜಿಲ್ಲೆಯಲ್ಲಾಗಲೀ, ರಾಜ್ಯದಲ್ಲಾಗಲೀ ಯಾರೂ ಇಲ್ಲ. ಏಕೆಂದರೆ ಸಂತೃಸ್ತ ವಿದ್ಯಾರ್ಥಿನಿ ಯಾರೇ ಆಗಿರಲಿ ಅವಳಿಗಾದ ನೋವು, ಭಯ, ಆತಂಕವನ್ನು ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇಂದಿನ ಕಾಲಮಾನದಲ್ಲಿ ಕ್ಷಣಾರ್ಧದಲ್ಲಿ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಲ್ಲೋ ಹರಿದಾಡುತ್ತವೆ. ಅದರಿಂದ ಆಕೆಯ ಭವಿಷ್ಯಕ್ಕೆ ಕಾರ್ಮೋಡ ಕವಿಯುವುದಷ್ಟೇ ಅಲ್ಲ ಕೆಲವು ಪುಂಡರು ಇಂತಹ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಹೊರಟರೆ ಆಕೆ ಬದುಕುವುದಾದರೂ ಹೇಗೆ…? ಆದರೆ ಇಂತಹ ಸಂದಿಗ್ಧ ಸ್ಥಿತಿ ಆ ವಿದ್ಯಾರ್ಥಿನಿಗೆ ಬಾರದಿರಲಿ ಎನ್ನುವ ಆಶಯ ಎಲ್ಲರದ್ದು.
ಇಂತಹ ಕೃತ್ಯ ಎಸಗಿದ್ದಾರೆ ಎನ್ನಲಾಗಿರುವ ಮೂವರು ವಿದ್ಯಾರ್ಥಿನಿಯರನ್ನು ಪೋಲೀಸರು ತನಿಖೆಗೊಳಪಡಿಸಿದ್ದಾರೆ. ಸತ್ಯ ಹೊರಬರಲಿದೆ, ಅದರ ಹಿಂದೆ ಯಾರಾದರೂ ಇದ್ದರೆ ಅದೂ ಕೂಡ ಬಯಲಾಗಲಿದೆ. ನಮಗೆಲ್ಲಾ ನಮ್ಮ ಪೋಲೀಸರ ಮೇಲೆ ಸಂಪೂರ್ಣ ನಂಬಿಕೆ ಇದೆ, ಆದರೆ ಅವರಿಗೆ ನಿಷ್ಪಕ್ಷಪಾತವಾಗಿ, ಒತ್ತಡ ರಹಿತವಾಗಿ ತನಿಖೆ ನಡೆಸಲು ಎಲ್ಲರೂ ಸಹಕರಿಸಬೇಕಿದೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಸಂತ್ರಸ್ತೆಯೂ ಹೆಣ್ಣುಮಗಳು, ಆರೋಪಿಗಳು ವಿದ್ಯಾರ್ಥಿನಿಯರು ಆಗಿರುವುದರಿಂದ ತುಂಬ ಸೂಕ್ಷ್ಮವಾಗಿ, ಜಾಗರೂಕತೆಯಿಂದ ಪ್ರಕರಣವನ್ನು ನಿಭಾಯಿಸುವ ಅವಶ್ಯಕತೆ ಇದೆ. ಹಾಗಾಗಿ ನಾವೆಲ್ಲ ಸಂಯಮ ಕಾಯ್ದುಕೊಂಡು, ತಪ್ಪಿತಸ್ತರಿಗೆ ಸರಿಯಾದ ಶಿಕ್ಷೆಯಾಗುವ ನಿಟ್ಟಿನಲ್ಲಿ ಪೋಲೀಸರೊಂದಿಗೆ ಸಹಕರಿಸಬೇಕಾಗಿದೆ.
ಇದನ್ನು ಓದಿ ಸುಳ್ಳು ಸುದ್ದಿ, ನಕಲಿ ನರೇಟಿವ್ ಹೆಚ್ಚಾಗಿದ್ದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದೇಕೆ?
ಇನ್ನು ಈ ಘಟನೆ ನಡೆದ ಹಾಗೂ ಈ ಕುರಿತು ಮೊದಲ ಬಾರಿ ಟ್ವೀಟರ್ ಮೂಲಕ ಗಮನ ಸೆಳೆದ ರಶ್ಮಿ ಕುರಿತು ಒಂದಷ್ಟು ವಿಚಾರ ತಿಳಿಯುವ ಅವಶ್ಯಕತೆ ಇದೆ. ಉಡುಪಿಯಲ್ಲಿರುವ ನೇತ್ರಜ್ಯೋತಿ ಕಾಲೇಜ್ ಆಫ್ ಆಪ್ತೋಮೆಟ್ರಿ ಆ್ಯಂಡ್ ಅಲೈಡ್ ಹೆಲ್ತ್ ಸಾಯನ್ಸ್ ಸಂಸ್ಥೆಯು ಹೆಸರಾಂತ ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಕುಡ್ಲು ಅವರದ್ದು. ಕರಾವಳಿ ಭಾಗದಲ್ಲಿ ಹೆಸರುವಾಸಿಯಾಗಿರುವ ಪ್ರಸಾದ ನೇತ್ರಾಲಯದ ವೈದ್ಯರಾಗಿರುವ ಕೃಷ್ಣಪ್ರಸಾದರು ಯಡಿಯೂರಪ್ಪನವರ ಅವಧಿಯಲ್ಲಿ ವಿಷನ್ ಕಮಿಟಿ ಅಧ್ಯಕ್ಷರಾಗಿದ್ದವರು. ರಶ್ಮಿ ಕೃಷ್ಣಪ್ರಸಾದ್ ಅವರು ನಿರ್ದೇಶಕರಾಗಿರುವ ಈ ಸಂಸ್ಥೆಯ ಆಡಳಿತಾಧಿಕಾರಿ ಅಬ್ದುಲ್ ಖಾದರ್…! ಕಾಕತಾಳೀಯವೆಂದರೆ ಈ ಪ್ರಕರಣದಲ್ಲಿ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರಿಕರಣ ಮಾಡಿದ್ದಾರೆನ್ನುವ ಆರೋಪ ಹೊತ್ತಿರುವ ಮೂವರು ವಿದ್ಯಾರ್ಥಿನಿಯರು ಕೂಡ ಮುಸ್ಲಿಮರು. ಹಾಗಾಗಿಯೇ ಆರೋಪಿಗಳನ್ನು ರಕ್ಷಿಸುವ ಕೆಲಸ ಆಗುತ್ತಿದೆ ಎನ್ನುವ ಆರೋಪವೂ ಕೂಡ ಕೇಳಿ ಬರುತ್ತಿದೆ. ಇದರ ಜೊತೆಗೆ ವಿಡಿಯೋ ಚಿತ್ರಿಕರಣ ನಡೆಸಿ ಅದರ ಮೂಲಕ ಲವ್ ಜಿಹಾದ್, ಮತಾಂತರಗಳಿಗೆ ಕುಮ್ಮಕ್ಕು ಕೊಡುವ ಸಂಘಟನೆಗಳು ಇಲ್ಲಿ ಸಕ್ರಿಯವಾಗಿವೆ ಎನ್ನುವ ಗಂಭೀರ ಆರೋಪವೂ ಕೂಡ ಕೇಳಿಬರುತ್ತಿದೆ. ಈ ಕುರಿತು ಪೊಲೀಸರು ಗಮನ ಹರಿಸಬೇಕಾಗಿದೆ.
ಬಲಪಂಥೀಯ ಸಂಘಟನೆಯ ಕೆಲವರು ಹೇಳುವಂತೆ ಡಾ. ಕೃಷ್ಣಪ್ರಸಾದರು ಬಿಜೆಪಿಯ ಪರವಾಗಿರುವವರು ಹಾಗಾಗಿ ಅವರನ್ನು ವಿಷನ್ ಕಮಿಟಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು, ಆದರೂ ಅವರು ತಮ್ಮ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಮುಸ್ಲಿಂ ವ್ಯಕ್ತಿಯನ್ನೇಕೆ ನೇಮಿಸಿಕೊಂಡಿದ್ದಾರೆ ಎನ್ನುವ ಪ್ರಶ್ನೆಗಳು ಈಗ ಹರಿದಾಡುತ್ತಿವೆ.
ಇದನ್ನು ಓದಿ ಉಡುಪಿ ವಿಡಿಯೋ ಪ್ರಕರಣಕ್ಕೆ ಕೋಮು ಆಯಾಮ ಬೆರೆಸಿದ ರಶ್ಮಿ ಸಮಂತ್ ಯಾರು ಗೊತ್ತೆ?
ಇದೇ ಸಮಯದಲ್ಲಿ ಈ ಘಟನೆಯನ್ನು ಮೊದಲ ಬಾರಿಗೆ ಟ್ವೀಟರ್ ಮೂಲಕ ಹಂಚಿಕೊಂಡ ರಶ್ಮಿ ಸಾಮಂತ್ ಅವರ ನಡೆಯ ಕುರಿತು ಪರ ವಿರೋಧದ ಚರ್ಚೆಗಳೂ ನಡೆಯುತ್ತಿವೆ. ಹಿಂದುತ್ವದ ಕುರಿತು ಮಾತನಾಡುವ ಈಕೆ ಉನ್ನತ ಶಿಕ್ಷಣ ಪಡೆದದ್ದು ಇಂಗ್ಲೆಂಡಿನ ಆಕ್ಸಫರ್ಡ್ ವಿಶ್ವವಿದ್ಯಾನಿಲಯದಲ್ಲಿ…! ಮೂಲತ: ಉಡುಪಿಯ ಮಣಿಪಾಲದವರಾದ ರಶ್ಮಿ ಹಿಂದೂ ಇಕಾನಾಮಿಕ್ ಫೋರಂನ ಕಾರ್ಯದರ್ಶಿ ದಿನೇಶ ಸಾಮಂತ್ ರ ಪುತ್ರಿಯಾಗಿರುವ ರಶ್ಮಿ ಮೆಕಾನಿಕಲ್ ಇಂಜಿನಿಯರ್ ಆಗಿದ್ದು, ಉತ್ತರ ಪ್ರದೇಶದ ಸಿ.ಎಂ ಯೋಗಿ ಆದಿತ್ಯನಾಥರಿಂದ ಹಿಡಿದು ಕೇಂದ್ರದ ಹಲವು ಬಿಜೆಪಿ ನಾಯಕರಿಗೆ ಆಪ್ತರಾಗಿರುವವರು. ದಿನೇಶ ಸಾಮಂತ್ ರು ಸಂಘ ಪರಿವಾರದಲ್ಲಿ ಸಾಕಷ್ಟು ಪ್ರಭಾವಿ ವ್ಯಕ್ತಿ. ಈ ಎಲ್ಲ ಕಾರಣದಿಂದಲೇ ರಶ್ಮಿ ಮಾಡಿದ ಒಂದು ಟ್ವೀಟರ್ ನೋಡಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಉಡುಪಿಗೆ ಲಘುಬಗೆಯಲ್ಲಿ ದೌಡಾಯಿಸಿದ್ದು. ಆದರೆ ಇಲ್ಲಿಗೆ ಬಂದ ಮೇಲೆ ಖುಷ್ಬುಗೆ ಇಲ್ಲಿನ ವಾಸ್ತವ ಅರ್ಥವಾಗಿದ್ದು. ಇದರ ಜೊತೆ ಡಾ. ಕೃಷ್ಣಪ್ರಸಾದ್ ಸಹ ಪ್ರಭಾವಿ ವ್ಯಕ್ತಿಯೇ, ಹಾಗಾಗಿಯೇ ಅವರು ಯಾರೇ ಬಂದರೂ ತಮ್ಮ ಕಾಲೇಜಿನಲ್ಲಿ ನಡೆದ ಘಟನೆಯ ಸವಿವರವನ್ನು ನೀಡಿ, ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದನ್ನು ಖುಷ್ಬು ಅವರಿಗೆ ಮನದಟ್ಟಾಗಿಸುವಲ್ಲಿ ಯಶಸ್ವಿಯಾದರು.

ಇಲ್ಲಿ ಬಹುಮುಖ್ಯವಾಗಿ ಎರಡು ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಒಂದನೆಯದು ರಶ್ಮಿಯವರಿಗೆ ತಾವು ಹೊರಿಸಿದ್ದ ಆರೋಪವನ್ನು ಸಮರ್ಥಿಸಿಕೊಂಡು ಅದನ್ನು ಸಾಬೀತುಪಡಿಸುವುದು, ಎರಡನೆಯದು ಕೃಷ್ಣಪ್ರಸಾದರಿಗೆ ತಮ್ಮ ಸಂಸ್ಥೆಯ ಪ್ರತಿಷ್ಠೆ ಹಾಳಾಗದಂತೆ ಅದರ ಭವಿಷ್ಯವನ್ನು ಉಳಿಸಿಕೊಳ್ಳುವುದು. ಈ ಎರಡು ದ್ವಂದ್ವಗಳ ನಡುವೆ ಖುಷ್ಬು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಪೋಲೀಸರ ತನಿಖೆಯು ಸರಿಯಾದ ನಿಟ್ಟಿನಲ್ಲಿದೆ ಹಾಗೂ ಇದಕ್ಕೆ ಕೋಮುಬಣ್ಣ ಹಚ್ಚುವುದು ಬೇಡ ಎಂದು ಬಿಜೆಪಿಯ ರಣೋತ್ಸಾಹಕ್ಕೆ ತಣ್ಣೀರೆರಚಿರುವುದು ಬಿಜೆಪಿಗರಿಗೆ ನುಂಗಲಾರದ ತುತ್ತಾಗಿದೆ.
ಪೊಲೀಸರು ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಿಸಿದ್ದು ಮಾತ್ರವಲ್ಲ ಕಾಲೇಜಿನ ವಿರುದ್ದವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಗುರುವಾರ ಉಡುಪಿ ಶಾಸಕರ ಯಶ್ಪಾಲ್ ಸುವರ್ಣರ ನೇತೃತ್ವದಲ್ಲಿ ಎಬಿವಿಪಿಯವರು ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮತ್ತೆ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿಕೆ ನೀಡಿದ್ದಾರೆ.
ಪ್ರಕರಣದ ಕುರಿತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ, ಬಿಜೆಪಿ ನಾಯಕಿ ಖುಷ್ಬು ಅವರು ಸ್ಪಷ್ಟೀಕರಣ ನೀಡಿ, ಕೋಮುಬಣ್ಣ ಹಚ್ಚಬೇಡಿ ಎಂದು ಹೇಳಿದ ನಂತರವೂ ಬಿಜೆಪಿ ಪ್ರತಿಭಟಿಸುವುದು ಯಾರ ವಿರುದ್ದ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ತನಿಖೆ ನಡೆಸುತ್ತಿರುವ ಪೊಲೀಸರ ವಿರುದ್ದವೇ…?
ವಿಡಿಯೋ ಮಾಡಿದ್ದರೆನ್ನಲಾದ ಮೂವರು ವಿದ್ಯಾರ್ಥಿನಿಯರ ವಿರುದ್ದವೇ…?
ಆರೋಪಿಗಳ ಧರ್ಮದ ವಿರುದ್ದವೇ..?
ಈ ಕೃತ್ಯ ನಡೆದರೂ ದೂರು ದಾಖಲಿಸದ ನೇತ್ರಜ್ಯೋತಿ ಕಾಲೇಜಿನ ವಿರುದ್ದವೇ…?
ವಿಡಿಯೋ ಮಾಡಿರುವುದಕ್ಕೆ ಸಾಕ್ಷ್ಯವಿಲ್ಲ ಎಂದಿರುವ ಖುಷ್ಬು ವಿರುದ್ದವೇ…?
ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿರುವ ರಾಜ್ಯ ಸರಕಾರದ ವಿರುದ್ದವೇ…?
ಈ ಕುರಿತು ಪ್ರತಿಭಟಿಸುತ್ತಿರುವ ಬಿಜೆಪಿಗರಲ್ಲಿ ಸ್ಪಷ್ಟತೆ ಇದೆಯೇ…? ಏಕೆಂದರೆ ಕರಾವಳಿಯಲ್ಲಿ ಧರ್ಮದ ಸಂಘರ್ಷ ಕೇವಲ ಬಡ ಮತ್ತು ಮಧ್ಯಮ ವರ್ಗದವರಿಗೆ ಮಾತ್ರ…! ಸಂಘ ಪರಿವಾರದ ಹಲವು ಶ್ರೀಮಂತ ಉದ್ಯಮಿಗಳ ವ್ಯಾವಹಾರಿಕ ಪಾಲುದಾರರು ಮುಸ್ಲಿಂ ಉದ್ಯಮಿಗಳು…! ಬಿಜೆಪಿ ನಾಯಕರ ಜೊತೆ ಉದ್ಯಮದ ಪಾಲುದಾರರಾಗಿ ಹಲವು ಶ್ರೀಮಂತ ಮುಸ್ಲಿಮರಿದ್ದಾರೆ…! ಇರಲಿ ಸಂತೋಷ, ಆದರೆ ಇಷ್ಟಾಗಿಯೂ ನೀವ್ಯಾಕೆ ಕಾರ್ಯಕರ್ತರಲ್ಲಿ, ಜನಸಾಮಾನ್ಯರಲ್ಲಿ ಕೋಮುದ್ವೇಷ ಹಚ್ಚಲು ಪ್ರಯತ್ನಿಸುತ್ತಿದ್ದೀರಿ…?
ನೀವು ಬೀದಿಯಲ್ಲಿ ನಿಂತು ಹೋರಾಟ ಮಾಡುವುದು ಬಡ ಮುಸ್ಲಿಮರ ವಿರುದ್ದ ಅಷ್ಟೇ…! ಈಗಲಾದರೂ ಹಿಂದೂ ಮುಸ್ಲಿಂ ಎನ್ನುವ ಭೇದಭಾವ ಬಿಟ್ಟು ಸಂತ್ರಸ್ತ ವಿದ್ಯಾರ್ಥಿನಿ ನಮ್ಮ ಮನೆಮಗಳೆಂದು ಅವಳಿಗೆ ಧೈರ್ಯ ತುಂಬಿವ ಕೆಲಸ ಮಾಡಬೇಕಾಗಿದೆ. ಹಾಗೆಯೇ ಆರೋಪಿತರು ಮುಸ್ಲಿಂ ಧರ್ಮದವರೆನ್ನುವ ವಿಚಾರಕ್ಕಿಂತ ಅವರ ಕೃತ್ಯಕ್ಕೆ ನಿಜವಾದ ಕಾರಣ ಏನು..? ಅದರ ಹಿಂದೆ ಯಾರಾದರೂ ಇದ್ದಾರೆಯೇ…? ಈ ಮೂಲಕ ಲವ್ ಜಿಹಾದ್ ಸೇರಿದಂತೆ ಯಾವುದಾದರೂ ಮತಾಂತರದ ಷಡ್ಯಂತ್ರ ಇದೆಯೇ…? ಎಂಬಿತ್ಯಾದಿ ಗಂಭೀರ ಅಂಶಗಳು ಬಯಲಾಗಬೇಕಿದೆ. ಇಲ್ಲಿ ತಪ್ಪಿತಸ್ಥರನ್ನು ಕ್ಷಮಿಸುವ ಅವಶ್ಯಕತೆಯಿಲ್ಲ. ಏಕೆಂದರೆ ಇದು ಮಹಿಳಾ ದೌರ್ಜನ್ಯ ಮಾತ್ರವಲ್ಲ ಒಂದು ಹೆಣ್ಣು ಮಗುವಿನ ಭವಿಷ್ಯದ ಪ್ರಶ್ನೆ. ಹಾಗೆಯೇ ಆರೋಪಿಗಳ ಸಂಪೂರ್ಣ ತನಿಖೆಯಾಗದೇ ಅವರನ್ನು ಅಪರಾಧಿಗಳೆಂದು ತೀರ್ಪು ನೀಡುವ ಕೆಲಸವೂ ಒಪ್ಪತಕ್ಕದ್ದಲ್ಲ. ಇನ್ನು ಮುಂದೆ ಇಂತಹ ಹೇಯಕೃತ್ಯಗಳು ಮರುಕಳಿಸದಂತೆ ತಡೆಯಲು ಸರಕಾರಕ್ಕೆ ದೊರೆತಿರುವ ಅವಕಾಶವಿದು ಎಂದು ಭಾವಿಸಿ, ನಿಷ್ಪಕ್ಷಪಾತ ತನಿಖೆ ಪೊಲೀಸರಿಂದ ನಡೆಯಲಿ ಎನ್ನುವ ಆಶಯ ಪ್ರಜ್ಞಾವಂತರದ್ದು.
