ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿರುವ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧ ಎಪ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮೈಸೂರಿನ ‘ಒಡನಾಡಿ’ ಸಂಸ್ಥೆಯ ಪರಶುರಾಮ್ ಎಂ.ಎಲ್. ಮತ್ತು ಸ್ಟ್ಯಾನ್ಲಿ ಕೆ.ವಿ. ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ ಹೀಗಿದೆ
ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಬಿಜೆಪಿಯ ಎನ್.ರವಿಕುಮಾರ್ ರವರು ಹೇಳಿಕೆ ನೀಡಿರುವ ದ್ವಂದ್ವ ಮಾತುಗಳು ಆಶ್ಚರ್ಯ ಹಾಗೂ ಅಸಹನೀಯವಾಗಿದೆ. ಇವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತಾವು ದಯಮಾಡಿ ಈ ನಿಟ್ಟಿನಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಕೋರುತ್ತಿದ್ದೇವೆ. ಇವರ ಹೇಳಿಕೆಯು ರಾಜ್ಯದಲ್ಲಿ ಉದ್ಯೋಗ ಮಾಡುತ್ತಿರುವ ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತರುವಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗುತ್ತದೆ. ತಾವು ದಯಮಾಡಿ ಈ ವಿಚಾರದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಎನ್ ರವಿಕುಮಾರ್ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.
ಮುಖ್ಯವಾಗಿ ಸಾಮಾಜಿಕ ಹೋರಾಟದ ಮುಂಚೂಣಿಯಲ್ಲಿರುವ ಒಡನಾಡಿ ಸಂಸ್ಥೆಯು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ 35 ವರ್ಷಗಳಿಂದ ಮಹಿಳೆಯರ ಸಶಕ್ತತೆ ಹಾಗೂ ಅವರ ಘನತೆಯುಕ್ತ ಜೀವನ ಕಟ್ಟಿಕೊಡುವಲ್ಲಿ ಶ್ರಮಿಸುತ್ತಿದೆ. ಇವರ ಹೇಳಿಕೆಯು ಮಹಿಳೆಯರ ಘನತೆಯನ್ನು ಕುಗ್ಗಿಸುವಂತಲ್ಲದೇ ಆತಂಕವನ್ನು ಸೃಷ್ಟಿಸುವಂತಾಗಿದೆ. ತಾವು ದಯಮಾಡಿ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಇದರೊಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಲಿಂಕ್ ಅನ್ನು ಲಗತ್ತಿಸಲಾಗಿದೆ.
https://www.facebook.com/share/p/1ZiquTtRut/.
ಪತ್ರದ ಪ್ರತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಉಚ್ಚ ನ್ಯಾಯಾಲಯ, ಕರ್ನಾಟಕ ಇವರಿಗೂ ಕಳಿಸಲಾಗಿದೆ.
ಇದನ್ನೂ ಓದಿ ‘ಶಾಲಿನಿ ರಜನೀಶ್ ಹಗಲು ಸಿಎಂಗೆ, ರಾತ್ರಿ ಸರ್ಕಾರಕ್ಕೆ ಕೆಲಸ’: ನಾಲಿಗೆ ಹರಿಬಿಟ್ಟ ಬಿಜೆಪಿಯ ಎನ್ ರವಿಕುಮಾರ್
