ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ (ಜು.2) ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದ ಬೆಂಗಳೂರು ಕಂದಾಯ ವಿಭಾಗದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಆ ಭಾಗದ ಪ್ರಮುಖ ವಿಚಾರವಾದ ‘ದೇವನಹಳ್ಳಿ ಭೂಸ್ವಾಧೀನ’ ಸಂಗತಿಯೇ ಚರ್ಚೆಗೆ ಬರಲಿಲ್ಲ.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತಮ್ಮ ಪರವಾದ ನಿರ್ಣಯಕ್ಕೆ ಬರಲು ನೈತಿಕ ಬೆಂಬಲ ತುಂಬುವ ಸಲುವಾಗಿ ಚನ್ನರಾಯಪಟ್ಟಣದ 13 ಹಳ್ಳಿಗಳ ಸಂತ್ರಸ್ತರು “ನಮ್ಮ ಬದುಕು ಈ ಮಣ್ಣಿನಲ್ಲಿದೆ, ಈ ಮಣ್ಣಿನ ಮಕ್ಕಳ ಬವಿಷ್ಯ ನಿಮ್ಮ ಕೈಯಲ್ಲಿದೆ” ಎಂದು ಚನ್ನರಾಯಪಟ್ಟಣ ನಾಡ ಕಚೇರಿ ಮುಂದೆ ಉಪವಾಸ ಧರಣಿ ಕುಳಿತಿದ್ದರೂ ಸರ್ಕಾರ ರೈತರ ಬಗ್ಗೆ ಸಂಪುಟ ಸಭೆಯಲ್ಲಿ ತುಟಿಬಿಚ್ಚಲಿಲ್ಲ.
‘ದೇವನಹಳ್ಳಿ ಚಲೋ’ ವೇಳೆ ಪ್ರಗತಿಪರ ಚಿಂತಕರು, ನಟರೂ, ಸಾಹಿತಿಗಳು, ಕಲವಿದರೂ ಸೇರಿದಂತೆ ಎಲ್ಲರೂ ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಜುಲೈ 4ರಂದು ಸರ್ಕಾರ ರೈತಮುಖಂಡರ, ಹೋರಾಟಗಾರರ ಸಭೆ ಕರೆದಿದೆ. ಶುಕ್ರವಾರದ ಸಭೆಯಲ್ಲಾದರೂ ಸರ್ಕಾರ ರೈತರ ಬೇಡಿಕೆ ಈಡೇರಿಸುತ್ತಾ ಕಾದುನೋಡಬೇಕು.
ಸಚಿವ ಸಂಪುಟದ ತೀರ್ಮಾನಗಳು
ಶೇ.90 ರಷ್ಟು ಬೆಂಗಳೂರು ವಿಭಾಗದ ವಿಷಯಗಳನ್ನೇ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ಒಟ್ಟು 48 ವಿಷಯಗಳು ಚರ್ಚೆಯಾದವು. ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ನೀರಾವರಿ, ಪ್ರವಾಸೋದ್ಯಮ, ರಸ್ತೆ- ಸೇತುವೆ ಮುಂತಾದ ವಿಷಯಗಳಿಗೆ ಆದ್ಯತೆ ನೀಡಿ, 3400 ಕೋಟಿ ರೂ.ಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ವ್ಯಾಲಿಗಳ ಹೆಸರಲ್ಲಿ ವಂಚನೆ: ಆಂಜನೇಯ ರೆಡ್ಡಿ
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅವರು ಸಚಿವ ಸಂಪುಟ ಸಭೆ ಬಗ್ಗೆ ಪ್ರತಿಕ್ರಿಯಿಸಿದ್ದು, “ಪಂಚ ನದಿಗಳು ಉಗಮವಾಗುವ ಐತಿಹಾಸಿಕ ನಂದಿ ಗಿರಿಧಾಮಕ್ಕೆ ಬಂದರೂ, ಯಾವುದೇ ವಿಶೇಷ ಘೋಷಣೆಗಳಿಲ್ಲದೆಯೇ ಸಿದ್ದರಾಮಯ್ಯನವರ ಸಚಿವ ಸಂಪುಟ ಸಭೆ ಮುಗಿದಿದೆ. ಸುರಕ್ಷಿತ ಕುಡಿಯುವ ನೀರು ಮತ್ತು ಕೃಷಿಗೆ ನೀರಾವರಿ ಭದ್ರತೆ ನಮ್ಮ ಸಾಂವಿಧಾನಿಕ ಹಕ್ಕು, ಎತ್ತಿನಹೊಳೆ ಹೆಸರಲ್ಲಿ ಮೋಸ , ವ್ಯಾಲಿಗಳ ಹೆಸರಲ್ಲಿ ವಂಚನೆ ಮುಂದುವರೆದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ನೀರಿನ ಮೂಲಗಳೇ ನಾಶವಾಗಿ ನಮ್ಮ ಆರೋಗ್ಯ, ಆದಾಯ ಬುಡಮೇಲಾಗಿ ಸಾಮಾಜಿಕ ಅಭದ್ರತೆ ಕಾಡುತ್ತಿದ್ದರೂ, ಸ್ಪಂದಿಸದ ಸರ್ಕಾರವು ಬಯಲುಸೀಮೆಯ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಸರ್ಕಾರವು ಸಂಪೂರ್ಣವಾಗಿ ಬರಪೀಡಿತ ಜಿಲ್ಲೆಗಳ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ತಾರತಮ್ಯ ಮಾಡುತ್ತಿರುವ ಸರ್ಕಾರದ ಮೇಲೆ ಭರವಸೆಯಿಟ್ಟು ಮತ್ತಷ್ಟು ಕಾಲ ಕಾಯಲು ಸಾಧ್ಯವಿಲ್ಲ, ಜಿಲ್ಲೆಗಳು ಸರ್ವನಾಶವಾಗುವ ಮೊದಲೇ ಎಚ್ಚರಗೊಳ್ಳುವಂತೆ ಜನರನ್ನು ಜಾಗೃತಗೊಳಿಸುತ್ತೇವೆ. ನಮ್ಮ ಮುಂದಿನ ಪೀಳಿಗೆಗಳ ಉಳಿವಿಗಾಗಿ ಉಗ್ರ ಹೋರಾಟ ಅನಿವಾರ್ಯ” ಎಂದು ಎಚ್ಚರಿಸಿದ್ದಾರೆ.