ಹೊಸ ಕಟ್ಟಡಕ್ಕೆ ಆಗ್ರಹಿಸಿ ಕಂಚುಗಾರನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಉಳಿಸಲು ಗ್ರಾಮಸ್ಥರು ಸತತ ಎರಡನೇ ದಿನವೂ ತಮ್ಮ ಹೋರಾಟವನ್ನು ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿಸಿದ ಸ್ಥಳಕ್ಕೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ (BEO) ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ (EO) ಭೇಟಿ ನೀಡಿ ಪ್ರೌಢಶಾಲೆ ಮೇಲೆ ತಾತ್ಕಾಲಿಕ ಕೊಠಡಿಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದರೂ ಮಣಿಯದೆ ಹೋರಾಟ ಮುಂದುವರೆಸಿದಾಗ ಹೋರಾಟದ ತೀವ್ರತೆ ತಿಳಿದ ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಪೋನ್ ಮೂಲಕ ಸಂಪರ್ಕಿಸಿ ಸೋಮವಾರದೊಳಗೆ ಹೊಸ ಶಾಲಾ ಕಟ್ಟಡದ 2 ಕೊಠಡಿಗಳಿಗೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು. ಈ ಹೇಳಿಕೆಯನ್ನು ಗ್ರಾಮಸ್ಥರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ತಿಳಿಸಿದರು.

ಇದಕ್ಕೆ ಮುನ್ನ ಕಂಚುಗಾರನಹಳ್ಳಿ ಗ್ರಾಮಸ್ಥರು, ಪೋಷಕರು ಮತ್ತು ಸ್ಥಳೀಯ ಯುವಕರು ಪ್ರತಿಭಟನೆ ತೀವ್ರಗೊಳಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ತಾತ್ಕಾಲಿಕ ಪರಿಹಾರ ನೀಡುವುದಾಗಿ ತಿಳಿಸಿದರು. ಆದರೆ ಗ್ರಾಮಸ್ಥರು ಹೊಸ ಕಟ್ಟಡ ಮಂಜೂರಾಗಬೇಕೆಂಬ ತಮ್ಮ ಬೇಡಿಕೆಗೆ ದೃಢವಾಗಿ ನಿಂತು, ಮೌಖಿಕ ಭರವಸೆ ಅಥವಾ ತಾತ್ಕಾಲಿಕ ವ್ಯವಸ್ಥೆಗಳನ್ನು ನಿರಾಕರಿಸಿದರು.
ಪರಿಹಾರ ನೀಡದೇ ಶಾಲೆಯಿಂದ ಹೊರಟಾಗ ಗ್ರಾಮಸ್ಥರು ಅಧಿಕಾರಿಗಳನ್ನು ಅಡ್ಡಗಟ್ಟಿದರು. ವಿಷಯ ತಿಳಿದು ಜನರ ಒತ್ತಾಯಕ್ಕೆ ಮಣಿದು ದೂರವಾಣಿ ಕರೆ ಮೂಲಕ ಮಾತನಾಡಿದ ಮಾಯಕೊಂಡ ಸ್ಥಳಿಯ ಶಾಸಕ ಬಸವಂತಪ್ಪ ಕರೆ ಮಾಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮಕ್ಕೆ ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭದ್ರಾ ಬಲದಂಡೆಯಿಂದ ಕುಡಿಯುವ ನೀರು ಹರಿಸಲು ಐಐಎಸ್‌ಸಿ ವರದಿ, ನಾಲೆ ಜಲಾಶಯಕ್ಕೆ ತೊಂದರೆ ಇಲ್ಲ
ನಂತರ ಪೋಷಕರು ಮತ್ತು ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಯ ಮುಖಂಡರು ಸಭೆ ನಡೆಸಿ ಸೋಮವಾರದವರೆಗೆ ಕಾಯಲು ನಿರ್ಧರಿಸಿದರು. ಭರವಸೆಯಂತೆ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾದರೆ, ವಿಜಯೋತ್ಸವ ಆಚರಿಸಲಾಗುವುದು, ಇಲ್ಲವಾದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.